ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೊಡುಗೆ ಅಪಾರ ಬಾಲ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಂತರ ಹೀರೋ ಆಗಿ ಮೆರೆದು 90 ರ ದಶಕದಲ್ಲಿ ಸ್ಯಾಂಡಲ್‌ವುಡ್ ಅನ್ನು ಆಳಿದ ರಣಧೀರ. ಅಷ್ಟೇ ಯಾಕೆ ಹೀರೋ ಮಾತ್ರವಲ್ಲ ನಿರ್ದೇಶಕನಾಗಿ, ನಿರ್ಮಾಪಕನಾಗಿ ಸೈ ಎನಿಸಿಕೊಂಡ ರವಿಮಾಮ ಅವರಿಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಕೂಡ ನೀಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ಕೊಡುಗೆ 4 ದಶಕಗಳಿಗೂ ಹೆಚ್ಚಾಗಿದೆ. ಇದೀಗ ಅವರು ಬಾಲ ನಟನಾಗಿ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದರು ಎಂಬುದನ್ನು ಅವರ ಪುತ್ರ ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ. ವಿಕ್ರಮ್ ರವಿಚಂದ್ರನ್ ಈ ಸಂಬಂಧ ಫೋಟೋಗಳನ್ನು ಹಂಚಿಕೊಂಡಿದ್ದು, ಅನೇಕರಿಗೆ ತಿಳಿಯದ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಹೌದು ಬಹುತೇಕರಿಗೆ ರವಿಚಂದ್ರನ್ ಬಾಲನಟನಾಗಿ ಚಿತ್ರರಂಗಕ್ಕೆ ಬಂದರು ಎಂಬುದು ತಿಳಿದಿಲ್ಲ. ಮಾತ್ರವಲ್ಲ ವರನಟ ಡಾ. ರಾಜ್ ಕುಮಾರ್ ಅವರೊಂದಿಗೆ ಬಾಲನಟನಾಗಿ ತೆರೆಹಂಚಿಕೊಂಡಿದ್ದರು ಎಂಬುದು ಕೂಡ ಗೊತ್ತಿಲ್ಲ. ಪುತ್ರ ವಿಕ್ರಮ್ ರವಿಚಂದ್ರನ್ ಹಂಚಿಕೊಂಡ ಈ ಅಪರೋಪದ ಫೋಟೋಗಳಿಗೆ ಅನೇಕರು ಈ ಬಗ್ಗೆ ಒಂದು ವಿಷ್ಯವೇ ಗೊತ್ತಿರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಅನುಭವಗಳ ಶಾಂತಿಯಲ್ಲೇ ಇಂಥ ಸಂಬಂಧಗಳು ರೂಪವಾಗುತ್ತವೆ. ನೋಟಗಳಲ್ಲಿ, ಒಂದೇ ಹಂಬಲದಲ್ಲಿ. Childhood roots to today’s strength, ಇದು ನಂಬಿಕೆ, ಗೌರವ, ಒಂದು ಪರಂಪರೆ. The heartbeat of Karnataka’s cinema. ಎಂದೆಂದಿಗೂ ನಮ್ಮದಾಗಿ ಉಳಿಯುತ್ತದೆ. - ಎಂದು ಫೋಟೋಗಳಿಗೆ ಕ್ಯಾಪ್ಷನ್ ಹಾಕಿದ್ದಾರೆ ವಿಕ್ರಮ್ ರವಿಚಂದ್ರನ್
ನಿತ್ಯ 1 ಗಂಟೆ ಮೊಬೈಲ್ ಆಫ್ ಮಾಡಿ ನಿಮ್ಮ ಜತೆ ಬೆರೆಯಿರಿ: ನಟ ರವಿಚಂದ್ರನ್
ನಿಜ, ಯೌವನಾವಸ್ಥೆಯಲ್ಲಿ ಡಾ.ರಾಜ್ ಮತ್ತು ರವಿಚಂದ್ರನ್ ಯಾವುದೇ ಸಿನೆಮಾದಲ್ಲಿ ಜೊತೆಯಾಗಿ ನಟಿಸದಿದ್ದರು. ಬಾಲ್ಯದಲ್ಲಿ ರವಿಚಂದ್ರನ್ ಎರಡು ಸಿನೆಮಾದಲ್ಲಿ ತೆರೆ ಹಂಚಿಕೊಂಡಿದ್ದರು. 'ಕುಲಗೌರವ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ತಂದೆ, ಮಗ ಹಾಗೂ ಮೊಮ್ಮಗನಾಗಿ ತ್ರಿಪಾತ್ರದಲ್ಲಿ ನಟಿಸಿದ್ದರು. ಮೊಮ್ಮಗನ ಪಾತ್ರದಲ್ಲಿ ರವಿ ನಟಿಸಿದ್ದರು.
1971ರಲ್ಲಿ ತೆರೆ ಕಂಡ ಈ ಚಿತ್ರ ಒಂದು ಕೌಟುಂಬಿಕ ಸಿನೆಮಾ. ಪೆಕೆಟಿ ಶಿವರಾಮ್ ನಿರ್ದೇಶನದ ಈ ಚಿತ್ರವು ರವಿಚಂದ್ರನ್ ಅವರ ತಂದೆ ಎನ್. ವೀರಾಸ್ವಾಮಿ ನಿರ್ಮಾಣದ ಚೊಚ್ಚಲ ಸಿನಿಮಾವಾಗಿತ್ತು. ಚಿತ್ರದಲ್ಲಿ ಅಣ್ಣಾವ್ರು ರಘುನಾಥರಾವ್ ಹಾಗೂ ಅವರ ಮಗ ರವಿ ಜೊತೆಗೆ ಮೊಮ್ಮಗ ಶಂಕರ್ ಹೀಗೆ 3 ಪಾತ್ರಗಳನ್ನು ನಿಭಾಯಿಸಿದ್ದರು. ಅದರಲ್ಲಿ ಶಂಕರನ ಬಾಲ್ಯದ ಪಾತ್ರದಲ್ಲಿ ಬಾಲನಟನಾಗಿ ರವಿಚಂದ್ರನ್ ಬಣ್ಣ ಹಚ್ಚಿದ್ದರು. ಆಗ ಅವರಿಗೆ 10 ವರ್ಷ ವಯಸ್ಸಾಗಿತ್ತು.