ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ, ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪುರುಷರಿಂದ ಬೇಸತ್ತ ನೂರಾರು ಮಹಿಳೆಯರು ಮದ್ಯದಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 15 ಲಕ್ಷ ಮೌಲ್ಯದ ಮದ್ಯವನ್ನು ರಸ್ತೆಗೆಸೆದು ನಾಶಪಡಿಸಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.
ಸರಾಯಿ ಕುಡಿದು ಬಂದು ತೀವ್ರ ಕಿರುಕುಳ ನೀಡುತ್ತಿದ್ದ ಮನೆಯ ಪುರುಷರ ಕಿರುಕುಳ ತಾಳಲಾರದೇ ಸಿಟ್ಟಿಗೆದ್ದ ನೂರಾರು ಮಹಿಳೆಯರು ಇದಕ್ಕೊಂದು ಶಾಶ್ವತ ಪರಿಹಾರ ಮಾಡಬೇಕೆಂದು ನಿರ್ಧರಿಸಿ ಮದ್ಯದಂಗಡಿ ಮೇಲೆ ದಾಳಿ ನಡೆಸಿ ಸುಮಾರು 15 ಲಕ್ಷ ಮೌಲ್ಯದ ಮದ್ಯವನ್ನು ನಾಶ ಮಾಡಿದ್ದಾರೆ. ಉತ್ತರರ ಪ್ರದೇಶದ ಲಲಿತ್‌ಪುರದಲ್ಲಿ ಈ ಘಟನೆ ನಡೆದಿದೆ. ಮದ್ಯದಂಗಡಿಯನ್ನು ಬಂದ್ ಮಾಡುವಂತೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ 100ಕ್ಕೂ ಹೆಚ್ಚು ಮಹಿಳೆಯರು ಏಕಕಾಲಕ್ಕೆ ಮದ್ಯದಂಗಡಿ ಮೇಲೆ ದಾಳಿ ಮಾಡಿದ್ದು ಅಂಗಡಿಯ ಬೀಗವನ್ನು ಮುರಿದು ಸುಮಾರು 15 ಲಕ್ಷ ಮೌಲ್ಯದ ಮದ್ಯವನ್ನು ಬೀದಿಗೆಸೆದು ಧ್ವಂಸಗೊಳಿಸಿದ್ದಾರೆ.
25
ಮದ್ಯದ ಬಾಟಲಿ ರಸ್ತೆಗೆಸೆದು ಒಡೆದ ಮಹಿಳೆಯರು
ಎರಡು ಗುಂಪುಗಳಾಗಿ ತಮ್ಮನ್ನು ತಾವೇ ವಿಭಜಿಸಿಕೊಂಡ ಮಹಿಳೆಯರು ಒಂದು ಗುಂಪು ಮದ್ಯದ ಪ್ಯಾಕೇಟ್‌ನ್ನು ರಸ್ತೆಗೆ ಎಸೆದರೆ ಇನ್ನೊಂದು ಗುಂಪು ಆ ಬಾಟಲಿಗಳನ್ನು ಕೋಲುಗಳಿಂದ ಒಡೆದು ಹಾಕಿತು. ಇದರಿಂದ ರಸ್ತೆಯಲ್ಲಿ ಶರಾಬಿನ ಹೊಳೆಯೇ ಹರಿದಿದೆ. ಘಟನೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ವಿಚಾರ ತಿಳಿದು ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದರಾದರೂ ಕಡಿಮೆ ಸಂಖ್ಯೆಯಲ್ಲಿದ್ದ ಅವರಿಗೆ ಮಹಿಳೆಯರನ್ನು ತಡೆಯಲು ಧೈರ್ಯ ಸಾಕಾಗಲಿಲ್ಲ ಎಂದು ವರದಿಯಾಗಿದೆ.
35
ಮದ್ಯದಂಗಡಿ ಧ್ವಂಸ ಮಾಡಿ ಮನೆಗೆ ಮರಳಿದ ಮಹಿಳೆಯರು
ಲಲಿತಪುರ ನಗರದಲ್ಲಿದ್ದ ಎರಡೂ ಮದ್ಯದಂಗಡಿಗಳನ್ನು ಧ್ವಂಸ ಮಾಡಿದ ನಂತರ ಮಹಿಳೆಯರು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಮಹಿಳೆಯರ ಈ ಉಗ್ರ ಪ್ರತಿಭಟನೆಯಿಂದಾಗಿ ಸಮಯದಲ್ಲಿ, ಸುಮಾರು ಒಂದು ಗಂಟೆ ಕಾಲ 2 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಸುಮಾರು 5 ಠಾಣೆಗಳಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಆ ಹೊತ್ತಿಗೆ ಅಲ್ಲಿ ಎಲ್ಲಾ ಮುಗಿದು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿತ್ತು. ನಂತರ ಪೊಲೀಸರು ರಸ್ತೆಯಲ್ಲಿ ಹರಡಿಕೊಂಡಿದ್ದ ಮದ್ಯದ ಬಾಟಲಿಗಳನ್ನು ತೆಗೆದು ಸಂಚಾರ ಸುಗಮಗೊಳಿಸಿದರು. ಮಹ್ರೌನಿ-ಲಲಿತಪುರ ರಸ್ತೆಯ ಖಿತ್ವಾನ್ಸ್ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಏಪ್ರಿಲ್ 2025 ರಲ್ಲಿ ಖಿತ್ವಾನ್ಸ್ ಗ್ರಾಮದಲ್ಲಿ ಬಳಿ ಒಂದು ಮದ್ಯದ ಅಂಗಡಿಯನ್ನು ತೆರೆಯಲಾಗಿತ್ತು. ಅದಕ್ಕೆ ಸಮೀಪದ ಹಳ್ಳಿಯಲ್ಲೂ ಒಂದು ಮದ್ಯದ ಅಂಗಡಿಯೂ ಇತ್ತು ಎರಡೂ ಅಂಗಡಿಗೂ ಮಾಲೀಕ ಒಬ್ಬನೇ ಆಗಿದ್ದು, ಇಲ್ಲಿ ಮದ್ಯದ ಅಂಗಡಿ ತೆರೆದಾಗಿನಿಂದ ರಸ್ತೆಯಲ್ಲಿ ನಡೆದಾಡುವುದು ಕಷ್ಟಕರವಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಇಲ್ಲಿ ಕುಡುಕರು ಮಹಿಳೆಯರು ಮತ್ತು ಹುಡುಗಿಯರ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಹಳ್ಳಿಯ ಚಿಕ್ಕ ಮಕ್ಕಳು ಕೂಡ ಹಾಳಾಗುತ್ತಿದ್ದಾರೆ. ಕುಡುಕರು ಹೆಚ್ಚಾಗಿ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 12:30 ರ ಸುಮಾರಿಗೆ ಸುಮಾರು 100 ಮಹಿಳೆಯರು ಮದ್ಯದಂಗಡಿ ಮುಚ್ಚುವಂತೆ ಒತ್ತಾಯಿಸಿ ಅಂಗಡಿಯ ಮುಂದೆ ಪ್ರತಿಭಟನೆ ಆರಂಭಿಸಿದರು. ಗದ್ದಲವನ್ನು ನೋಡಿದ ಅಂಗಡಿಯ ಮಾರಾಟಗಾರ ಹಿತೇಂದ್ರ ಕುಮಾರ್, ಶಟರ್ ತೆಗೆದು, ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಹಿಳೆಯರು ಎರಡೂ ಅಂಗಡಿಗಳಿಗೆ ನುಗ್ಗಿ ಬೀಗಗಳನ್ನು ಮುರಿದು ಒಳಗೆ ಪ್ರವೇಶಿಸಿ ಅಲ್ಲಿದ್ದ ಲೋಕಲ್ ಮದ್ಯ ವಿದೇಶಿ ಮದ್ಯ ಮತ್ತು ಬಿಯರ್ ಡಬ್ಬಿಗಳ ಪೆಟ್ಟಿಗೆಗಳನ್ನು ರಸ್ತೆಗೆ ಎಸೆಯಲು ಪ್ರಾರಂಭಿಸಿದರು. ಕೆಲವು ಮಹಿಳೆಯರು ಅವುಗಳನ್ನು ಒಡೆಯಲು ಪ್ರಾರಂಭಿಸಿದರು. ಗಲಾಟೆ ಮತ್ತು ವಿಧ್ವಂಸಕ ಕೃತ್ಯದ ಬಗ್ಗೆ ಮಾಹಿತಿ ಪಡೆದ ನಂತರ ಇಬ್ಬರು ಪೊಲೀಸರು ಸ್ಥಳಕ್ಕೆ ಬಂದರು. ಆದರೆ, ಉದ್ರೇಕಗೊಂಡ ಮಹಿಳೆಯರನ್ನು ನೋಡಿ, ಅವರನ್ನು ತಡೆಯಲು ಅವರಿಗೆ ಧೈರ್ಯ ಬರಲಿಲ್ಲ. ಪೊಲೀಸರ ಮುಂದೆಯೇ ಮಹಿಳೆಯರು ತಮ್ಮ ಮೇಲೆ ಹಲ್ಲೆ ಮುಂದುವರಿಸಿದರು. ಈ ಸಮಯದಲ್ಲಿ, ಮಹರೌನಿ-ಲಲಿತಪುರ ಮಾರ್ಗದಲ್ಲಿ ಸಂಚಾರ ಸ್ತಬ್ಧವಾಯಿತು ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ