ಪಾಯಸಕ್ಕೆ ಬೇಕಾಗುವ ಗಸಗಸೆ ಭಾರತದಲ್ಲಿ ಬೆಳೆ ಬೆಳೆಯೋದು ಅಪರಾಧ! ಆದ್ರೆ ಮಾರೋದು ಲೀಗಲ್ ಏಕೆ?

Published : Oct 15, 2026, 09:06 PM IST

ಗಸಗಸೆ ಪಾಯಸ ಬಾಯಿ ಚಪ್ಪರಿಸಿ ತಿನ್ನೋಕೆ ಬಲು ಇಷ್ಟ. ಆದರೆ, ಭಾರತದಲ್ಲಿ ಗಸಗಸೆ ಬೆಳೆಯನ್ನು ಸರ್ಕಾರದ ಅನುಮತಿ ಇಲ್ಲದೆ ಬೆಳೆಯುವುದು ಅಪರಾಧ. ಆದರೆ ಅದೇ ಬೆಳೆಯ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಮಾರಾಟ ಮಾಡುತ್ತಾರೆ. ಇದರ ಹಿಂದಿನ ಕಾರಣವೇನು ಗೊತ್ತಾ?

PREV
16

ನಮ್ಮ ದೇಶದಲ್ಲಿ ರೈತರು ಕೆಲವು ಬೆಳೆಗಳನ್ನು ಮುಕ್ತವಾಗಿ ಬೆಳೆಯಬಹುದು. ಆದರೆ, ಕೆಲವು ಬೆಳೆಗಳ ಮೇಲೆ ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧ ಹಾಕಿದೆ. ಅಂಥ ಬೆಳೆಗಳಲ್ಲಿ ಗಸಗಸೆ (Opium Poppy) ಕೂಡ ಒಂದು. ಈ ಗಿಡದಿಂದ ಅಫೀಮು ಎಂಬ ಮಾದಕ ವಸ್ತು ಸಿಗುತ್ತದೆ. ಹಾಗಾಗಿ ಸರ್ಕಾರ ಇದರ ಕೃಷಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಆದರೆ, ಇದೇ ಗಿಡದಿಂದ ಸಿಗುವ ಗಸಗಸೆ ಬೀಜಗಳನ್ನು ನಾವು ಅಡುಗೆಯಲ್ಲಿ ಬಳಸುತ್ತೇವೆ. ಅನುಮತಿ ಇಲ್ಲದೆ ಗಸಗಸೆ ಬೆಳೆಯುವುದು ಅಪರಾಧವಾದರೆ, ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಹೇಗೆ ಸಾಧ್ಯ? ಇದರ ಹಿಂದಿರುವ ಕಾನೂನು ನಿಯಮಗಳನ್ನು ಈಗ ತಿಳಿಯೋಣ.

26

ಗಸಗಸೆ ಗಿಡದ ವೈಜ್ಞಾನಿಕ ಹೆಸರು ಪಪಾವರ್ ಸೋಮ್ನಿಫೆರಮ್ (Papaver somniferum). ಈ ಗಿಡದಿಂದ ಅಫೀಮು (Opium) ಸಿಗುತ್ತದೆ. ಅಫೀಮಿನಲ್ಲಿ ಮಾರ್ಫಿನ್‌ನಂತಹ ಔಷಧೀಯ ಗುಣಗಳಿರುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ನೋವು ನಿವಾರಕವಾಗಿ ಇದನ್ನು ಬಳಸುತ್ತಾರೆ. ಆದರೆ, ಇದೇ ಗಿಡದಿಂದ ಸಿಗುವ ಕೆಲವು ವಸ್ತುಗಳನ್ನು ಮಾದಕ ದ್ರವ್ಯಗಳ ತಯಾರಿಕೆಯಲ್ಲೂ ಬಳಸುತ್ತಾರೆ.

ಈ ಕಾರಣಕ್ಕಾಗಿ ಗಸಗಸೆ ಕೃಷಿ, ಅಫೀಮು ಉತ್ಪಾದನೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟದ ಮೇಲೆ ಸರ್ಕಾರ ವಿಶೇಷ ನಿಯಂತ್ರಣಗಳನ್ನು ಹೇರಿದೆ. ಅನುಮತಿ ಇಲ್ಲದೆ ಈ ಬೆಳೆ ಬೆಳೆಯುವುದನ್ನು ಸಾಮಾನ್ಯ ಕೃಷಿ ಎಂದು ಪರಿಗಣಿಸುವುದಿಲ್ಲ. ರೈತರು ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು.

36

ಭಾರತದಲ್ಲಿ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯ್ದೆ, 1985ರ ಅಡಿಯಲ್ಲಿ ಅಫೀಮು ಗಸಗಸೆ ಕೃಷಿಯನ್ನು ನಿಯಂತ್ರಿಸಲಾಗುತ್ತದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಯಮಗಳ ಪ್ರಕಾರ, ಅನುಮತಿ ಪಡೆದ ಪ್ರದೇಶಗಳಲ್ಲಿ ಮಾತ್ರ ಲೈಸೆನ್ಸ್ ಪಡೆದು ಈ ಬೆಳೆ ಬೆಳೆಯಬಹುದು.

ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ (CBN) ಈ ಕೃಷಿಯ ಲೈಸೆನ್ಸ್ ಮತ್ತು ಉಸ್ತುವಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಲೈಸೆನ್ಸ್ ಪಡೆದ ರೈತರು ಕೂಡ ಸರ್ಕಾರ ನಿಗದಿಪಡಿಸಿದ ಜಮೀನು, ಕೃಷಿ ವಿಧಾನ ಮತ್ತು ಇಳುವರಿ ನಿಯಮಗಳಿಗೆ ಬದ್ಧರಾಗಿರಬೇಕು. ಅನುಮತಿ ಇಲ್ಲದೆ ಬೆಳೆದರೆ ಅಥವಾ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

46

ಅಸಲು ವಿಷಯ ಇರುವುದೇ ಇಲ್ಲಿ. ಗಸಗಸೆ ಗಿಡದಿಂದ ಸಿಗುವ ಎಲ್ಲಾ ವಸ್ತುಗಳ ಮೇಲೂ ಒಂದೇ ರೀತಿಯ ನಿಷೇಧವಿಲ್ಲ. ಅಡುಗೆಯಲ್ಲಿ ಬಳಸುವ ಗಸಗಸೆ ಬೀಜಗಳು (Poppy Seeds) ಮತ್ತು ಅಫೀಮು (Opium) ಎರಡೂ ಒಂದೇ ಅಲ್ಲ. ಗಸಗಸೆ ಬೀಜಗಳನ್ನು ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಇವುಗಳನ್ನು ಕಾನೂನುಬದ್ಧ ಮೂಲಗಳಿಂದ ಸಂಗ್ರಹಿಸಿ, ನಿಯಮಗಳ ಪ್ರಕಾರ ಮಾರಾಟ ಮಾಡಬಹುದು. ಆದರೆ ಅಫೀಮು ಉತ್ಪಾದನೆ ಮತ್ತು ಮಾರಾಟದ ಮೇಲೆ ವಿಶೇಷ ಕಾನೂನು ನಿಯಂತ್ರಣಗಳಿರುತ್ತವೆ.

ಹಾಗಾಗಿ ಮಾರುಕಟ್ಟೆಯಲ್ಲಿ ಗಸಗಸೆ ಮಾರುತ್ತಿದ್ದಾರೆ ಎಂದ ಮಾತ್ರಕ್ಕೆ, ಅದನ್ನು ಬೆಳೆಯುವ ಎಲ್ಲರಿಗೂ ಅನುಮತಿ ಇದೆ ಎಂದು ಭಾವಿಸಬಾರದು. ಹಾಗೆಯೇ ಗಸಗಸೆ ಮಾರಾಟಕ್ಕೆ ಅನುಮತಿ ಇದೆ ಎಂದು ಯಾರೂ ಬೇಕಾದರೂ ಅಫೀಮು ಬೆಳೆಯನ್ನು ಮುಕ್ತವಾಗಿ ಬೆಳೆಯುವಂತಿಲ್ಲ. ಕೃಷಿ, ಉತ್ಪಾದನೆ ಮತ್ತು ಮಾರಾಟಕ್ಕೆ ಅನ್ವಯಿಸುವ ಕಾನೂನುಗಳು ಬೇರೆ ಬೇರೆಯಾಗಿವೆ.

56

ಭಾರತದಲ್ಲಿ ಅಫೀಮು ಉತ್ಪಾದನೆಗಾಗಿ ಗಸಗಸೆ ಬೆಳೆಯಲು ಕೇಂದ್ರ ಸರ್ಕಾರ ನಿಗದಿಪಡಿಸಿದ ಪ್ರದೇಶಗಳಲ್ಲಿ ಮಾತ್ರ ಅವಕಾಶವಿದೆ. ಪ್ರಸ್ತುತ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ಕೃಷಿ ನಡೆಯುತ್ತಿದೆ. ಅರ್ಹ ರೈತರಿಗೆ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ (CBN) ಲೈಸೆನ್ಸ್ ನೀಡುತ್ತದೆ.

ಲೈಸೆನ್ಸ್ ಪಡೆದ ರೈತರು ತಾವು ಬೆಳೆದ ಅಫೀಮನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಳುವರಿ ಸಂಗ್ರಹಣೆ, ಗುಣಮಟ್ಟ ಪರಿಶೀಲನೆ ಮತ್ತು ರೈತರಿಗೆ ಹಣ ಪಾವತಿಸುವ ಪ್ರಕ್ರಿಯೆಗಳು ಸರ್ಕಾರದ ಉಸ್ತುವಾರಿಯಲ್ಲೇ ನಡೆಯುತ್ತವೆ. ಈ ಮೂಲಕ ವೈದ್ಯಕೀಯ ಮತ್ತು ವೈಜ್ಞಾನಿಕ ಅಗತ್ಯಗಳಿಗೆ ಬೇಕಾದ ಅಫೀಮು ಉತ್ಪಾದನೆಯನ್ನು ನಿಯಂತ್ರಿಸಲಾಗುತ್ತದೆ.

66

ಒಟ್ಟಾರೆಯಾಗಿ ಹೇಳಬೇಕೆಂದರೆ..

ಗಸಗಸೆ ಗಿಡದಿಂದ ಅಫೀಮು ಸಿಗುವ ಕಾರಣ ಅದರ ಕೃಷಿಯ ಮೇಲೆ ಭಾರತ ಸರ್ಕಾರ ಕಠಿಣ ನಿಯಂತ್ರಣ ಹೇರಿದೆ. ಆದರೆ ಆಹಾರದಲ್ಲಿ ಬಳಸುವ ಗಸಗಸೆ ಮಾರಾಟ ಮತ್ತು ಅಫೀಮು ಉತ್ಪಾದನೆ ಎರಡೂ ಒಂದೇ ಕಾನೂನಿನಡಿ ಬರುವುದಿಲ್ಲ. ಅನುಮತಿ ಇಲ್ಲದೆ ಅಫೀಮು ಗಸಗಸೆ ಬೆಳೆಯುವುದು ಅಪರಾಧ. ಆದರೆ ಕಾನೂನುಬದ್ಧವಾಗಿ ಪಡೆದ ಗಸಗಸೆ ಬೀಜಗಳನ್ನು ನಿಯಮಗಳ ಪ್ರಕಾರ ಮಾರಾಟ ಮಾಡುವುದು ಸಂಪೂರ್ಣ ಲೀಗಲ್.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories