ಮುಂಬೈನಲ್ಲಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 20 ವರ್ಷದ ಯುವತಿಯ ಮೇಲೆ ಹಲವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆ ಐದು ತಿಂಗಳ ಗರ್ಭಿಣಿಯಾದ ನಂತರ ಘೋರ ಕೃತ್ಯ ಬೆಳಕಿಗೆ ಬಂದಿದ್ದು, ಡಿಎನ್‌ಎ ಪರೀಕ್ಷೆ ವರದಿ ನೋಡಿ ಕುಟುಂಬದವರು ಆಘಾತಕ್ಕೀಡಾಗಿದ್ದಾರೆ.
ಹೆಣ್ಣು ತಾಯಿ ಗರ್ಭದಲ್ಲೂ ಸುರಕ್ಷಿತಳಲ್ಲ, ಆಕೆಯ ಸ್ವಂತ ಮನೆಯಲ್ಲೂ ಸುರಕ್ಷಿತಳಲ್ಲ, ಆಕೆಗೆ ಕಾವಲು ಆಗಿರಬೇಕಾದ ವ್ಯಕ್ತಿಗಳೇ ಕಾಮಪಿಪಾಸುಗಳಾಗಿ ಆಕೆಯ ಮೇಲೆರಗುತ್ತಿದ್ದಾರೆ. ಹೌದು ಮಹಾರಾಷ್ಟ್ರದ ಮುಂಬೈನಲ್ಲಿ ಇಂತಹದೊಂದು ನಾಗರಿಕ ಸಮಾಜ ತಲೆತಗ್ಗಿಸಬೇಕಾದಂತಹ ಘಟನೆ ನಡೆದಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ 20 ವರ್ಷದ ಯುವತಿಗೆ ರಕ್ಷಣೆ ನೀಡಬೇಕಾದ ತಂದೆಯೇ ಆಕೆಯ ಮೇಲೆ ಮುಗಿ ಬಿದ್ದಿದ್ದಾನೆ. ಬರೀ ಆತ ಮಾತ್ರ ಅಲ್ಲ ಆಕೆಯ ಮಾನಸಿಕ ಅಸ್ವಸ್ಥತೆಯನ್ನೇ ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ಹಲವರು ಅತ್ಯಾ*ಚಾರವೆಸಗಿದ್ದು, ಇತ್ತೀಚೆಗೆ ಆಕೆ 5 ತಿಂಗಳ ಗರ್ಭಿಣಿಯಾದ ನಂತರ ಈ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
26
ಡಿಎನ್‌ಎ ಪರೀಕ್ಷೆಯಿಂದ ತಂದೆಯ ಕರಾಳ ಮುಖ ಬಯಲು
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಯವರಿಗೆ ಅನುಮಾನವಿದ್ದ ಹಲವು ಯುವಕರನ್ನು ಹಿಡಿದು ಡಿಎನ್‌ಎ ಪರೀಕ್ಷೆ ಮಾಡಿದ್ದು, ಈ ವೇಳೆ ಆಕೆಯನ್ನು ಗರ್ಭಿಣಿ ಮಾಡಿದ್ದು, ಆಕೆಯ ಹುಟ್ಟಿಗೆ ಕಾರಣವಾದ ತಂದೆಯೇ ಎಂಬುದು ಗೊತ್ತಾಗಿದೆ. ಡಿಎನ್‌ಎ ಪರೀಕ್ಷೆಯ ನಂತರ ಪೊಲೀಸರು ಆಕೆಯ ತಂದೆಯನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಆಕ್ಟೋಬರ್ 2025ರಲ್ಲಿ ಬೆಳಕಿಗೆ ಬಂದಿತ್ತು. ಕುಫ್ಫ್ ಪೆರೇಡ್ ಪೊಲೀಸರಿಗೆ(Cuffe Parade police)ದಕ್ಷಿಣ ಮುಂಬೈನಲ್ಲಿರುವ ಕಾಮಾ & ಆಲ್ಬ್ಲೆಸ್ ಆಸ್ಪತ್ರೆ(Cama & Albless Hospital)ಯಿಂದ ಕರೆಯೊಂದು ಬಂದಿದ್ದು, ಮಾನಸಿಕ ಅಸ್ವಸ್ಥ ಹುಡುಗಿಯೊಬ್ಬಳು ನಮ್ಮ ಆರೈಕೆಯಲ್ಲಿ ಇದ್ದು, ಸೊಂಟ ನೋವು ಕಾಣಿಸಿಕೊಂಡ ನಂತರ ಆಕೆ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಳು, ಆಕೆ ಈಗ 5 ತಿಂಗಳ ಗರ್ಭಿಣಿ ಎಂದು ಪೊಲೀಸರಿಗೆ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ.
36
ಸಂತ್ರೆಸ್ತೆ ಸರಿಯಾಗಿ ಮಾತು ಬಾರದ ಕಾರಣ 16 ವ್ಯಕ್ತಿಗಳ ಡಿಎನ್‌ಎ ಪರೀಕ್ಷೆ ಮಾಡಿದ್ದ ಪೊಲೀಸರು
ಈ ವಿಚಾರ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ನಂತರ ವಿಚಾರಣೆ ಕೈಗೆತ್ತಿಕೊಂಡಾಗ ಆಕೆಯ ಈ ಮಾನಸಿಕ ಅಸ್ವಸ್ಥತೆಯ ಲಾಭ ಪಡೆದು ಅನೇಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ತಿಳಿದು ಬಂತು. ಮಹಿಳೆ ಮಾತನಾಡಲು ಸಾಧ್ಯವಾಗದ ಕಾರಣ, ಪೊಲೀಸರು ವ್ಯಾಪಕ ತನಿಖೆ ನಡೆಸಿ, ಆಕೆಯ ತಂದೆ, ಇತರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಸೇರಿದಂತೆ ಅವಳನ್ನು ಸಂಪರ್ಕಿಸಿದ ಸುಮಾರು 16 ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಅವರ ಡಿಎನ್‌ಎ ಮಾದರಿಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಿದರು.
ನಂತರ ಆಕೆಯ ಗರ್ಭಧಾರಣೆಯನ್ನು ಅಬಾರ್ಷನ್ ಮಾಡಲಾಗಿದ್ದು, ಆಕೆಯ ಭ್ರೂಣದ ಡಿಎನ್‌ಎಯನ್ನು ಕಲಿನಾ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ(Kalina Forensic Science Laboratory ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 27 ರಂದು, ಪ್ರಯೋಗಾಲಯದ ವಿಧಿವಿಜ್ಞಾನ ವರದಿಗಳು ಬಂದಿದ್ದು, ಭ್ರೂಣದ ಡಿಎನ್‌ಎ ತಂದೆಯ ಡಿಎನ್‌ಎ ಜೊತೆ ಹೊಂದಾಣಿಕೆಯಾಗಿದ್ದು, ನಂತರ ಆತನನ್ನು ಬಂಧಿಸಲಾಗಿದೆ.
56
ಆರಂಭದಲ್ಲಿ ಇಬ್ಬರ ಬಂಧಿಸಿದ್ದ ಪೊಲೀಸರು
ನಾವು ಮೊದಲಿಗೆ 16 ವರ್ಷದ ಓರ್ವ ಹಾಗೂ 32 ವರ್ಷದ ಮತ್ತೊರ್ವ ಯುವಕನನ್ನು ಬಂಧಿಸಿದೆವು ಅವರಿಬ್ಬರು ಕಫೆ ಪರೇಡ್‌ನ ಕೊಳೆಗೇರಿ ನಿವಾಸಿಗಳಾಗಿದ್ದು, ಸಂತ್ರಸ್ತೆ ಫೋಟೋ ಹಾಗೂ ವೀಡಿಯೋದ ಸಹಾಯದಿಂದ ಇವರನ್ನು ಗುರುತಿಸಿದ್ದಳು. ಅವರಿಬ್ಬರ ಮೇಲೆ ಚಾರ್ಜ್‌ಶೀಟ್ ಹಾಕಲಾಗಿದೆ, ಆದರೆ ಈಗ ಡಿಎನ್‌ಎ ಪರೀಕ್ಷೆ ವರದಿ ನಂತರ ಈ ಕೃತ್ಯದಲ್ಲಿ ತಂದೆಯೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಕೆಗೆ ತಂದೆಯಿಂದ ಬೆದರಿಕೆ ಇತ್ತೋ ಗೊತ್ತಿಲ್ಲ, ಆಕೆ ಆರಂಭದಲ್ಲಿ ಆತನ ಹೆಸರನ್ನು ಹೇಳಿರಲಿಲ್ಲ, ಆದರೆ ಇತ್ತೀಚಿನ ಕೌನ್ಸೆಲಿಂಗ್ ಅವಧಿಗಳ ಸಮಯದಲ್ಲಿ, ತನ್ನ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ಬಹಿರಂಗಪಡಿಸಿದಳು, ಆದರೆ ಆತನ ಬಂಧನವಾದರೆ ಎಂದು ಆಕೆ ಭಯಗೊಂಡಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತೆ ತನ್ನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ವಿಚಾರದಲ್ಲಿ ಮಿತಿಗಳು ಇದ್ದಿದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣದ ತನಿಖೆ ನಡೆಸುತ್ತಿರುವ ಸಹಾಯಕ ಪೊಲೀಸ್ ನಿರೀಕ್ಷಕಿ ಅಶ್ವಿನಿ ಪಾಟೀಲ್, ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಪ್ರಚಾರ ಮತ್ತು ಸಂರಕ್ಷಣೆಗಾಗಿ ಕೆಲಸ ಮಾಡುವ ಲಾಭರಹಿತ ಸಂಸ್ಥೆ ವಿಧಾಯಕ್ ಭಾರತಿ ಅವರ ಸಹಾಯವನ್ನು ಪಡೆದರು. ನಾವು ಹುಡುಗಿಯೊಂದಿಗೆ ಮಾತನಾಡಲು ವಿವಿಧ ಥೆರಪಿಗಳನ್ನು ಬಳಸಿಕೊಂಡೆವು ಎಂದು ವಿಧಾಯಕ್ ಭಾರತಿಯ ಲೀನಾ ಪಟಾಡೆ ಹೇಳಿದ್ದಾರೆ. ಅವಳು ತೀವ್ರವಾಗಿ ನೊಂದಿದ್ದಳು ಮತ್ತು ಭಯಭೀತಳಾಗಿದ್ದಳು ಮತ್ತು ಘಟನೆಯ ಬಗ್ಗೆ ಏನನ್ನೂ ಹಂಚಿಕೊಳ್ಳಲು ಆಕೆಗೆ ಇಷ್ಟವಿರಲಿಲ್ಲ. ಆರೋಪಿಗಳು ಈ ಬಗ್ಗೆ ಯಾರೊಂದಿಗೂ ಮಾತನಾಡದಂತೆ ಆಕೆಗೆ ಎಚ್ಚರಿಕೆ ನೀಡಿದಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ