ಡಾಲಿ ಧನಂಜಯ ಹಾಗೂ ಸಪ್ತಮಿ ಗೌಡ ಹೊಸ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ. ಇವರಿಬ್ಬರನ್ನು ಜೊತೆ ಮಾಡಿರುವುದು ಐತಿಹಾಸಿಕ ‘ಹಲಗಲಿ’ ಸಿನಿಮಾ.
ಸುಕೇಶ್ ಡಿ ಕೆ ನಿರ್ದೇಶನದ, ಯುವ ಉದ್ಯಮಿ ಬಳ್ಳಾರಿ ಮೂಲದ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಚಿತ್ರವಿದು. ಎರಡು ಭಾಗಗಳಲ್ಲಿ ಮೂಡಿ ಬರಲಿರುವ ಈ ಐತಿಹಾಸಿಕ ಚಿತ್ರವು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಲಿದೆ.
ಎರಡು ಭಾಗಗಳಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ದೀಪಾವಳಿ ಹಬ್ಬದ ನಂತರ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದ್ದು, ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ.
ವಾಸುಕಿ ವೈಭವ್ ಸಂಗೀತ ಇದೆ. ‘ಕೆಜಿಎಫ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಂ ಮೊರ್ ಅವರೇ ‘ಹಲಗಲಿ’ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕುತ್ತಿದ್ದು, ಹಲಗಲಿ ಊರಿನ ಸೆಟ್ ಅನ್ನು ವಿಶೇಷವಾಗಿ ನಿರ್ಮಿಸಲಾಗುತ್ತಿದೆ.
ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರ ಇದಾಗಲಿದೆಯಂತೆ. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ.
ಈ ಚಿತ್ರದ ಮೂಲಕ ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ಹಲಗಲಿಯ ಬೇಡರ ಹೋರಾಟದ ಕತೆಯನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ಡಿ ಕೆ. ಇಂಥ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗುವ ಮೂಲಕ ‘ಕಾಂತಾರ’ ಚಿತ್ರದ ನಂತರ ಮತ್ತೊಂದು ಬಹು ಭಾಷೆಯ ಚಿತ್ರಕ್ಕೆ ಜೊತೆಯಾಗಿದ್ದಾರೆ.