Extramarital affairs: Extramarital affairs: ವಿವಾಹೇತರ ಸಂಬಂಧಗಳು ಅಪರಾಧವಲ್ಲ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾದ್ರೆ ವಿವಾಹೇತರ ಜೋಡಿ ಹೋಟೆಲ್‌ನಲ್ಲಿದ್ದಾಗ ಪೊಲೀಸರು ಬರುವುದೇಕೆ? ಕಾನೂನು ಏನು ಹೇಳುತ್ತದೆ ತಿಳಿಯಿರಿ.
ಎಲ್ಲಿಂದಲೋ ಇಬ್ಬರು ವಯಸ್ಕ ಯುವಕ-ಯುವತಿ ಅಥವಾ ಇಬ್ಬರು ಬೇರೆ ಬೇರೆ ಮದುವೆಯಾಗಿರುವ ಜೋಡಿಗಳು ಹೋಟೆಲ್‌ನಲ್ಲಿ ಬಂದು ತಂಗುತ್ತಾರೆ. ಆಗ ಯಾರಿಂದಲೋ ಮಾಹಿತಿ ಸಿಕ್ಕು ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡುತ್ತಾರೆ. ಈ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿ ವಯಸ್ಕ ಜೋಡಿಗಳನ್ನ ಹೊರಹಾಕುವುದು, ವಶಕ್ಕೆ ಪಡೆಯುವುದು ಆಗಾಗ ಇಂಥ ಸುದ್ದಿಗಳನ್ನ ಮಾಧ್ಯಮಗಳಲ್ಲಿ ನೋಡುತ್ತಿರುತ್ತವೆ. ಭಾರತದಲ್ಲಿ ವಿವಾಹೇತರ ಸಂಬಂಧಗಳು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವಾಗ ಪೊಲೀಸರು ಏಕೆ ಮಧ್ಯ ಪ್ರವೇಶಿಸುತ್ತಾರೆ, ಅವರಿಗೇನು ಹಕ್ಕಿದೆ ಎಂದು ಅನೇಕರು ಪ್ರಶ್ನೆಗಳನ್ನ ಕೇಳುತ್ತಿರುತ್ತಾರೆ. ಹೌದು ನಿಜವಾಗಿಯೂ ಕಾನೂನು ಈ ಬಗ್ಗೆ ಏನು ಹೇಳುತ್ತದೆ? ಇಲ್ಲಿ ತಿಳಿದುಕೊಳ್ಳೋಣ.
24
2018ರ ಸುಪ್ರೀಂ ತೀರ್ಪು - ಅಕ್ರಮ ಸಂಬಂಧ ಅಪರಾಧವಲ್ಲ
2018 ರಲ್ಲಿ, ಜೋಸೆಫ್ ಶೈನ್ vs. ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿತು. ಈ ತೀರ್ಪಿನಲ್ಲಿ ನ್ಯಾಯಾಲಯವು 150 ವರ್ಷಗಳಷ್ಟು ಹಳೆಯದಾದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ಘೋಷಿಸಿ ಅದನ್ನು ರದ್ದುಗೊಳಿಸಿತು. ಇದು ಹೆಣ್ಣು ಪುರುಷನ ಸೊತ್ತು ಎಂದು ಪರಿಗಣಿಸುತ್ತದೆ ಎಂದು ಹೇಳಿತು. ಹಿಂದೆ ಈ ಸೆಕ್ಷನ್ ಅಡಿಯಲ್ಲಿ ಗಂಡನ ಒಪ್ಪಿಗೆಯಿಲ್ಲದೆ ಮಹಿಳೆಯೊಬ್ಬಳು ಇನ್ನೊಬ್ಬ ವಿವಾಹಿತ ಪುರುಷನೊಂದಿಗೆ ದೈಹಿಕ ಸಂಬಂಧ ಬೆಳೆಸಿದರೆ, ಅದು ಗಂಡನಿಗೆ ಗೊತ್ತಾದರೆ ಜೈಲು ಶಿಕ್ಷೆ ಅನುಭವಿಸಬೇಕಿತ್ತು. ಆದರೆ ಇದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿತು. ಪರಿಣಾಮವಾಗಿ, ಭಾರತದಲ್ಲಿ ವಿವಾಹೇತರ ಸಂಬಂಧಗಳು ಇನ್ನು ಮುಂದೆ ಕ್ರಿಮಿನಲ್ ಅಪರಾಧವಲ್ಲ.ಇದನ್ನ ಪ್ರಗತಿಪರರು ಸ್ವಾಗತಿಸಿದರೆ, ಸಂಪ್ರದಾಯವಾದಿಗಳು ಈ ತೀರ್ಪು ಭಾರತೀಯ ಹಿಂದೂ ವಿವಾಹ ವ್ಯವಸ್ಥೆಯನ್ನೇ ಹಾಳುಮಾಡುತ್ತದೆ ಎಂದರು.
34
ಹಾಗಾದರೆ ಪೊಲೀಸರು ಯಾಕೆ ಹೋಟೆಲ್‌ಗೆ ಬರ್ತಾರೆ
ಹೋಟೆಲ್‌ನಲ್ಲಿ ವಿವಾಹೇತರ ಜೋಡಿ ಕಾನೂನುಬದ್ಧವಾಗಿ ತಂಗಿದ್ದರೂ ಪೊಲೀಸರು ಕೆಲವು ಸಂದರ್ಭ ದಾಳಿ ಮಾಡುತ್ತಾರೆ ಇದು ಅಪರಾಧವಲ್ಲದಿದ್ದರೂ ಪೊಲೀಸರು ವಿಚಾರಣೆಗೆ ಬರುತ್ತಾರೆ. ಬಹಳಷ್ಟು ಕೇಸ್‌ಗಳಲ್ಲಿ ತನ್ನ ಹೆಂಡತಿ ಅಥವಾ ಗಂಡ ಬೇರೆಯವರೊಂದಿಗೆ ಹೋಟೆಲ್ ಲಾಡ್ಜ್‌ನಲ್ಲಿರುವುದು ತಿಳಿದಾಗ ಪೊಲೀಸ್ ಠಾಣೆ ಕಾಣೆಯಾದ ಬಗ್ಗೆ ಅಥವಾ ಅಪಹರಣದ ಬಗ್ಗೆ ದೂರು ನೀಡಿರತ್ತಾರೆ. ಈ ದೂರನ್ನು ಆಧರಿಸಿ ಪೊಲೀಸರು ಹೋಟೆಲ್ ಪ್ರವೇಶಿಸುತ್ತಾರೆ. ಅಂದರೆ ಅವರು ಕೊಟ್ಟ ದೂರು ಸುಳ್ಳೋ ಅಥವಾ ನಿಜವಾಗಿಯೂ ಅಪಹರಣವಾಗಿದೆಯೋ ಅನ್ನುವುದು ಪತ್ತೆಹಚ್ಚುವುದು, ವಿಚಾರಿಸವುದು ಪೊಲೀಸರ ಕರ್ತವ್ಯ. ಕೆಲವೊಮ್ಮೆ ಅಪೂರ್ಣ ಮಾಹಿತಿಯೊಂದಿಗೆ ಯಾರೋ ಕರೆ ಮಾಡಿ ಲಾಡ್ಜ್ ಮೇಲೆ ದಾಳಿ ಎಂದು ಮಾಹಿತಿ ನೀಡಿದಾಗ ವಿಚಾರಣೆಗೆ ಬರುತ್ತಾರೆ. ಬಹುತೇಕರು ಕ್ರಿಮಿನಲ್ ಚಟುವಟಿಕೆಗಳಿಗೆ, ದುರುದ್ದೇಶಗಳಿಗಾಗಿ ಹೋಟೆಲ್‌ಗೆ ಕರೆಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಇತ್ತೀಚಿನ ಉದಾಹರಣೆ ಹೇಳುವುವದಾದರೆ ಯಾದಗಿರಿ ಹೋಟೆಲ್ ಒಂದರಲ್ಲಿ ತಂಗಿದ್ದ ವ್ಯಕ್ತಿಯೋರ್ವನನ್ನ ಅವನ ಸಂಬಂಧಿಗಳೇ ಕೊಂದಿದ್ದರು. ಒಂದೇ ಕುಟುಂಬದವರು ಹೋಟೆಲ್‌ಗೆ ಮಧ್ಯೆ ಪ್ರವೇಶಿಸಿದಾಗ ಕೊಲೆ ಉದ್ದೇಶಶಕ್ಕೆ ಬಂದಿದ್ದಾರೆಂದು ಹೋಟೆಲ್‌ನವರಿಗೂ ಸಹ ಗೊತ್ತಾಗಲ್ಲ. ಹೀಗಿರುವಾಗ ವಿಚಾರಿಸುವ ಉದ್ದೇಶದಿಂದ ಪೊಲೀಸರು ಮಧ್ಯೆಪ್ರವೇಶಿಸುತ್ತಾರೆ ಸರಿಯಾದ ದಾಖಲೆ ಕೊಟ್ಟರೆ, ಸಂಬಂಧ ಕಾನೂನುಬದ್ಧವಾಗಿದ್ದರೆ ಕ್ರಮ ಜರುಗಿಸಲಾಗಲ್ಲ.
ಇಬ್ಬರೂ ವಯಸ್ಕರಾಗಿದ್ದರೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರೆ, ಅವರಿಗೆ ಗೌಪ್ಯತೆಗೆ ಸಂಪೂರ್ಣ ಹಕ್ಕಿದೆ. ಇದರರ್ಥ ಪೊಲೀಸರು ಅಥವಾ ಯಾವುದೇ ಇತರ ಸಂಸ್ಥೆಯು ಸರಿಯಾದ ಕಾರಣ ಅಥವಾ ದೂರು ಇಲ್ಲದೆ ಅವರನ್ನು ಕಿರುಕುಳ ನೀಡಲು, ಬೆದರಿಸಲು ಅಥವಾ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಯಾರನ್ನಾದರೂ ಕಾನೂನುಬಾಹಿರವಾಗಿ ತಡೆದರೆ, ಬೆದರಿಕೆ ಹಾಕಿದರೆ ಅಥವಾ ಸುಲಿಗೆ ಮಾಡಿದರೆ, ಬಲಿಪಶು ಅದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಮತ್ತು ಕಾನೂನು ಕ್ರಮ ಕೈಗೊಳ್ಳಬಹುದು. ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿರುವುದು ಮುಖ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.