ಶ್ರೀಮುರಳಿಗೆ ಪರಿಪೂರ್ಣ ಆ್ಯಕ್ಷನ್‌ ಹೀರೋ ಪಟ್ಟ ಕೊಟ್ಟ ಬಘೀರ

First Published | Nov 3, 2024, 2:18 PM IST

ಸೊಗಸಾಗಿರುವ ಆಶಯ ಹೊಂದಿರುವ ಕತೆ ಬಘೀರ. ನಾವೆಲ್ಲರೂ ಆಸೆ ಪಡುವಂತಹ, ಹೀಗೆಯೇ ಆಗಬೇಕು ಎಂದು ಹಂಬಲಿಸುವ ಕತೆ. ಹಾಗಾಗಿ ಬಘೀರ ಸ್ವಲ್ಪ ಹತ್ತಿರವಾಗುತ್ತಾನೆ. ಆದರೆ ಇಂಥಾ ಕತೆ ಹೊಸದಲ್ಲ. ಪುರಾಣ ಕಾಲದಿಂದಲೂ ಇದೆ. 

ರಾಜೇಶ್ ಶೆಟ್ಟಿ

ಕಷ್ಟದಲ್ಲಿರುವವರನ್ನು ಕಾಪಾಡುವುದಕ್ಕೆ ಯಾವುದೋ ಸಮಯದಲ್ಲಿ ಯಾರೋ ಒಬ್ಬರು ಬಂದೇ ಬರುತ್ತಾರೆ ಅನ್ನುವುದು ಕತೆ. ಆ ಕ್ಷಣಕ್ಕಾಗಿ ಸಂಕಟದಲ್ಲಿರುವವರ ಜೊತೆ ಪ್ರೇಕ್ಷಕರೆಲ್ಲರೂ ಕಾಯುತ್ತಾ ಇರುತ್ತಾರೆ. ಆ ಸಮಯದಲ್ಲಿ ಒಬ್ಬ ಸೂಪರ್‌ಮ್ಯಾನ್‌ ಬರುತ್ತಾನೆ. ಅವನು ಎಲ್ಲರನ್ನೂ ಹಗುರಗೊಳಿಸುತ್ತಾನೆ. ಅದು ಈ ಸಿನಿಮಾದ ಕತೆ.

ಸೊಗಸಾಗಿರುವ ಆಶಯ ಹೊಂದಿರುವ ಕತೆ. ನಾವೆಲ್ಲರೂ ಆಸೆ ಪಡುವಂತಹ, ಹೀಗೆಯೇ ಆಗಬೇಕು ಎಂದು ಹಂಬಲಿಸುವ ಕತೆ. ಹಾಗಾಗಿ ಬಘೀರ ಸ್ವಲ್ಪ ಹತ್ತಿರವಾಗುತ್ತಾನೆ. ಆದರೆ ಇಂಥಾ ಕತೆ ಹೊಸದಲ್ಲ. ಪುರಾಣ ಕಾಲದಿಂದಲೂ ಇದೆ. ಕಾಲ ಕಾಲಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಾ ಬಂದಿದೆ. ಅದರಂತೆ ಇಲ್ಲಿ ಹೊಸ ಕಾಲದ ಚಿತ್ರಕತೆ ಇದೆ. ಹೊಸ ವಾತಾವರಣ ಇದೆ. ಹೊಸ ಜಗತ್ತು ಇದೆ. 
 

Tap to resize

ಅದಕ್ಕಾಗಿ ನಿರ್ದೇಶಕರಿಗೆ ಮೆಚ್ಚುಗೆ ಸಲ್ಲಬೇಕು. ಅವರು ಮೊದಲಾರ್ಧವನ್ನು ಬಹಳ ವೇಗವಾಗಿ ಹೇಳಿಕೊಂಡು ಹೋಗಿದ್ದಾರೆ. ದ್ವಿತೀಯಾರ್ಧದಲ್ಲಿ ಸಂಯಮದಿಂದ ಬಿಟ್ಟ ಸ್ಥಳ ತುಂಬುತ್ತಾ ಹೋಗಿದ್ದಾರೆ. ಜೊತೆಗೆ ಒಬ್ಬ ಪರಿಪೂರ್ಣ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿರುವ ಶ್ರೀಮುರಳಿ ನಿಜಕ್ಕೂ ಅಭಿನಂದನಾರ್ಹರು. ಮಾತು ಕಮ್ಮಿ, ಆ್ಯಕ್ಷನ್ ಜಾಸ್ತಿ. ಕಟುತ್ವ, ಪ್ರಾಮಾಣಿಕತೆ, ಅಸಹಾಯಕತೆ ಎಲ್ಲವನ್ನೂ ಮನ ಮುಟ್ಟುವಂತೆ ದಾಟಿಸಿದ್ದಾರೆ.
 

ತಾಯಿ ಸೆಂಟಿಮೆಂಟು, ಪ್ರೇಮದ ಖುಷಿ, ವಿರಹದ ನೋವು ಎಲ್ಲವನ್ನೂ ಈ ಸಿನಿಮಾ ದಾಟಿಸುತ್ತದೆ. ಅಲ್ಲಲ್ಲಿ ಹಳೇ ಛಾಯೆಗಳು ಕಂಡುಬಂದರೂ ತಾಂತ್ರಿಕ ಶ್ರೀಮಂತಿಕೆ ಗಮನ ಸೆಳೆಯುತ್ತದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಮಂತ್ರಮುಗ್ಧಗೊಳಿಸುವಷ್ಟು ಸಶಕ್ತ. ಇಂಟರ್ವಲ್‌ ಬ್ಲಾಕ್‌ನಲ್ಲಿ ಬರುವ ದೇವರ ಶ್ಲೋಕ ಹೈಲೈಟ್. ಪ್ರಕಾಶ್ ರೈ ಪಾತ್ರ ಖುಷಿ ಕೊಡುತ್ತದೆ. ರಂಗಾಯಣ ರಘು ಆಪ್ತರಾಗುತ್ತಾರೆ. 

ರುಕ್ಮಿಣಿ ವಸಂತ್‌ಗೆ ಹೆಚ್ಚು ಸ್ಪೇಸ್ ಇಲ್ಲವಾದರೂ ಅವರ ನಗುವಿನಿಂದಲೇ ಮನಸ್ಸಲ್ಲಿ ಉಳಿಯುತ್ತಾರೆ. ಉ‍ಳಿದಂತೆ ಇಲ್ಲಿ ಎಲ್ಲರೂ ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾ ಮುಗಿದ ಮೇಲೂ ಕೆಲವು ದೃಶ್ಯಗಳು ನೆನಪಲ್ಲಿ ಉಳಿಯುತ್ತವೆ ಅನ್ನುವುದೇ ಈ ಸಿನಿಮಾದ ಶಕ್ತಿ.

Latest Videos

click me!