Latest Videos

7 ಗೆಳತಿಯರು ಸೇರಿ ಕಟ್ಟಿದ್ರು ಕನಸಿನ ಮನೆ; ಬಹುತೇಕರ ಕನಸನ್ನು ಜೀವಿಸ್ತಿರೋ ಸ್ನೇಹಿತೆಯರು..

First Published May 26, 2024, 12:45 PM IST

ಈ 7 ಸ್ನೇಹಿತೆಯರ ಸ್ನೇಹ ಎಷ್ಟು ಚೆಂದ ಇದೆಯೋ, ಇವರೆಲ್ಲ ಸೇರಿ ಕಟ್ಟಿಸಿಕೊಂಡ ರಿಟೈರ್‌ಮೆಂಟ್ ಹೋಂ ಕೂಡಾ ಅಷ್ಟೇ ಸುಂದರವಾಗಿದೆ. ಜವಾಬ್ದಾರಿಗಳು ಕಳೆದ ಜೀವನದ ಹಂತದಲ್ಲಿ ಗೆಳತಿಯರ ಜೊತೆಗೆ ಅದ್ಭುತ ಸ್ವರ್ಗಸದೃಶ ಸ್ಥಳದಲ್ಲಿ ಅದಕ್ಕಿಂತ ಅದ್ಭುತವಾದ ಮನೆ ಕಟ್ಟಿಕೊಂಡು ಹರಟೆ, ನಗು, ಸಂತೋಷದೊಂದಿಗೆ ಕಳೆವ ಎಲ್ಲರ ಕನಸನ್ನು ಇವರು ಜೀವಿಸ್ತಿದಾರೆ. 

ಗೆಳೆತನವೆಂದರೆ ಸಂತೋಷ, ಹರಟೆ, ತಮಾಷೆ, ಒಬ್ಬರಿಗೊಬ್ಬರಾಗುವುದು.. ಜೀವದ ಗೆಳೆಯರೊಂದಿಗಿರುವ ಸುಖವೇ ಬೇರೆ. ಆದರೆ, ಅವರವರ ಸಂಸಾರ ತಾಪತ್ರದಲ್ಲಿ ಸಿಲುಕಿಕೊಳ್ಳುವ ಗೆಳೆಯರು ಈ ರೀತಿ ಒಟ್ಟಾಗಿರಲು ಸಾಧ್ಯವಾಗುವುದಿಲ್ಲ. 

ಚೀನಾದ ಆಗ್ನೇಯ ಭಾಗದಲ್ಲಿರುವ ಗುವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌ ಉಪನಗರದಲ್ಲಿ ಈ ಸ್ನೇಹಿತೆಯರ ಮನೆ ಇದ್ದು, 20 ವರ್ಷಗಳ ಹಿಂದೆ ಅವರು ಈ ರೀತಿಯ ವಿಶ್ರಾಂತ ಜೀವನದ ಕನಸು ಕಂಡಿದ್ದರು. 

ಜೀವನದ ನಿವೃತ್ತಿ ಸಮಯದಲ್ಲಿ ಒಟ್ಟಿಗುರುವ ಕನಸು ಕಂಡ ಈ 7 ಸ್ನೇಹಿತೆಯರು, ಕಡೆಗೂ ತಮ್ಮ ಜವಾಬ್ದಾರಿಗಳು ಮುಗಿದ ಬಳಿಕ ಒಟ್ಟಾಗಿ ಸೇರಿ ಕನಸಿನ ಮನೆ ಕಟ್ಟಿಸಿಕೊಂಡು ಒಟ್ಟಿಗಿದ್ದಾರೆ. 

ಅದೂ ಎಂಥಾ ಮನೆ! ಅದ್ಭುತ ಹಸಿರನ್ನೇ ಹೊದ್ದ ಶಾಂತ, ಸುಂದರ ಪರಿಸರದ ನಡುವೆ ಅದಕ್ಕಿಂತಲೂ ಸುಂದರವಾಗಿಯೂ, ವಿಶಾಲವಾಗಿಯೂ ಇರುವ ಮನೆ. 

ಇದೋ ನೋಡಿ, ಹೊರಗಿನ ಹಸಿರು ಸಾಲದಿದ್ದರೆ ಎಂದು ಮನೆಯ ಒಳಾಂಗಣ ಹೊರಾಂಗಣ ಎಲ್ಲೆಡೆ ಹಸಿರನ್ನೇ ಹೊದ್ದಿಸಿದ್ದಾರೆ ಈ ಗೆಳತಿಯರು. ಖಂಡಿತವಾಗಿಯೂ ಈ ಮನೆಯಲ್ಲಿ ನೆಮ್ಮದಿ, ಸಂತೋಷ ತುಂಬಿ ತುಳುಕುವುದರಲ್ಲಿ ಅನುಮಾನವಿಲ್ಲ. 

ಇಲ್ಲಿ ಈ ಗೆಳತಿಯರು ಒಟ್ಟಾಗಿ ಅಡುಗೆ ಮಾಡುತ್ತಾರೆ. ಊಟ ಮಾಡುತ್ತಾರೆ, ಹೊಸ ವಿಷಯಗಳನ್ನು ಕಲಿಯುತ್ತಾರೆ. ಸಂತೋಷದ ಜೀವನ ಸಾಗಿಸುತ್ತಿದ್ದಾರೆ. 

ಅಯ್ಯೋ, ಎಲ್ಲ ಮೊದಮೊದಲು ಚೆಂದ, ಆಮೇಲೆ ಪ್ರೈವೆಸಿ ಬೇಕೆನಿಸುತ್ತದೆ ಎಂದು ನಿಮಗನಿಸಬಹುದು. ಆದರೆ, ಇವರು ಪ್ರತಿಯೊಬ್ಬರಿಗೂ ಅವರದೇ ಆದ ವಿಶಾಲವಾದ ಕೋಣೆಯನ್ನೂ ಕಟ್ಟಿಸಿಕೊಂಡಿದ್ದಾರೆ. ಇಲ್ಲಿ ಅವರಿಗೆ ಬೇಕಾದ ಖಾಸಗಿತನವಿರುತ್ತದೆ. 

ಈ ಕೋಣೆಗಳ ಸುತ್ತಲೂ ಗಾಜಿನ ಗೋಡೆಗಳೇ ಇದ್ದು ಸುತ್ತಲಿನ ಹಸಿರು ಮನಸ್ಸನ್ನು ತುಂಬುತ್ತದೆ. ಪ್ರತಿ ಕೋಣೆಯಲ್ಲೂ ಮಂಚದ ಹೊರತಾಗಿ ಟೇಬಲ್, ಚೇರ್ ಸೇರಿದಂತೆ ಅಗತ್ಯ ಸೌಲಭ್ಯಗಳೆಲ್ಲವೂ ಇವೆ. 

ಇನ್ನು ಟೀ ಕುಡಿಯೋಕೆ ಅಂತಾನೇ ಮನೆಯಿಂದ ಹೊರಗೆ ಭತ್ತದ ಗದ್ದೆ ಮಧ್ಯೆ ಔಟ್‌ಡೋರ್ ಜಾಗ ಮಾಡಿಕೊಂಡಿದ್ದಾರೆ. ಇಲ್ಲಿಗೆ ಹೋಗಲು ಬಿದಿರಿನ ಸೇತುವೆ ಇದೆ. 

ವಯಸ್ಸಾದ ಕಾಲಕ್ಕೆ ಹೇಳಿ ಮಾಡಿಸಿದಂತೆ ನಿಧಾನಗತಿಯ ಜೀವನಶೈಲಿ ಹೊಂದಿರುವ ಹಳ್ಳಿಯ ರಮಣೀಯ ದೃಶ್ಯಗಳು ಇವರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಸಹಾಯ ಮಾಡುತ್ತಿದೆ. 

ಊಟದ ಸಮಯದಲ್ಲಿ ಅವರ ಕುಟುಂಬಗಳಿಗೆ ಅವಕಾಶ ಕಲ್ಪಿಸಲು, ಕೊಠಡಿಯು ಉಪಹಾರ ಬಾರ್‌ನಲ್ಲಿ ಹೆಚ್ಚುವರಿ ಆಸನಗಳೊಂದಿಗೆ ದೊಡ್ಡ ಡೈನಿಂಗ್ ಟೇಬಲ್ ಅನ್ನು ಹೊಂದಿದೆ.

ಈ ಸ್ನೇಹಿತೆಯರ ಮತ್ತೊಂದು ವಿಶೇಷ ಎಂದರೆ, ಮನೆಗೆ ಹೋಗುವ ಮುನ್ನ ಪ್ರತಿಯೊಬ್ಬರೂ ಹೊಸ ಕೌಶಲ್ಯಗಳನ್ನು ಕಲಿತಿದ್ದಾರೆ- ಅಡುಗೆ, ಸಾಂಪ್ರದಾಯಿಕ ಔಷಧಿ ತಯಾರಿಕೆ, ತರಕಾರಿ ಬೆಳೆಯುವುದು ಇತ್ಯಾದಿ. ಈ ಕಲಿಕೆ ಅವರ ಜೀವನವನ್ನು ಸುಲಭವಾಗಿಸಿದೆ. 

ಇದು ನಾವು ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿದ್ದು, ಬದುಕಿನ ಅತಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದೇವೆ ಎಂದು ಈ ಸ್ನೇಹಿತೆಯರು ಹೇಳುತ್ತಾರೆ. 

click me!