ನಟಿ ಕಾರುಣ್ಯ ರಾಮ್,ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ಬೆಟ್ಟಿಂಗ್ ಆ್ಯಪ್ ಚಟ ಮತ್ತು ಸಾಲ, ವಂಚನೆ ಹಾಗೂ ಮಾನಸಿಕ ಕಿರುಕುಳದ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಸುಮಾರು 25 ಲಕ್ಷ ಸಾಲ ಮಾಡಿ ಮನೆ ಬಿಟ್ಟು ಹೋಗಿದ್ದು, ಆಕೆ ಮಾಡಿದ ತಪ್ಪಿಗೆ ಇಂದು ಬೆದರಿಕೆ ಬರುತ್ತಿದೆ ಎಂದಿದ್ದಾರೆ.
ಬೆಂಗಳೂರು: ನಟಿ ಕಾರುಣ್ಯ ರಾಮ್ ಅವರು ತನ್ನ ಸ್ವಂತ ತಂಗಿ, ಸಮೃದ್ಧಿ ರಾಮ್ ವಿರುದ್ಧ ಸಿಸಿಬಿ (Central Crime Branch) ಪೊಲೀಸರಿಗೆ ದೂರು ನೀಡಿರುವ ಘಟನೆ ರಾಜ್ಯದ ಚಿತ್ರರಂಗ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಬೆಟ್ಟಿಂಗ್ ಆ್ಯಪ್ ಗೀಳು, ಸಾಲ–ವಂಚನೆ ಆರೋಪ, ಸಾಮಾಜಿಕ ಜಾಲತಾಣಗಳಲ್ಲಿ ನಡೆದ ನಿಂದನೆ, ಹಾಗೂ ಪ್ರತಿದೂರುಗಳ ಸರಣಿ ಬೆಳಕಿಗೆ ಬಂದಿದೆ. ಇದೀಗ ಈ ಪ್ರಕರಣದಲ್ಲಿ ಟ್ವಿಸ್ಟ್ ಗಳು ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಬೆಟ್ಟಿಂಗ್ ಆ್ಯಪ್ ವಿರುದ್ಧ ಯಾವುದೇ ಪ್ರಚಾರ ಮಾಡಬೇಡಿ ಎಂದು ನಟಿ ಮನಇ ಮಾಡಿಕೊಂಡಿದ್ದಾರೆ.
210
ಸಾಲ ವಂಚನೆ ಆರೋಪ: ಅಕ್ಕ–ತಂಗಿಯ ವಿರುದ್ಧವೇ ದೂರು
ಈ ಪ್ರಕರಣದ ಮೂಲವು ಪ್ರತಿಭಾ ಶೆಟ್ಟಿ ಎಂಬುವವರು ನೀಡಿದ ದೂರಿನಿಂದ ಆರಂಭವಾಗಿದೆ. ಪ್ರತಿಭಾ ಅವರು, ನಟಿ ಕಾರುಣ್ಯ ರಾಮ್ ಹಾಗೂ ಅವರ ಸಹೋದರಿ ಸಮೃದ್ಧಿ ತಮ್ಮಿಂದ ಸ್ಟುಡಿಯೋ ಹಾಗೂ ವ್ಯವಹಾರ ನಡೆಸುವ ನೆಪದಲ್ಲಿ 3 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ 2025ರ ಮೇ 10ರಂದು ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ. ದೂರಿನಲ್ಲಿ, ಹಣವನ್ನು ವಾಪಸ್ ಕೇಳಿದಾಗ ಸಮೃದ್ಧಿ ಅವರು, “ಆದಾಗ ಕೊಡ್ತೀನಿ, ಬದುಕಿದ್ರೆ ಕೊಡ್ತೀನಿ, ನಿನ್ನ ಹೆಸರನ್ನ ಬರೆದು ಸಾಯ್ತೀನಿ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿ, ವಿಷಯವನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದರು.
310
ಫೇಸ್‌ಬುಕ್ ಕಮೆಂಟ್ ಪ್ರಕರಣ: ಕಾರುಣ್ಯ ರಾಮ್ ವಿರುದ್ಧ ಅಶ್ಲೀಲ ನಿಂದನೆ ಆರೋಪ
ಈ ನಡುವೆ, ಸಾಲ ವಿವಾದದ ಮುಂದುವರಿದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಪ್ರತಿಭಾ ಶೆಟ್ಟಿ ಅವರು ನಟಿ ಕಾರುಣ್ಯ ರಾಮ್ ಅವರ ಫೇಸ್‌ಬುಕ್ ಫೋಟೋಗೆ ಅವಹೇಳನಕಾರಿ ಹಾಗೂ ನಿಂದನಾತ್ಮಕ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರತಿಭಾ ಅವರು, “Award for Cheaters” ಎಂದು ಕಮೆಂಟ್ ಮಾಡಿದ್ದು ಮಾತ್ರವಲ್ಲದೆ, ಸಾಲು ಸಾಲು ಪದಗಳಲ್ಲಿ ನಿಂದನೆ ನಡೆಸಿದ್ದಾರೆ ಎಂದು ಕಾರುಣ್ಯ ರಾಮ್ ಆರೋಪಿಸಿದ್ದಾರೆ. ತಂಗಿ ಸಮೃದ್ಧಿ ಸಾಲ ನೀಡಿ ಅಸಮಾಧಾನಗೊಂಡು, ಅಕ್ಕನ ಫೋಟೋಗೆ ಈ ರೀತಿಯ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ವಾಸವಿರುವ ನಟಿ ಕಾರುಣ್ಯ ರಾಮ್ ಅವರು ಸಿಸಿಬಿ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ಈ ದೂರು ಆಧಾರವಾಗಿ ಪ್ರಕರಣದ ಪ್ರಾಥಮಿಕ ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ದೂರು ಸಾಬೀತಾದಲ್ಲಿ ಪ್ರತಿಭಾ ಶೆಟ್ಟಿ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ಎಲ್ಲಾ ದಾಖಲೆಗಳು, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಹಾಗೂ ಹಿಂದಿನ ದೂರುಗಳ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.
510
ಕಾರುಣ್ಯ ರಾಮ್ ಕುಟುಂಬ ಹಿನ್ನೆಲೆ
ನಟಿ ಕಾರುಣ್ಯ ರಾಮ್ ಅವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿ. ಅವರಿಗೆ ಒಬ್ಬ ಸಹೋದರಿ ಹಾಗೂ ಒಬ್ಬ ಸಹೋದರ ಇದ್ದು, ಸಹೋದರ 12 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕಾರುಣ್ಯ ರಾಮ್ ಅವರ ಸಹೋದರಿ ಸಮೃದ್ಧಿ ಮೇಕಪ್ ಆರ್ಟಿಸ್ಟ್ ಆಗಿದ್ದರು. ಕೆಲ ಸೀರಿಯಲ್ ನಲ್ಲಿ ನಟಿಸಿದ್ದರು ಕೂಡ. ತಂಗಿ ಸಮೃದ್ಧಿಗಾಗಿ, ಕಾರುಣ್ಯ ರಾಮ್ ಅವರು ಮೇಕಪ್ ಸ್ಟುಡಿಯೋ ಸ್ಥಾಪಿಸಿಕೊಟ್ಟಿದ್ದರು. ಆದರೆ, ಆನ್‌ಲೈನ್ ಬೆಟ್ಟಿಂಗ್ ವ್ಯಸನದಿಂದ ಸಮೃದ್ಧಿ ವ್ಯವಹಾರಕ್ಕೆ ಗಮನ ನೀಡದೆ, ಬೆಟ್ಟಿಂಗ್ ಗೀಳಿನಿಂದ ಸುಮಾರು 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಲ ತೀರಿಸಲು ಸಾಧ್ಯವಾಗದೆ, ಸಮೃದ್ಧಿ ಮನೆ ಬಿಟ್ಟು ಹೋಗಿದ್ದಾರೆ. ಸಮೃದ್ಧಿ ಮನೆ ಬಿಟ್ಟು ಹೋಗಿ ಯಾರ ಕೈಗೂ ಸಿಕ್ಕದೆ ಇರುವುದೇ ಕಾರುಣ್ಯ ಇಂದು ಪೊಲೀಸ್ ಮೆಟ್ಟಲೇರಲು ಕಾರಣ.
610
ಮಾಧ್ಯಮಗಳಿಗೆ ನಟಿ ಕಾರುಣ್ಯ ರಾಮ್ ಮನವಿ
ಈ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಕಾರುಣ್ಯ ರಾಮ್, ದೂರಿನ ಬಗ್ಗೆ ಶೀಘ್ರದಲ್ಲೇ ಎಲ್ಲಾ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇಂದು ನಾನು ನನ್ನ ಹೆತ್ತವರು ಹಾಗೂ ಆತ್ಮೀಯರೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು. ದಯವಿಟ್ಟು ಈ ವಿಷಯದಲ್ಲಿ ಗೌಪ್ಯತೆಯನ್ನು ಕಾಪಾಡಿ ಎಂದು ಮನವಿ ಮಾಡಿದ್ದರು. ಈ ಪ್ರಕರಣದ ಕುರಿತು ಮುಂದಿನ ದಿನಗಳಲ್ಲಿ ಸಿಸಿಬಿ ತನಿಖೆಯ ಆಧಾರದ ಮೇಲೆ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
710
ಮೂರು ವರ್ಷಗಳಿಂದ ಈ ಸಮಸ್ಯೆಯ ಜೊತೆ ಹೋರಾಡುತ್ತಿದ್ದೇನೆ
ಬೆಟ್ಟಿಂಗ್ ಆ್ಯಪ್ ಚೀಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾರುಣ್ಯ ರಾಮ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಸಂಕ್ರಾಂತಿ ಹಬ್ಬದ ದಿನವೇ ಇಂತಹ ಸಂಕಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಮೂರು ವರ್ಷಗಳಿಂದ ನಾನು ಈ ಸಮಸ್ಯೆಯನ್ನು ಒಂಟಿಯಾಗಿ ಹೊತ್ತುಕೊಂಡು ಹೋರಾಡುತ್ತಿದ್ದೇನೆ. ಇದನ್ನು ಯಾರಿಗೂ ಹೇಳಲು ಸಾಧ್ಯವಾಗದೆ ಮೌನವಾಗಿ ಬದುಕುತ್ತಿದ್ದೆ ಎಂದು ಕಾರುಣ್ಯ ರಾಮ್ ತಿಳಿಸಿದ್ದಾರೆ. ತಮ್ಮ ಕುಟುಂಬ ಈ ಬೆಟ್ಟಿಂಗ್ ಆ್ಯಪ್ ವ್ಯಸನಕ್ಕೆ ಬಲಿಯಾದ ಅನೇಕ ಕುಟುಂಬಗಳಲ್ಲಿ ಒಂದಾಗಿದೆ ಎಂದು ಹೇಳಿ ಅವರು ಭಾರೀ ನೋವು ವ್ಯಕ್ತಪಡಿಸಿದ್ದಾರೆ.
810
ಬೆಟ್ಟಿಂಗ್ ಆ್ಯಪ್‌ನಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ
ಬೆಟ್ಟಿಂಗ್ ಆ್ಯಪ್‌ನಿಂದ ಎಷ್ಟೋ ಕುಟುಂಬಗಳು ಸಂಪೂರ್ಣವಾಗಿ ನಾಶವಾಗಿವೆ. ದುರದೃಷ್ಟವಶಾತ್, ಅದರಲ್ಲಿ ನನ್ನ ಕುಟುಂಬವೂ ಒಂದಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದೇ ನನಗೆ ತುಂಬಾ ಬೇಸರದ ವಿಷಯ ಎಂದು ಅವರು ಹೇಳಿದರು. ಈ ಎಲ್ಲ ಸಮಸ್ಯೆಗಳು ತಮ್ಮ ತಂಗಿಯ ವ್ಯಸನದಿಂದಲೇ ಆರಂಭವಾದವು. ಸಂಪಾದನೆ ಮಾಡಿದ ಗೌರವ ಹಣ ಎಲ್ಲವೂ ಹೋಯ್ತು ಎಂದು ಕಾರುಣ್ಯ ರಾಮ್ ಸ್ಪಷ್ಟಪಡಿಸಿದರು.
“ತಂಗಿಯ ಸಮಸ್ಯೆಯಿಂದ ನಮ್ಮ ಕುಟುಂಬದ ಗೌರವ ಕಳೆದುಹೋಯಿತು”
ನಟಿ ಕಾರುಣ್ಯ ರಾಮ್ ಅವರ ಮಾತುಗಳಲ್ಲಿ ತೀವ್ರ ನೋವಿನಿಂದ ನನ್ನ ತಂಗಿ ಮಾಡಿಕೊಂಡ ತಪ್ಪಿನಿಂದ ನನ್ನ ಅಪ್ಪ–ಅಮ್ಮ ಮತ್ತು ನಾನು ವರ್ಷಗಳ ಕಾಲ ಕಟ್ಟಿಕೊಂಡಿದ್ದ ಗೌರವ ಎಲ್ಲವೂ ಹೋದಂತಾಗಿದೆ. ಈ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ತಂಗಿಯ ಕುರಿತು ಮಾತನಾಡಿದ ಕಾರುಣ್ಯ ರಾಮ್, ಈ ಬೆಟ್ಟಿಂಗ್ ವ್ಯಸನದಿಂದ ಹೊರಬಂದ ಮೇಲೆ ಮಾತ್ರ ಮನೆಗೆ ಬರುತ್ತೇನೆ ಎಂದು ಹೇಳಿ, ನನ್ನ ತಂಗಿ ಮನೆ ಬಿಟ್ಟು ಹೋಗಿದ್ದಾಳೆ. ಆಕೆ ಈಗ ನಮ್ಮ ಸಂಪರ್ಕದಲ್ಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಆ ನೋವನ್ನು ನನ್ನ ಅಪ್ಪ ಅಮ್ಮ ನಾನು ಅನುಭವಿಸುತ್ತಿದ್ದೇವೆ. ಆಕೆ ನಮ್ಮೊಂದಿಗಿಲ್ಲ. ಎಲ್ಲಿದ್ದಾಳೆಂದು ಗೊತ್ತಿಲ್ಲ.
910
“ಅನಾಮಧೇಯ ಮೆಸೇಜ್‌ಗಳು, ನಿರಂತರ ಕರೆಗಳು”
ಆಕೆ ಈ ವ್ಯಸನಕ್ಕೆ ಬಿದ್ದಿದ್ದಾಳೆಂದು ಫ್ರೆಂಡ್ಸ್ ಮುಖಾಂತರ ಗೊತ್ತಾಯ್ತು. ಆಕೆ ಎಲ್ಲರ ಜೊತೆ ಸಾಲ ಮಾಡಿಕೊಂಡ ಪರಿಣಾಮವಾಗಿ ತಮಗೆ ಮತ್ತು ಕುಟುಂಬಕ್ಕೆ ಮಾನಸಿಕ ಕಿರುಕುಳ ಹೆಚ್ಚಾಗಿದೆ. ಇತ್ತೀಚೆಗೆ ನನಗೆ ಅನಾಮಧೇಯ ಸಂಖ್ಯೆಯಿಂದ ಅಸಭ್ಯ ಕಾಮೆಂಟ್‌ಗಳು ಮತ್ತು ಮೆಸೇಜ್‌ಗಳು ಬರುತ್ತಿವೆ. ದಿನದ ಹೊತ್ತಿನಲ್ಲೂ, ಮಧ್ಯರಾತ್ರಿಯಲ್ಲೂ ನಿರಂತರವಾಗಿ ಕರೆಗಳು ಬರುತ್ತಿವೆ. ನನ್ನ ತಂಗಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನನ್ನನ್ನೇ ಪ್ರಶ್ನಿಸುತ್ತಿದ್ದಾರೆ. ನಾವೇನು ಮಾಡಲು ಸಾಧ್ಯ. ನನಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಅಪ್ಪ ಅಮ್ಮನನ್ನು ನೋಡಿಕೊಳ್ಳುವವರು ಯಾರಿದ್ದಾರೆ.
1010
“ಅತಿರೇಕ ಮೀರಿದ್ದರಿಂದ ದೂರು ನೀಡಬೇಕಾಯಿತು”
ಮಾನಸಿಕ ಕಿರುಕುಳ ಮಿತಿಮೀರಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಕಾರುಣ್ಯ ರಾಮ್ ತಿಳಿಸಿದರು. “ಈ ಎಲ್ಲವೂ ಅತಿರೇಕಕ್ಕೆ ಹೋಗಿದ್ದರಿಂದ ನಾನು ಕಾನೂನು ಮೊರೆ ಹೋಗಬೇಕಾಯಿತು. ನನಗೆ ನ್ಯಾಯ ಬೇಕು. ನನ್ನ ತಂದೆ–ತಾಯಿಗೆ ಮಾನಸಿಕ ಶಾಂತಿ ಬೇಕು,” ಎಂದು ಅವರು ಸ್ಪಷ್ಟವಾಗಿ ಹೇಳಿದರು. ಈ ಪ್ರಕರಣದಲ್ಲಿ ನನಗೆ ಮಾತ್ರವಲ್ಲ, ನನ್ನ ತಂದೆ–ತಾಯಿಗೂ ನ್ಯಾಯ ಸಿಗಬೇಕು. ನಾವು ಅನುಭವಿಸುತ್ತಿರುವ ಮಾನಸಿಕ ಯಾತನೆಗೆ ಕೊನೆ ಬರಬೇಕು. ಬೆಟ್ಟಿಂಗ್ ಆ್ಯಪ್ ಅನ್ನು ಯಾರೂ ಕೂಡ ಪ್ರಮೋಟ್ ಮಾಡಬಾರದು ನಾನು ಸರಕಾರಕ್ಕೂ ಇದನ್ನು ಮನವಿ ಮಾಡಿಕೊಳ್ಳುತ್ತೇನೆ. ನಮಗೆ ರಿಲೀಫ್ ಬೇಕು. ಕುಟುಂಬಕ್ಕೆ ನೆಮ್ಮದಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.