ಮಾದರಿ ಹೀರೋ ಆಗಿ ಮಾತ್ರವಲ್ಲ, ವಿಲನ್ ಆಗಿಯೂ ಅಣ್ಣಾವ್ರು ನಟಿಸಿದ ಟಾಪ್ ಸಿನಿಮಾಗಳು!

First Published Apr 24, 2024, 11:17 AM IST

ಡಾ. ರಾಜ್‌ಕುಮಾರ್‌  ಅವರು ಯಾವುದೇ ಪಾತ್ರಕೊಟ್ಟರೂ ಅದರಲ್ಲಿ ಸಂಪೂರ್ಣವಾಗಿ ಪ್ರವೇಶ ಮಾಡಿ, ನಟಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ರಾಜ್‌ಕುಮಾರ್‌ ಅವರು ಕೇವಲ ಹೀರೋ ಆಗಿ ಮಾತ್ರವಲ್ಲ ವಿಲ್ಲನ್ ಆಗಿ ಸಹ ಅದ್ಭುತ ಅಭಿನಯ ಮಾಡಿದ್ದಾರೆ. 
 

ಡಾ. ರಾಜ್‌ಕುಮಾರ್‌ (Dr. Rajkumar)  ಎಂದ ಕೂಡಲೇ ನೆನಪಾಗೋದು ಅವರು ನಾಯಕನಾಗಿ ಅಭಿನಯಿಸಿದ ಸಾಲು, ಸಾಲು ಚಿತ್ರಗಳು. ಪ್ರತಿಯೊಂದು ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ವರನಟ ಡಾ. ರಾಜ್‌ಕುಮಾರ್‌ ಖಳನಟನ ಪಾತ್ರದಲ್ಲೂ ಅಭಿನಯಿಸಿ, ಸೈ ಎನಿಸಿಕೊಂಡಿದ್ದರು. ಇಂದು ಡಾ. ರಾಜ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಯಾವೆಲ್ಲಾ ಸಿನಿಮಾದಲ್ಲಿ ಅವರು ಖಳನಟನಾಗಿ ಅಭಿನಯಿಸಿದ್ದರು ನೋಡೋಣ. 
 

ಭೂಕೈಲಾಸ
1958ರಲ್ಲಿ ಕೆ. ಶಂಕರ್‌ ನಿರ್ದೇಶನದ ಭೂ ಕೈಲಾಸ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್‌ ರಾವಣನ ಪಾತ್ರಕ್ಕೆ ಜೀವ ತುಂಬಿದ್ದರು. ಇಂದ್ರನ ಲೋಕವನ್ನು ಗೆಲ್ಲಲು ಹೊರಡುವ ರಾವಣನಾಗಿ ಡಾ. ರಾಜ್ ಅವರ ಪಾತ್ರವು ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಉಗ್ರ ರೂಪ ತಾಳಿದ್ದು ಬಹುತೇಕ ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರಗಳಲ್ಲಿ ಅನ್ನೋದನ್ನು ಮರೀಬಾರದು.

ಮಹಿಷಾಸುರ ಮರ್ದಿನಿ
1959ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ರಾಜ್‌ಕುಮಾರ್‌ಮಹಿಷಾಸುರನಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಸಾಹುಕಾರ್ ಜಾನಕಿ, ಉದಯಕುಮಾರ್ ಮೊದಲಾದವರು ನಟಿಸಿದ್ದರು. ಅಲ್ಲದೇ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಡಾ. ರಾಜ್‌ಕುಮಾರ್‌ ಹಾಡಿ, ಹಿನ್ನೆಲೆ ಗಾನಯಕ್ಕೂ ಸೈ ಅನಿಸಿಕೊಂಡಿದ್ದು. 

ದಶಾವತಾರ
1960 ರಲ್ಲಿ ಬಿಡುಗಡೆಯಾದ ಈ ಪೌರಾಣಿಕ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್‌ ಅವರು ಜಯ, ಹಿರಣ್ಯಕಶಿಪು, ರಾವಣ, ಶಿಶುಪಾಲನಾಗಿ ಕಾಣಿಸಿಕೊಂಡಿದ್ದರು. ಈ ಎಲ್ಲಾ ಪಾತ್ರಗಳೂ ನೆಗೆಟಿವ್ ಶೇಡ್ ನಲ್ಲಿದ್ದವು. ಅಬ್ಬಾ, ಡಾ. ರಾಜ್ ತಮ್ಮ ಕಣ್ಣಲ್ಲೇ ಉಗ್ರ ರೂಪವನ್ನು ತೋರಿಸಿ, ಎಂಥ ಪಾತ್ರಗಳನ್ನೂ ಬೇಕಾದರೂ ನಿರರ್ಗಳವಾಗಿ ಅಭಿನಯಿಸಬಹುದು ಎಂಬುದನ್ನು ಪ್ರೂವ್ ಮಾಡಿದರು.  

ಸತಿ ಶಕ್ತಿ
1963ರಲ್ಲಿ ಬಿಡುಗಡೆಯಾದ ಸತಿ ಶಕ್ತಿ ಸಿನಿಮಾದಲ್ಲಿ  ಡಾ. ರಾಜ್‌ಕುಮಾರ್‌ ಮಂತ್ರವಾದಿಯಾಗಿ ತಮ್ಮ ಕಲಾ ನೈಪುಣ್ಯ ಪ್ರದರ್ಶಿಸಿದ್ದರು. ಇದೂ ಅಣ್ಣಾವ್ರು ಡಬಲ್‌ ಆಕ್ಟಿಂಗ್‌ನಲ್ಲಿ ನಟಿಸಿದ ಸಿನಿಮಾ. ರಕ್ತಾಕ್ಷ ಮತ್ತು ವಿರೂಪಾಕ್ಷನಾಗಿ ತಮ್ಮ ಉಗ್ರ ರೂಪ ಪ್ರದರ್ಶಿಸಿದ್ದರು. ಈ ಸಿನಿಮಾವನ್ನು ಕಣಗಲ್ ಪ್ರಭಾಕರ್ ಶಾಸ್ತ್ರೀ ನಿರ್ದೇಶಿಸಿದ್ದರು. 

ಮೋಹಿನಿ ಭಸ್ಮಾಸುರ
1966ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ರಾಜ್‌ಕುಮಾರ್‌ ಭಸ್ಮಾಸುರನ ಪಾತ್ರಕ್ಕೆ ಜೀವ ತುಂಬಿದ್ದರು. ಇದೂ ನೆಗೆಟಿವ್‌ ಪೌರಾಣಿಕ ಪಾತ್ರವಾಗಿತ್ತು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. 

ಹೃದಯ ಸಂಗಮ
1972 ರಲ್ಲಿ ಬಿಡುಗಡೆಯಾದ ಹೃದಯ ಸಂಗಮ ಸಿನಿಮಾದಲ್ಲೂ ಸಹ ಡಾ. ರಾಜ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಕೇವಲ ಮೂರು ನಿಮಿಷಗಳ ಕಾಲ ನೆಗೆಟೀವ್ ರೋಲ್‌ನಲ್ಲಿ ಡಾ. ರಾಜ್ ಅಭಿನಯಿಸಿದ್ದರು. ಅಷ್ಟರಲ್ಲೇ ತಮ್ಮ ಅಭಿನಯ ಕೌಶಲ್ಯ ಹೇಗಿದೆ ಎಂಬುದನ್ನು ಅಣ್ಣಾವ್ರು ಪ್ರೂವ್ ಮಾಡಿದ್ದರು. 

ದಾರಿ ತಪ್ಪಿದ ಮಗ
1975ರಲ್ಲಿ ಬಿಡುಗಡೆಯಾದ ದಾರಿತಪ್ಪಿದ ಮಗ ಸಿನಿಮಾದಲ್ಲಿ ಡಾ. ರಾಜ್ ದ್ವಿಪಾತ್ರಗಳಲ್ಲಿ ನಟಿಸಿದ್ದರು. ಪ್ರಕಾಶ್ ಮತ್ತು ಪ್ರಸಾದ್ ಪಾತ್ರದಲ್ಲಿ ರಾಜ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಂದೆ ತಾಯಿಯಿಂದ ಬೇರ್ಪಟ್ಟು ರೌಡಿ, ಕಳ್ಳನಾಗಿ ಬೆಳೆಯುವ ಪ್ರಕಾಶ್ ಪಾತ್ರದಲ್ಲಿನ ಡಾ ರಾಜ್ ನಟನೆ ಭಾರಿ ಹೆಸರು ಮಾಡಿತ್ತು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. 
 

ನಾನೊಬ್ಬ ಕಳ್ಳ 
1979ರಲ್ಲಿ ಬಿಡುಗಡೆಯಾದ ನಾನೊಬ್ಬ ಕಳ್ಳ ಸಿನಿಮಾದಲ್ಲಿ ಹೆಸರೇ ಹೇಳುವಂತೆ ಡಾ. ರಾಜ್ ನೆಗೆಟೀವ್ ಪಾತ್ರ ಅಂದರೆ ಕಳ್ಳನ ಪಾತ್ರದಲ್ಲಿ ನಟಿಸಿದ್ದರು. ದೊರೈ ಭಗವಾನ್ ನಿರ್ದೇಶನದ ಈ ಸಿನಿಮಾದಲ್ಲೂ ಡಾ. ರಾಜ್ ದ್ವಿಪಾತ್ರದಲ್ಲಿ ನಟಿಸಿದ್ದರು. 
 

ಭಕ್ತ ಪ್ರಹ್ಲಾದ
1983ರಲ್ಲಿ ಬಿಡುಗಡೆಯಾದ ಡಾ. ರಾಜ್‌ಕುಮಾರ್‌  ಮತ್ತು ಪುನೀತ್ ರಾಜ್‌ಕುಮಾರ್‌ (Puneeth Rajkumar) ಅಭಿನಯದ ಭಕ್ತ ಪ್ರಹ್ಲಾದ ಸಿನಿಮಾ ಯಾರಿಗೆ ತಾನೆ ನೆನಪಿಲ್ಲ. ಈ ಸಿನಿಮಾದಲ್ಲಿ ಪ್ರಹ್ಲಾದನ ತಂದೆ ಹಿರಣ್ಯಕಷಿಪು ಆಗಿ ರಾಜ್‌ಕುಮಾರ್‌ ಅವರು ಅಮೋಘ ಅಭಿನಯ ನೀಡಿದ್ದರು. ಇಂದಿಗೂ ಸಹ ಈ ಸಿನಿಮಾದ ಡೈಲಾಗ್ ಗಳು ಜನಪ್ರಿಯತೆ ಪಡೆದಿವೆ. 
 

click me!