Kannada Movie OTT Release: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಸಂತಸದ ಸುದ್ದಿ ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಸಂತಸದ ಸುದ್ದಿ ಸಿಕ್ಕಿದೆ. ಸದ್ಯ ಜೈಲಿನಲ್ಲಿರುವ ದರ್ಶನ್ ಅವರ ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾ ಶೀಘ್ರದಲ್ಲೇ ಒಟಿಟಿ ಹಾಗೂ ಕಿರುತೆರೆಗೆ ಕಾಲಿಡಲು ಸಜ್ಜಾಗಿದೆ.
25
ನಿರೀಕ್ಷೆಗೆ ತೆರೆ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಡೆವಿಲ್’ ಸಿನಿಮಾ, ದರ್ಶನ್ ಜೈಲಿನಲ್ಲಿದ್ದ ಸಂದರ್ಭದಲ್ಲೇ ಪ್ರೇಕ್ಷಕರ ಮುಂದೆ ಬಂದಿತ್ತು. ಹಲವು ಕಾರಣಗಳಿಂದ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಸಾಧಾರಣ ಯಶಸ್ಸು ದಾಖಲಿಸಿತ್ತು. ಬಿಡುಗಡೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಒಟಿಟಿ ವೇದಿಕೆ ಅಥವಾ ಟಿವಿ ಚಾನೆಲ್‌ನಲ್ಲಿ ಸಿನಿಮಾ ಪ್ರಸಾರವಾಗಿರಲಿಲ್ಲ. ಇದೀಗ ಆ ನಿರೀಕ್ಷೆಗೆ ತೆರೆಬಿದ್ದಿದೆ.
35
ವಿಶೇಷ ಪೋಸ್ಟ್
ಪ್ರಮುಖ ಡಿಜಿಟಲ್ ವೇದಿಕೆ ಜೀ5 ‘ಡೆವಿಲ್’ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಸಿನಿಮಾವನ್ನು ಒಟಿಟಿ ಹಾಗೂ ಕಿರುತೆರೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಕುರಿತು ಜೀ5 ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ದರ್ಶನ್ ಅವರ ಜನಪ್ರಿಯ ಡೈಲಾಗ್‌ಗಳಲ್ಲೊಂದಾದ, 'ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ... ಬರ್ತಾ ಇದೀನಿ ಚಿನ್ನ' ಎಂಬ ಸಾಲನ್ನು ಬಳಸುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
‘ಡೆವಿಲ್’ ಸಿನಿಮಾ ನಿರ್ಮಾಣದ ಹಂತದಲ್ಲೇ ಹಲವು ಅಡೆತಡೆಗಳನ್ನು ಎದುರಿಸಿತ್ತು. 2024ರಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ದರ್ಶನ್ ಬಂಧನವಾಗಿದ್ದರು. ಪರಿಣಾಮ ಚಿತ್ರದ ಕೆಲಸಗಳು ವಿಳಂಬಗೊಂಡಿದ್ದವು. ಬಳಿಕ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದ ದರ್ಶನ್, ಉಳಿದ ಚಿತ್ರೀಕರಣ ಹಾಗೂ ಡಬ್ಬಿಂಗ್ ಪೂರ್ಣಗೊಳಿಸಿದ್ದರು. ಆದರೆ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಅವರು ಮತ್ತೆ ಜೈಲು ಸೇರಿದ್ದರು.
55
ಪ್ರೇಕ್ಷಕರ ಮುಂದೆ ಬರಲು ಸಜ್ಜು
ದರ್ಶನ್ ಜೈಲಿನಲ್ಲಿದ್ದಾಗಲೇ ಬಿಡುಗಡೆಯಾದ ‘ಡೆವಿಲ್’ ಚಿತ್ರದ ಪ್ರಚಾರದ ಹೊಣೆಗಾರಿಕೆಯನ್ನು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಹೊತ್ತುಕೊಂಡಿದ್ದರು. ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದು, ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಪ್ರಯತ್ನಿಸಿತ್ತು. ಈಗ ಒಟಿಟಿ ಹಾಗೂ ಟಿವಿ ಬಿಡುಗಡೆಯ ಮೂಲಕ ‘ಡೆವಿಲ್’ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ದರ್ಶನ್ ಅಭಿಮಾನಿಗಳು ಚಿತ್ರದ ಡಿಜಿಟಲ್ ರಿಲೀಸ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.