‘ಪೆದ್ದಿ’ ಸಿನಿಮಾದ 'ಹೆಲ್ಲಲ್ಲಲ್ಲೋ' ಎಂಬ ಹೈ ಎನರ್ಜಿ ಹಾಡಿನಲ್ಲಿ ಹೆಜ್ಜೆ ಹಾಕಿರುವ ಶ್ರುತಿ ಹಾಸನ್ ಇದೀಗ ಸ್ಪೆಷಲ್ ಸಾಂಗ್ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂತಹ ಹಾಡುಗಳಲ್ಲಿ ನಟಿಸುವುದಕ್ಕೆ ತಮ್ಮದೇ ಆದ ಕಾರಣಗಳಿವೆ ಎಂದಿದ್ದಾರೆ..
'ಪೆದ್ದಿ' ಸಿನಿಮಾದ 'ಹೆಲ್ಲಲ್ಲಲ್ಲೋ' ಹಾಡಿನ ಬಗ್ಗೆ ಶ್ರುತಿ ಹಾಸನ್ ಮಾತು; ಸ್ಪೆಷಲ್ ಸಾಂಗ್ ವಿವಾದಕ್ಕೆ ನಟಿ ಕೊಟ್ಟ ಖಡಕ್ ಉತ್ತರ!
ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪೆದ್ದಿ' ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಕ್ರೀಡಾ ಆಧಾರಿತ ಸಿನಿಮಾದಲ್ಲಿ ಶ್ರುತಿ ಹಾಸನ್ ಕೂಡ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ 'ಹೆಲ್ಲಲ್ಲಲ್ಲೋ' ಎಂಬ ಹೈ ಎನರ್ಜಿ ಹಾಡಿನಲ್ಲಿ ಹೆಜ್ಜೆ ಹಾಕಿರುವ ಅವರು, ಇದೀಗ ಸ್ಪೆಷಲ್ ಸಾಂಗ್ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂತಹ ಹಾಡುಗಳಲ್ಲಿ ನಟಿಸುವುದಕ್ಕೆ ತಮ್ಮದೇ ಆದ ಕಾರಣಗಳಿವೆ ಎಂದಿರುವ ಶ್ರುತಿ, ಮಹಿಳೆಯರ ಪ್ರದರ್ಶನದ ಕುರಿತು ನಡೆಯುವ ಟೀಕೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
25
ಡ್ಯಾನ್ಸ್ ಮತ್ತು ಫ್ಯಾಷನ್ ಮೇಲಿನ ಪ್ರೀತಿಯೇ ಕಾರಣ!
ಇತ್ತೀಚೆಗೆ ಗಲಾಟ್ಟಾ ಪ್ಲಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರುತಿ ಹಾಸನ್, ಸಿನಿಮಾಗಳಲ್ಲಿ ವಿಶೇಷ ಹಾಡುಗಳ ಅಗತ್ಯದ ಬಗ್ಗೆ ತಾವು ಕೂಡ ಪ್ರಶ್ನೆಗಳನ್ನು ಕೇಳಿರುವುದಾಗಿ ಹೇಳಿದ್ದಾರೆ. ಆದರೆ 'ಪೆದ್ದಿ' ಚಿತ್ರದ 'ಹೆಲ್ಲಲ್ಲಲ್ಲೋ' ಹಾಡಿನಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಕ್ಕೆ ತಮ್ಮದೇ ಆದ ಕಾರಣವಿದೆ ಎಂದಿದ್ದಾರೆ.
ನನಗೆ ನೃತ್ಯ ಮಾಡುವುದು ತುಂಬಾ ಇಷ್ಟ. ವಿಭಿನ್ನ ಉಡುಪುಗಳನ್ನು ಧರಿಸಿ ಸಿಂಗಾರ ಮಾಡಿಕೊಳ್ಳುವುದೂ ಇಷ್ಟ. ನನ್ನ ಪಾಲಿಗೆ ಇಂತಹ ಹಾಡುಗಳಲ್ಲಿ ಭಾಗವಹಿಸುವುದು ಸಂತೋಷದ ವಿಚಾರ. ನನಗೆ ಯಾವುದೇ ವಿಷಯದಲ್ಲಿ ಅಸಹಜ ಅಥವಾ ಮುಜುಗರ ಎನಿಸಿದರೆ ಅದನ್ನು ಮಾಡಲು ಒಪ್ಪುವುದಿಲ್ಲ. ಯಾವ ಉಡುಪು ಧರಿಸಬೇಕು, ಯಾವ ದೃಶ್ಯದಲ್ಲಿ ನಟಿಸಬೇಕು ಎಂಬ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ ಎಂದು ಶ್ರುತಿ ಸ್ಪಷ್ಟಪಡಿಸಿದ್ದಾರೆ.
ಕೆಲವೊಮ್ಮೆ ಇಂತಹ ವಿಚಾರಗಳಲ್ಲಿ ತಮ್ಮ ನಿಲುವಿಗಾಗಿ ಕಷ್ಟದ ವ್ಯಕ್ತಿ ಎಂಬ ಹಣೆಪಟ್ಟಿಯನ್ನೂ ಎದುರಿಸಿದ್ದೇನೆ. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಇಷ್ಟವಿಲ್ಲದ ಕೆಲಸವನ್ನು ಯಾವ ಕಾರಣಕ್ಕೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.
35
ಸ್ಪೆಷಲ್ ಸಾಂಗ್ಗಳ ಟೀಕೆ ಬಗ್ಗೆ ಶ್ರುತಿ ಹೇಳಿದ್ದೇನು?
ಸಿನಿಮಾಗಳಲ್ಲಿ ಮಹಿಳೆಯರನ್ನು ಹೇಗೆ ತೋರಿಸಲಾಗುತ್ತದೆ ಎಂಬ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ನನಗೆ ಅರಿವಿದೆ. ಆದರೆ ನನ್ನ ವೈಯಕ್ತಿಕ ಅನುಭವದಲ್ಲಿ ಇಂತಹ ಹಾಡುಗಳು ಸಕಾರಾತ್ಮಕವಾಗಿವೆ. ನೃತ್ಯ ಮಾಡುವುದು, ಕೊರಿಯೋಗ್ರಫಿಯಲ್ಲಿ ಭಾಗವಹಿಸುವುದು ಮತ್ತು ಆಕರ್ಷಕವಾಗಿ ಕಾಣಿಸಿಕೊಳ್ಳುವುದು ನನಗೆ ಖುಷಿ ನೀಡುತ್ತದೆ ಎಂದು ಶ್ರುತಿ ಹೇಳಿದ್ದಾರೆ.
ಇಂತಹ ಪ್ರದರ್ಶನಗಳು ಕೇವಲ ಐಟಂ ಸಾಂಗ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದಲ್ಲಿ ಹಲವು ರೀತಿಯಲ್ಲಿ ಮಹಿಳೆಯರನ್ನು ವಸ್ತುವಿನಂತೆ ನೋಡುವ ಪ್ರವೃತ್ತಿ ಇದೆ. ಹೀಗಾಗಿ ಪ್ರತಿಯೊಬ್ಬರೂ ತಮಗೆ ಯಾವುದು ಒಪ್ಪಿಗೆ, ಯಾವುದು ಬೇಡ ಎಂಬುದನ್ನು ನಿರ್ಧರಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಾನ್ವಿ ಕಪೂರ್ ಅವರ ಅನುಭವದ ಬಗ್ಗೆ ಕೇಳಿದಾಗ, ಅವರ ಪರವಾಗಿ ತಾನು ಮಾತನಾಡುವುದು ಸರಿಯಲ್ಲ. ಅದು ಅವರ ವೈಯಕ್ತಿಕ ಅನುಭವ ಎಂದು ಶ್ರುತಿ ಸ್ಪಷ್ಟಪಡಿಸಿದ್ದಾರೆ.
'ಕಾಫಿ ವಿತ್ ಕರಣ್'ನಲ್ಲಿ ಜಾನ್ವಿ ಕಪೂರ್ ಪಶ್ಚಾತ್ತಾಪ!
ಇನ್ನೊಂದೆಡೆ, 'ಪೆದ್ದಿ' ಸಿನಿಮಾದಲ್ಲಿನ ತಮ್ಮ ಪಾತ್ರದ ಪ್ರಸ್ತುತಿಯ ಬಗ್ಗೆ ಜಾನ್ವಿ ಕಪೂರ್ ಕೂಡ ಈ ಹಿಂದೆ ಮಾತನಾಡಿದ್ದರು. ಅಕ್ಟೋಬರ್ನಲ್ಲಿ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮ್ಮ ಪಾತ್ರ ಅಚಿಯಮ್ಮನನ್ನು ತೆರೆಯ ಮೇಲೆ ತೋರಿಸಿದ ರೀತಿಯ ಬಗ್ಗೆ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದರು.
ಮಹಿಳೆಯರ ಬಗ್ಗೆ ಇಂತಹ ನಿರೂಪಣೆಗಳು ಸಮಾಜದ ಮೇಲೆ ಯಾವ ರೀತಿಯ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ನಾನು ಇನ್ನಷ್ಟು ಎಚ್ಚರಿಕೆ ವಹಿಸಬಹುದಿತ್ತೇ ಎಂಬ ಪ್ರಶ್ನೆ ಕಾಡುತ್ತದೆ. ಪಾತ್ರದ ಪ್ರಸ್ತುತಿಯಲ್ಲಿ ಸಮಸ್ಯೆಗಳಿದ್ದವು ಮತ್ತು ಅತಿಯಾದ ದೈಹಿಕ ವೈಭವೀಕರಣ ನಡೆದಿತ್ತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಜಾನ್ವಿ ಹೇಳಿದ್ದರು.
55
ನಿರ್ದೇಶಕ ಬುಚ್ಚಿ ಬಾಬು ಸನಾ ಕ್ಷಮೆಯಾಚನೆ!
'ಪೆದ್ದಿ' ಸಿನಿಮಾ ಬಿಡುಗಡೆಯಾದ ಬಳಿಕ ಜಾನ್ವಿ ಅವರ ಪಾತ್ರವನ್ನು ಪರಿಚಯಿಸಿದ ರೀತಿ ಮತ್ತು ಕೆಲವು ದೃಶ್ಯಗಳ ಬಗ್ಗೆ ಪ್ರೇಕ್ಷಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕೆಲವು ದೃಶ್ಯಗಳು ಅತಿಯಾದ ಗ್ಲಾಮರ್ ಪ್ರದರ್ಶನ ಮತ್ತು ಮಹಿಳೆಯರನ್ನು ಭೋಗದವಸ್ತು ಎನ್ನುವಂತೆ ಚಿತ್ರೀಕರಿಸಲಾಗಿದೆ ಎಂದು ಬಹಳಷ್ಟು ವೀಕ್ಷಕರು ಟೀಕಿಸಿದ್ದರು. ಈ ವಿವಾದದ ಬೆನ್ನಲ್ಲೇ ನಿರ್ದೇಶಕ ಬುಚ್ಚಿ ಬಾಬು ಸನಾ ಕೂಡ ಅಸಮಾಧಾನಗೊಂಡ ಪ್ರೇಕ್ಷಕರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಅಲ್ಲದೆ, ಆಕ್ಷೇಪಕ್ಕೆ ಕಾರಣವಾದ ದೃಶ್ಯಗಳನ್ನು ಮರುಪರಿಶೀಲಿಸಿ ಬದಲಾವಣೆ ಮಾಡುವುದಾಗಿ ತಿಳಿಸಿದ್ದರು.
ಒಟ್ಟಿನಲ್ಲಿ, 'ಪೆದ್ದಿ' ಚಿತ್ರದ ಸ್ಪೆಷಲ್ ಸಾಂಗ್ನಲ್ಲಿ ಕಾಣಿಸಿಕೊಂಡಿರುವ ಶ್ರುತಿ ಹಾಸನ್ ಅವರ ಹೇಳಿಕೆಗಳು ಇದೀಗ ಮನರಂಜನಾ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಒಂದೆಡೆ ತಮ್ಮ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಶ್ರುತಿ ಮಾತನಾಡಿದ್ದರೆ, ಮತ್ತೊಂದೆಡೆ ಜಾನ್ವಿ ಕಪೂರ್ ತಮ್ಮ ಪಾತ್ರದ ಪ್ರಸ್ತುತಿಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವುದು ಗಮನ ಸೆಳೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.