ರಾಜೇಶ್ ಶೆಟ್ಟಿ
ಸಂಪೂರ್ಣವಾಗಿ ಮನರಂಜನೆ ಬಯಸುವವರಿಗೆ ಈ ಸಿನಿಮಾ ಕಷ್ಟವಾಗಬಹುದು. ಎಲ್ಲವನ್ನೂ ಸಂಪೂರ್ಣವಾಗಿ ಅರ್ಥ ಮಾಡಿಸಬೇಕು ಅಂತ ಬಯಸುವವರಿಗೆ ಕೊಂಚ ಗೊಂದಲ ಉಂಟಾಗಬಹುದು. ಯಾರು ಹುಡುಕಾಟದಲ್ಲಿರುತ್ತಾರೋ, ಯೋಚನೆಯನ್ನು ಬಯಸುತ್ತಾರೋ ಅವರಿಗೆ ಈ ಸಿನಿಮಾ ದಕ್ಕುತ್ತದೆ. ಇದು ಉಪೇಂದ್ರ ಮಾತ್ರ ಮಾಡಬಹುದಾದ ಸಿನಿಮಾ. ಉಪೇಂದ್ರ ಮಾತುಗಳನ್ನು ಕೇಳಿದವರಿಗೆ ಅವರ ಆಲೋಚನೆಯ ದಾರಿ ಕೊಂಚವಾದರೂ ತಿಳಿಯುತ್ತದೆ. ಇದು ಆ ದಾರಿಯಲ್ಲಿರುವ ಸಿನಿಮಾ. ಕ್ಷಣಿಕ ಸಂತೋಷಕ್ಕೆ, ಕ್ಷಣಿಕ ಉದ್ವೇಗಕ್ಕೆ, ಕಾಲದ ದ್ರೋಹಕ್ಕೆ ಮತ್ತೆ ಮತ್ತೆ ಶರಣಾಗುತ್ತಿರುವ ವ್ಯಕ್ತಿಗಳ ಬದುಕಿಗೆ ಹಿಡಿದ ಕೈಗನ್ನಡಿ.
ಪ್ರತಿಯೊಬ್ಬ ಕಲಾಕಾರ ತನ್ನ ಕೃತಿಯ ಮೂಲಕ ಏನನ್ನೋ ದಾಟಿಸಲು ಯತ್ನಿಸುತ್ತಾನೆ. ಉಪೇಂದ್ರ ಕೂಡ ಇಲ್ಲಿ ಏನನ್ನೋ ದಾಟಿಸಲು ಬಯಸಿದ್ದಾರೆ. ಅದಕ್ಕೊಂದು ಕತೆ ಇದೆ. ಆ ಕತೆಗೆ ಪೂರಕವಾದ ತಂತ್ರವಿದೆ. ಎಲ್ಲವೂ ಸರಿಯಾಗಿ ಮಿಳಿತಗೊಂಡಿದೆ. ಇಲ್ಲಿ ಬಹುತೇಕ ಎಲ್ಲವೂ ರೂಪಕ. ಇಬ್ಬರು ಪ್ರಮುಖ ಪಾತ್ರಗಳು. ಒಬ್ಬ ಸತ್ಯ, ಮತ್ತೊಬ್ಬ ಕಲಿ. ಸತ್ಯ ಸತ್ಯದ ದಾರಿಯ ಸಂಕೇತ. ಕಲಿ ಕಾಲದ ಪ್ರತೀಕ. ಕಾಲಕ್ಕೆ ಶರಣಾಗಿ ತಮ್ಮತನವನ್ನು ಕಳೆದುಕೊಂಡವರ ಕತೆ ಹೇಳುತ್ತಾರೆ ಉಪೇಂದ್ರ. ಇಲ್ಲಿ ಎಲ್ಲವೂ ಎಲ್ಲರಿಗೂ ಗೊತ್ತಾಗುತ್ತಿರುತ್ತದೆ.
ಆದರೆ ಕೆಲವೊಮ್ಮೆ ಬೋಧನೆ ಅನ್ನಿಸುತ್ತದೆ. ಇಲ್ಲಿ ಸಾಮಾಜಿಕ ಆಗುಹೋಗುಗಳಿಂದ ಹಿಡಿದು ರಾಜಯಕೀಯದವರೆಗೆ, ಹೊರ ವಾತಾವರಣದಿಂದ ಮನಸ್ಸಿನವರೆಗೆ ಎಲ್ಲವನ್ನೂ ತಂದಿದ್ದಾರೆ. ಹೊರಗಿನಿಂದ ಬರುವುದನ್ನು ತಡೆದು ಅಂತರಂಗ ದನಿಯನ್ನು ಕೇಳಲು ಪ್ರೋತ್ಸಾಹಿಸುತ್ತಾರೆ. ಉಪೇಂದ್ರ ಇಲ್ಲಿ ಯಾವುದನ್ನೂ ಇದಮಿತ್ಥಂ ಅಂತ ಹೇಳುವುದಿಲ್ಲ. ಕಡೆಗೆ ಕನ್ನಡಿ ಹಿಡಿಯುತ್ತಾರೆ. ಅವರವರ ಬದುಕಿನ ಹಿನ್ನೆಲೆಗೆ, ಅವರವರ ನಡವಳಿಕೆಗೆ, ಅವರವರ ಬದುಕಿನ ದಾರಿಗೆ ಪೂರಕವಾಗಿ ಉತ್ತರವನ್ನು ಕಂಡುಕೊಳ್ಳಬಹುದು.
ಇದೊಂದು ಓಪನ್ ಎಂಡ್ ಸಿನಿಮಾ. ಯಾರು ಏನು ಬೇಕಾದರೂ ಕಂಡುಕೊಳ್ಳಬಹುದು. ಕಷ್ಟವಾದರೆ ಬಿಟ್ಟೂಬಿಡಬಹುದು. ಉಪೇಂದ್ರ ಸೆಟ್‌ಗಳ ಮೂಲಕ ಇಲ್ಲಿ ಬೇರೆಯದೇ ಜಗತ್ತು ಕಟ್ಟಿದ್ದಾರೆ. ಒಂದು ಕತ್ತಲೆ ಜಗತ್ತು, ಇನ್ನೊಂದು ಬಣ್ಣದ ಜಗತ್ತು. ಕತ್ತಲೆ ಜಗತ್ತಲ್ಲಿ ಸಿಕ್ಕಿ ಹಾಕಿಕೊಂಡವರು ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಅಂಥವರಿಗೆ ಅಲ್ಲಿಂದ ಹೊರಬರುವುದಕ್ಕೆ ತಣ್ಣಗೆ ಒಂದು ದಿಕ್ಕನ್ನೂ ತೋರಿಸುತ್ತಾರೆ. ಅರ್ಥವಾದವರು ಹೊರಬರಲು ಪ್ರಯತ್ನ ಮಾಡಬಹುದು.
ಯುಐ ಸಿನಿಮಾದ ಹೆಚ್ಚುಗಾರಿಕೆ ಏನೆಂದರೆ ಇದು ಬೇರೆ ಸಿನಿಮಾಗಳ ಥರ ಇಲ್ಲ. ಅದದೇ ಫಾರ್ಮ್ಯಾಟ್ ಇಲ್ಲ. ಇಲ್ಲಿ ಹೊಳಹು ಹೊಳೆಸುವ ಪ್ರಯತ್ನ ಇದೆ. ಚೌಕಟ್ಟಿನಿಂದ ಆಚೆ ಯೋಚನೆಗೆ ಹಚ್ಚುವಂತೆ ಮಾಡುವ ಪ್ರಯತ್ನ ಇದೆ. ಹಾಗೇ ನೋಡಿದರೂ ಸಿನಿಮಾ ನೋಡಿಸಿಕೊಂಡು ಹೋಗುವಷ್ಟು ಕಳೆಗಟ್ಟಿದೆ. ಹಾಗಾಗಿ ಇದು ಪಕ್ಕಾ ಉಪೇಂದ್ರ ಬರೆದ ಸಿನಿಮಾ. ಇಂಥದ್ದೊಂದು ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟ ಅವರ ಧೈರ್ಯ, ವಿಷನ್‌ಗೆ ಮೆಚ್ಚುಗೆ.
ಚಿತ್ರ: ಯುಐ
ನಿರ್ದೇಶನ: ಉಪೇಂದ್ರ
ತಾರಾಗಣ: ಉಪೇಂದ್ರ, ರವಿಶಂಕರ್, ರೀಷ್ಮಾ ನಾಣಯ್ಯ, ಮೇದಿನಿ
ರೇಟಿಂಗ್: 4