ನೀವು ಎಂದಾದರೂ ಶೂ, ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆಯಲು ಪ್ರಯತ್ನಿಸಿದ್ದೀರಾ? ಅಥವಾ ಬರಿಗಾಲಿನಲ್ಲಿ ನಡೆದಿದ್ದೀರಾ? ಬರಿಗಾಲಿನಲ್ಲಿ ನಡೆಯುವುದರಿಂದ ನಿಮ್ಮ ಹೃದಯದ ಆರೋಗ್ಯ, ರಕ್ತದೊತ್ತಡ ಸೇರಿದಂತೆ ಹಲವು ಪ್ರಯೋಜನಗಳಿವೆ. ಕಾಲು ನೋವನ್ನು ಕಡಿಮೆ ಮಾಡುವುದರ ಜೊತೆಗೆ ಬರಿಗಾಲಿನಲ್ಲಿ ನಡೆಯುವುದು ಅಥವಾ ಕೆಲಸ ಮಾಡುವುದರಿಂದ ನೋವು ಮತ್ತು ಊತ ಕಡಿಮೆಯಾಗುವುದು, ನಿದ್ರೆ ಸುಧಾರಿಸುವುದು, ರೋಗನಿರೋಧಕ ಶಕ್ತಿ, ಮಾನಸಿಕ ಒತ್ತಡ ಕಡಿಮೆಯಾಗುವುದು ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುವುದು ಮುಂತಾದ ಹಲವು ಪ್ರಯೋಜನಗಳಿವೆ. ಬರಿಗಾಲಿನಲ್ಲಿ ನಡೆಯುವುದರಿಂದ ಪಾದದ ಸ್ಥಿತಿಯನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದರ ಜೊತೆಗೆ ನಿಮ್ಮ ಪಾದಗಳು ನೆಲಕ್ಕೆ ತಾಕುವಾಗ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ.
ಜೊತೆಗೆ ಕಾಲುಗಳ ಸ್ನಾಯುಗಳು ಮತ್ತು ಅಸ್ಥಿರಜ್ಜುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ಬರಿಗಾಲಿನಲ್ಲಿ ನಡೆಯಲು ಪ್ರಾರಂಭಿಸಿದಾಗ, ಅದು ನಿಮ್ಮ ಕಣಕಾಲು ಮತ್ತು ಪಾದಗಳ ಚಲನೆಯ ವ್ಯಾಪ್ತಿಯನ್ನು ಸುಧಾರಿಸುತ್ತದೆ ಮತ್ತು ಕಣಕಾಲು, ಮೊಣಕಾಲು ಮತ್ತು ಸೊಂಟದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದಕ್ಕೂ ಮೊದಲು ಬರಿಗಾಲಿನಲ್ಲಿ ನಡೆಯಲು ಪ್ರಯತ್ನಿಸದವರು, ಮೊದಲು ಕೆಲವು ನಿಮಿಷಗಳ ಕಾಲ ಅಭ್ಯಾಸ ಮಾಡಬೇಕು. ನಂತರ ಕ್ರಮೇಣ ಬರಿಗಾಲಿನಲ್ಲಿ ನಡೆಯಬಹುದು.