ಬ್ರಹ್ಮಾನಂದ ಕೊಡುವ ಅರ್ಜುನ; ಮೊಮ್ಮಗನ ನೆನೆದು ನಟ ಜಗ್ಗೇಶ್ ಭಾವುಕ

First Published | Jan 29, 2024, 4:12 PM IST

ನಟ ಜಗ್ಗೇಶ್‌ಗೆ ಮೊಮ್ಮಗ ಎಂದರೆ ಪಂಚಪ್ರಾಣ. ಸದಾ ತಮ್ಮ ಮೊಮ್ಮಗನ ಆಟ ಪಾಠ ತುಂಟಾಟಗಳ ಬಗ್ಗೆ ಬರೆಯುತ್ತಿರುತ್ತಾರೆ. ಈ ಬಾರಿಯೂ ಜಗ್ಗೇಶ್ ಮೊಮ್ಮಗ ತಮಗೆ ಕೊಡುವ ಸುಖದ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ. 

ನಟ ಜಗ್ಗೇಶ್‌ ಫ್ಯಾಮಿಲಿ ಮ್ಯಾನ್ ಎಂಬುದು ಅವರ ಪೋಸ್ಟ್‌ಗಳಿಂದ ಆಗಾಗ ಬಹಿರಂಗವಾಗುತ್ತಲೇ ಇರುತ್ತದೆ. ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಜೊತೆಗೆ ತಮ್ಮ ತಾತನ ಕುರಿತಾಗಿಯೂ ಜಗ್ಗೇಶ್ ಸದಾ ಫೋಟೋ ಹಂಚಿಕೊಂಡು ಬರೆಯುತ್ತಿರುತ್ತಾರೆ.
 

ಅದರಲ್ಲೂ ಮಗ ಗುರು ಹಾಗೂ ವಿದೇಶಿ ಸೊಸೆ ಕೇಟ್ ದಂಪತಿಯ ಪುತ್ರ ಅರ್ಜುನನ ಫೋಟೋವನ್ನು ಆಗಾಗ ಹಂಚಿಕೊಳ್ಳುವ ಜಗ್ಗೇಶ್, ಅವನು ತಮಗೆ ನೀಡುವ ಸಂತೋಷವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. 

Tap to resize

ಈ ಬಾರಿ ಜಗ್ಗೇಶ್ ತಮ್ಮ ಪತ್ನಿ ಹಾಗೂ ಅರ್ಜುನನ ಜೊತೆಗಿರುವ ಮುದ್ದಾದ ಫೋಟೋ ಹಂಚಿಕೊಂಡಿದ್ದು, ತಮ್ಮ ತಾತನ ಮಾತುಗಳನ್ನೂ, ಮೊಮ್ಮಗ ಕೊಡುವ ಸಂತೋಷವನ್ನೂ ಬರಹದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅರ್ಜುನ ಗಿರಿಗಿಟ್ಲೆ ಹಿಡಿದುಕೊಂಡಿರುವುದನ್ನು ಕಾಣಬಹುದು.

'ನನ್ನ ಹೆಮ್ಮೆಯ ತಾತ ನಂಜೇಗೌಡರು ತಮ್ಮ ಮೊಮ್ಮಗನಾದ ನನ್ನನ್ನು ವಿಪರೀತವಾಗಿ ಪ್ರೀತಿಸುತ್ತಿದ್ದರು ಹಾಗು ಒಂದು ಮಾತು ಹೇಳುತ್ತಿದ್ದರು, ಮೊಮ್ಮಗನೆ ಈಶ ಇನ್ನೊಂದು ಜನ್ಮ ನನಗಿತ್ತರೆ ನಾನು ನಿನ್ನ ಹೊಟ್ಟೆಯಲ್ಲೆ ಹುಟ್ಟುವೆ ಎಂದು. ಆಗ ನಾನು ಯಾಕ್ ತಾತ ಹಂಗಂತ್ತೀಯ ಎಂದರೆ- ಮುಂದೆ ನೀನು ಬೆಳೆದು ದೊಡ್ಡವನಾಗು ನನ್ನಂತೆ ತಾತನಾಗು. ಆಗ ನಿನಗೆ ಮೊಮ್ಮಗನ ಕಂಡಾಗ ಆಗುವ ಸಂತೋಷ ಅನುಭವಿಸುವೆ ಎಂದು.'

'ಅದೆ ರೀತಿ ರಾಜಣ್ಣ ತಮ್ಮ ಮೊಮ್ಮಕ್ಕಳ ಬಗ್ಗೆ ಮಾತಾಡುವಾಗ ಭಾವುಕರಾಗುತ್ತಿದ್ದರು. ಯಾಕೆ ತಾತಂದಿರು ಹೀಗೆ ಎಂದು ಆಶ್ಚರ್ಯ ಆಗುತ್ತಿತ್ತು. ಇಂದು ನನ್ನ ಮೊಮ್ಮಗನ ಕಂಡಾಗ ಅಥವ ಆತ ನನ್ನ ಜೊತೆ ಸಮಯ ಕಳೆದಾಗ ಆ ಹುಚ್ಚು ಆವರಿಸುತ್ತದೆ.'

'ಓ ನಲ್ಮೆಯ ಬಂಧುಗಳೆ, ನೀವು ಅಪ್ಪ ಅಮ್ಮನಿಗೆ ಏನು ಕೊಡುತ್ತೀರೋ ಬಿಡುತ್ತೀರೋ ಮದುವೆಯಾಗಿ ಮಕ್ಕಳ ಪಡೆದು ತಂದೆತಾಯಿಗೆ ಒಪ್ಪಿಸಿಬಿಡಿ. ನಂತರ ಅವರ ಆನಂದ ನೋಡಿ. ಅದರ ಹೆಸರೆ ಬ್ರಹ್ಮಾನಂದ. ತಾತ ಅಜ್ಜಿಯರೆ ಕೊನೆಯ ಆಸೆ ಮೊಮ್ಮಕ್ಕಳು ' ಎಂದು ಬರೆದುಕೊಂಡಿದ್ದಾರೆ.
 

ಈ ಹಿಂದೆಯೂ ಹಲವು ಬಾರಿ ಅರ್ಜುನನ ಫೋಟೋ ಹಂಚಿಕೊಂಡಿರುವ ನಟ ಆಗೆಲ್ಲ ತಮ್ಮ ತಾತನನ್ನು ನೆನೆಸಿಕೊಂಡಿದ್ದಾರೆ. 'ಆಗ ತಾತ ಹೇಳಿದ ಮಾತು ಮಕ್ಕಳು ಅಸಲು, ಮೊಮ್ಮಕ್ಕಳು ಬಡ್ಡಿ ಇದ್ದಂತೆ. ಅದಕ್ಕೆ ಮನುಷ್ಯರಿಗೆ ಅಸಲಿಗಿಂತ ಬಡ್ಡಿಯ ಮೇಲೆ ಆಸೆ ಜಾಸ್ತಿ ಎಂದು. ಆಗ ನಾನು ಸಣ್ಣವ ಅರ್ಥ ಆಗಲಿಲ್ಲ. ಈಗ ಅದರ ಅರ್ಥ ಆಗುತ್ತೆ. ಮೊಮ್ಮಗ ಅರ್ಜುನ ಒಂದು ದಿನ ನನ್ನ ಜೊತೆ ಇದ್ದು ಹೋದರೆ ಆ ಸಂತೋಷ ಒಂದು ವಾರ ಉಳಿಯುತ್ತದೆ' ಎಂದಿದ್ದರು ಜಗ್ಗೇಶ್. 
 

ಮತ್ತೊಮ್ಮೆ ಅರ್ಜುನನ ಫೋಟೋ ಹಂಚಿಕೊಂಡು, 'ನಾನು ಹೇಗೆ ತಾತನ ಪ್ರೇಮಿಯೋ ಹಾಗೆ ಅರ್ಜುನ ನನ್ನ ಪ್ರೇಮಿ. ನಾವು ಹಿರಿಯರ ಪ್ರೀತಿಸಿ ಗೌರವಿಸಿದರೆ ಮುಂದೆ ನಮ್ಮ ಪ್ರೀತಿಸುವ ಆತ್ಮ ಬರುತ್ತದೆ. ಇಲ್ಲದಿದ್ದರೆ, ನಮ್ಮನ್ನು ಅನಾಥಾಶ್ರಮಕ್ಕೆ ತಳ್ಳುವ ತಲೆಮಾರು ಹುಟ್ಟುತ್ತದೆ' ಎಂದಿದ್ದರು. 

ಪ್ರತಿ ಭಾನುವಾರ ತಾತನಿಗೆ ಆನಂದ ನೀಡಲು ಮನೆಗೆ ಅರ್ಜುನ ಬರುತ್ತಾನೆ. ಮರಿಗುಬ್ಬಿಯಂತೆ ಸಂಜೆ ಹಾರಿ ವಾಪಸ್ ಅಪ್ಪಅಮ್ಮನ ಗೂಡು ಸೇರುತ್ತಾನಂತೆ ಮೊಮ್ಮಗ. ಮಕ್ಕಳಿಗಿಂತ ಮೊಮ್ಮಕ್ಕಳು ಹೆಚ್ಚು ಕಾಡುತ್ತಾರೆ ಎಂದು ನವರಸನಾಯಕ ಹೇಳಿದ್ದರು.

ಮೊಮ್ಮಗ ತಮ್ಮ ಬೆನ್ನನ್ನು ತುಳಿಯುತ್ತಿರುವ ಫೋಟೋ ಹಂಚಿಕೊಂಡು, 'ಇವನಂತೆ ನಾನು ನನ್ನ ತಾತನ ಬೆನ್ನೇರಿ ತುಳಿಯುತ್ತಿದ್ದೆ. ಮೊಮ್ಮಗನ ತುಳಿತ ಆನಂದಿಸುತ್ತಿದ್ದ ತಾತ. ನನ್ನ ತಾತನ ಅಂದಿನ ಆನಂದಕ್ಕೆ ಕಾರಣ 50 ವರ್ಷ ಆದ ಮೇಲೆ ಇಂದು ನನಗರಿವಾಯಿತು. ಮೊಮ್ಮಕ್ಕಳ ಪ್ರೀತಿ ಮುಂದೆ ಎಲ್ಲಾ ನಗಣ್ಯ' ಎಂದು ಬರೆದಿದ್ದರು.

Latest Videos

click me!