ಕೆಲಸ ಮಾಡುವ ದಂಪತಿಗೆ ವೈಯಕ್ತಿಕ ಮತ್ತು ವೃತ್ತಿಪರ ಜೀವನದ (personal and career life) ಬ್ಯಾಲೆನ್ಸ್ ಮಾಡೋದು ಕಷ್ಟ. ಈ ಕಾರಣದಿಂದ ಅನೇಕ ದಂಪತಿಗಳು ಹೆಚ್ಚಿನ ಸಮಯವನ್ನು ಜಗಳ ಮತ್ತು ಕೋಪದಲ್ಲೇ ಕಳೆಯುತ್ತಾರೆ. ಎಲ್ಲವೂ ಅತಿರೇಕಕ್ಕೆ ಹೋದಾಗ ಉಳಿಯುವುದು ಡಿವೋರ್ಸ್. ಆದರೆ ಈ ಡಿವೋರ್ಸ್ ಆಗದಂತೆ ತಡೆಯೋದಕ್ಕೆ ಒಂದು ವಿಧಾನ ಇದೆ, ಅದೇನೆಂದರೆ ಸ್ಲೀಪಿಂಗ್ ಡಿವೋರ್ಸ್ (sleeping divorce). ಏನಿದು ಸ್ಲೀಪಿಂಗ್ ಡಿವೋರ್ಸ್ ? ಅದರ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ.
ಸ್ಲೀಪಿಂಗ್ ಡಿವೋರ್ಸ್ ಎಂದರೇನು?
ಸ್ಲೀಪಿಂಗ್ ಡಿವೋರ್ಸ್ (Sleeping divorce) ಎಂದರೆ ಇದರಲ್ಲಿ ದಂಪತಿಗಳು ತಮ್ಮ ಅಗತ್ಯಗಳು ಮತ್ತು ಆರಾಮಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಮಲಗಲು ಆಯ್ಕೆ ಮಾಡುತ್ತಾರೆ. ಈ ಟ್ರೆಂಡ್ ನಮ್ಮ ಪ್ರಸ್ತುತ ಜೀವನಶೈಲಿ (Lifestyle) ಮತ್ತು ಕೆಲಸದ ಸಂಸ್ಕೃತಿಯಿಂದ ಆರಂಭವಾಗಿದೆ. ಯಾವುದೇ ಒಬ್ಬ ಸಂಗಾತಿಗೆ ರಾತ್ರಿ ಪಾಳಿ ಇದ್ದರೆ, ಗೊರಕೆ ಅಭ್ಯಾಸ ಅಥವಾ ರಾತ್ರಿ ತಡವಾಗಿ ಫೋನಿನಲ್ಲಿ ಮಾತನಾಡುವ ಅಭ್ಯಾಸ ಅಥವಾ ಕೆಲಸವಿದ್ದರೆ ಇನ್ನೊಬ್ಬ ಸಂಗಾತಿಯ ನಿದ್ರೆಗೆ ಭಂಗ ತರುತ್ತದೆ. ಅದಕ್ಕೆ ಪರಿಹಾರವೆಂದರೆ ಸ್ಲೀಪಿಂಗ್ ಡಿವೋರ್ಸ್. ಈ ಟ್ರೆಂಡ್ ನಗರಗಳಲ್ಲಿ ಹೆಚ್ಚಾಗಿದೆ.
ಸ್ಲೀಪಿಂಗ್ ಡಿವೋರ್ಸ್ ಪ್ರಯೋಜನ
ಪ್ರಯೋಜನಗಳ ಬಗ್ಗೆ ಹೇಳೋದಾದ್ರೆ, ಸ್ಲೀಪಿಂಗ್ ಡಿವೋರ್ಸ್ ಟ್ರೆಂಡ್ ತುಂಬಾ ವೇಗವಾಗಿ ಜನಪ್ರಿಯವಾಗುತ್ತಿದೆ ಮತ್ತು ಕಪಲ್ಸ್ ಸಹ ಅದನ್ನು ಫಾಲೋ ಮಾಡ್ತಿದ್ದಾರೆ. ದೇಹ ಚೆನ್ನಾಗಿರಲು ಆಹಾರ ಮತ್ತು ನಿದ್ರೆ ಎರಡು ತುಂಬಾ ಮುಖ್ಯ. ಈ ಎರಡು ವಿಷಯಗಳ ಕೊರತೆ ಇಡೀ ದಿನಚರಿಯನ್ನು, ಉತ್ತಮ ಸಂಬಂಧವನ್ನು ಸಹ ಹಾಳು ಮಾಡಬಹುದು. ಸ್ಲೀಪಿಂಗ್ ಡಿವೋರ್ಸಿನಿಂದ ವೈವಾಹಿಕ ಜೀವನ (married life) ಹಾಳಾಗುತ್ತೆ ಎಂದು ತಿಳ್ಕೊಳ್ಳೋದು ಬೇಡ, ಆದರೆ ವ್ಯಕ್ತಿಯು ಆರಾಮವಾಗಿದ್ದರೆ, ವೈವಾಹಿಕ ಜೀವನವೂ ಚೆನ್ನಾಗಿರುತ್ತೆ.
ಸ್ಲೀಪಿಂಗ್ ಡಿವೋರ್ಸ್ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ಭಾವನಾತ್ಮಕ ಸಂಪರ್ಕ ಇರೋದಿಲ್ಲ
ಪ್ರತ್ಯೇಕವಾಗಿ ಮಲಗುವುದು ಸಂಗಾತಿಯೊಂದಿಗಿನ ಸಂಬಂಧದ ಭಾವನೆಯನ್ನು (emotional attachment) ಕೊನೆಗೊಳಿಸುತ್ತದೆ. ಮಲಗುವ ಕೋಣೆಯಲ್ಲಿ ನಾವು ಸಂಗಾತಿಯೊಂದಿಗೆ ಪ್ರೀತಿ, ದೂರುಗಳು ಮತ್ತು ಇತರ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಈ ಕಾರಣದಿಂದಾಗಿ ಇಬ್ಬರ ನಡುವೆ ಭಾಂದವ್ಯ ಹೆಚ್ಚುತ್ತದೆ, ಆದರೆ ಸ್ಲೀಪಿಂಗ್ ಡಿವೋರ್ಸ್ ನಲ್ಲಿ, ಈ ವಿಷಯಗಳಿಗೆ ಸಮಯವಿಲ್ಲ, ಇದರಿಂದಾಗಿ ಮಮತೆ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಜೊತೆಯಾಗಿದ್ದರೂ ಸಹ ಬೇರೆ ಎನ್ನುವ ಭಾವನೆ ಮೂಡುತ್ತದೆ.
ರೋಮ್ಯಾನ್ಸ್ ಕಡಿಮೆಯಾಗುತ್ತೆ
ಇದು ಬಹಳ ಅಗತ್ಯವಾಗಿರೋ ವಿಷಯ. ಪ್ರತ್ಯೇಕ ಕೋಣೆಗಳಲ್ಲಿ ಮಲಗೋದರಿಂದ ಕ್ರಮೇಣ ಪ್ರೀತಿ ಮತ್ತು ರೋಮ್ಯಾನ್ಸ್ (romance) ಕಡಿಮೆಯಾಗುತ್ತೆ, ಇದು ನಿಮ್ಮ ವೈವಾಹಿಕ ಜೀವನವನ್ನು (married life) ತೊಂದರೆಗೊಳಿಸುತ್ತದೆ ಮತ್ತು ಪ್ರತ್ಯೇಕತೆಗೆ ಕಾರಣವಾಗಬಹುದು. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆ ನಿಮ್ಮ ವೃತ್ತಿಪರ ಜೀವನದ ಮೇಲೂ ಪರಿಣಾಮ ಬೀರುತ್ತದೆ.
ಸಂತೋಷದ ಕೊರತೆ
ಸ್ಲೀಪಿಂಗ್ ಡಿವೋರ್ಸ್ ನಿಂದಾಗಿ ಕೆಲಸ ಮಾಡುವ ದಂಪತಿಗಳ ಜೀವನದಿಂದ ಸಂತೋಷವು ಸಂಪೂರ್ಣವಾಗಿ ಕಣ್ಮರೆಯಾಗುತ್ತಿದೆ. ದಿನವಿಡೀ ಕಚೇರಿ ಮತ್ತು ಮನೆಕೆಲಸಗಳನ್ನು ಪೂರ್ಣಗೊಳಿಸಿದ ನಂತರ, ರಾತ್ರಿಯಲ್ಲಿ ಮಾತ್ರ ಇಬ್ಬರಿಗೆ ಪರಸ್ಪರ ಜೊತೆಯಾಗಿ ಸಮಯ ಕಳೆಯುವ ಅವಕಾಶ ಪಡೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಬೇರೆ ಬೇರೆಯಾಗಿ ನಿದ್ರೆ ಮಾಡೋದರಿಂದ ಇಬ್ಬರಿಗೂ ಕಷ್ಟವಾಗಬಹುದು. ಇದರಿಂದ ಇಬ್ಬರ ನಡುವೆ ಬಾಂಡಿಂಗ್ ಕಡಿಮೆಯಾಗಿ, ಡಿವೋರ್ಸ್ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ.
ಅಸುರಕ್ಷಿತ ಭಾವನೆ
ಸ್ಲೀಪಿಂಗ್ ಡಿವೋರ್ಸಿನಿಂದ ಸಂಗಾತಿಯು ಅಸುರಕ್ಷಿತ ಭಾವನೆಯನ್ನು ಅನುಭವಿಸಬಹುದು. ಮದುವೆ ನಂತರ ಹಾಸಿಗೆ ಹಂಚಿ ಕೊಳ್ಳೋದು ತುಂಬಾ ಸಾಮಾನ್ಯ. ಆದರೆ ಒಬ್ಬ ಸಂಗಾತಿಯು ಉತ್ತಮ ನಿದ್ರೆಗಾಗಿ ಪ್ರತ್ಯೇಕವಾಗಿ ಮಲಗಲು ಬಯಸಿದರೆ, ಇನ್ನೊಬ್ಬರು ಅಂತರ ಸೃಷ್ಟಿಸಬಹುದು. ಇದನ್ನು ಒಂದು ನೆಪವೆಂದು ಪರಿಗಣಿಸಬಹುದು. ತಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಆಗಮನವಾಗಬಹುದು ಎನ್ನುವ ಭಾವನೆಯೂ ಕಾಡುತ್ತದೆ. ಇದರಿಂದ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚಿದೆ.