‘ಬಘೀರ ಎಂದರೆ ನೈಟ್ ಹಂಟರ್. ನಮ್ಮ ನಾಯಕನ ಬೇಟೆಯೂ ರಾತ್ರಿ ಹೊತ್ತಲ್ಲೇ. ಹೀಗಾಗಿ ಚಿತ್ರದ ಕಥೆಯ ಹೆಚ್ಚಿನ ಭಾಗ ರಾತ್ರಿಯಲ್ಲೇ ನಡೆಯುತ್ತದೆ. ಸೂಪರ್ ಹೀರೋ ಕಾನ್ಸೆಪ್ಟ್‌ನ ಈ ತರಹದ ಕಥೆ ನನ್ನ ಪ್ರಕಾರ ಕನ್ನಡದಲ್ಲಿ ಬಂದಿಲ್ಲ.’
ಹೀಗಂದಿದ್ದು ನಿರ್ದೇಶಕ ಡಾ.ಸೂರಿ. ಇತ್ತೀಚೆಗೆ ನಡೆದ ಶ್ರೀಮುರಳಿ ಹಾಗೂ ರುಕ್ಮಿಣೀ ವಸಂತ್ ನಟನೆಯ ‘ಬಘೀರ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ ಸೂರಿ ಮಾತನಾಡಿದರು.
ನಾಯಕ ಶ್ರೀಮುರಳಿ, ‘ಸೂಪರ್ ಹೀರೋ ಪಾತ್ರದಲ್ಲಿ ನನ್ನನ್ನು ತೆರೆ ಮೇಲೆ ನೋಡಿ ಬಹಳ ಖುಷಿಯಾಯಿತು. ಟ್ರೇಲರ್‌ನಲ್ಲೇ ಚಿತ್ರದ ಶ್ರೇಷ್ಠತೆಯ ಸುಳಿವು ಸಿಗುತ್ತದೆ. ಈ ಸಿನಿಮಾದ ತಂತ್ರಜ್ಞರು ಕೆಲಸದಲ್ಲಿ ರಾಕ್ಷಸರು. ಪ್ರಶಾಂತ್ ನೀಲ್ ಅದ್ಭುತ ಕಥೆ ಕೊಟ್ಟಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ’ ಎಂದು ತಿಳಿಸಿದರು.
ನಾಯಕಿ ರುಕ್ಮಿಣಿ ವಸಂತ್, ‘ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಈ ಚಿತ್ರದಲ್ಲಿ ನಟಿಸಿದ್ದು ತುಂಬಾ ಸಂತೋಷವಾಗಿದೆ’ ಎಂದು ತಿಳಿಸಿದರು. ಸುಧಾರಾಣಿ, ಪ್ರಮೋದ್ ಶೆಟ್ಟಿ, ಗರುಡ ರಾಮ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಾರ್ಯಕ್ರಮದಲ್ಲಿದ್ದರು.
ಅಕ್ಟೋಬರ್ 31ರಂದು ಬಿಡುಗಡೆ: ಶ್ರೀಮುರಳಿ ನಟಿಸಿರುವ ‘ಬಘೀರ’ ಸಿನಿಮಾ ಅಕ್ಟೋಬರ್ 31ರಂದು ಬಿಡುಗಡೆ ಆಗುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ವಿಜಯ ಕಿರಗಂದೂರು ನಿರ್ಧಾರ ಮಾಡಿದ್ದಾರೆ.
ಶ್ರೀಮುರಳಿ ನಟನೆಯ ಸಿನಿಮಾ ಬಿಡುಗಡೆ ಆಗದೆ ಬಹಳ ತಿಂಗಳುಗಳು ಕಳೆದಿವೆ. ಅಲ್ಲದೇ ಈ ಸಿನಿಮಾ ಚಿತ್ರೀಕರಣದಲ್ಲಿ ಶ್ರೀಮುರಳಿ ಹಲವು ಬಾರಿ ಗಾಯಗೊಂಡಿದ್ದರಿಂದ ಚಿತ್ರೀಕರಣ ತಡವಾಗಿದ್ದೂ ಇದೆ. ಇದೀಗ ಅದ್ದೂರಿಯಾಗಿ ಶ್ರೀಮುರಳಿ ಬರುತ್ತಿದ್ದಾರೆ.
ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕತೆ ಬರೆದಿದ್ದು, ಶ್ರೀಮುರಳಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ನಾಯಕಿ ಪಾತ್ರದಲ್ಲಿದ್ದಾರೆ. ಪ್ರಕಾಶ್ ರೈ, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ತಾರಾಗಣದಲ್ಲಿದ್ದಾರೆ.