ಬೆಂಗಳೂರಿನಿಂದ 10 ಗಂಟೆ ದೂರದಲ್ಲಿದೆ ಕೊಹಿನೂರ್ ವಜ್ರ ಸಿಕ್ಕ ಸ್ಥಳ: ಈಗಲೂ ಈ ಹಳ್ಳಿ ಜನರು ವಜ್ರಗಳನ್ನ ಹುಡುಕ್ತಾರೆ!

Published : Oct 27, 2026, 05:40 PM IST

ಬೆಂಗಳೂರಿನಿಂದ ಕೇವಲ 10 ಗಂಟೆ ಜರ್ನಿ ದೂರದಲ್ಲಿದೆ ಭಾರತದ ವಜ್ರದ ಗಣಿ ಗ್ರಾಮ. ಜಗತ್ಪ್ರಸಿದ್ಧ ಕೊಹಿನೂರ್, ಹೋಪ್ ಡೈಮಂಡ್ ಹುಟ್ಟಿದ್ದು ಇದೇ ಊರಿನಲ್ಲಿ. ಈಗಲೂ ಜನ ವಜ್ರಕ್ಕಾಗಿ ಹುಡುಕಾಡುವ ಆ ಹಳ್ಳಿ ಯಾವುದು? ಅಲ್ಲಿನ ಈಗಿನ ಪರಿಸ್ಥಿತಿ ಹೇಗಿದೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

PREV
14

ಬೆಂಗಳೂರು: ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ಮತ್ತು ಅಷ್ಟೇ ವಿವಾದಿತ ರತ್ನ 'ಕೊಹಿನೂರ್' (Koh-i-Noor) ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಹಲವು ರಾಜ-ಮಹಾರಾಜರ ಕಿರೀಟಗಳನ್ನು ಬೆಳಗಿ, ಸದ್ಯ ಬ್ರಿಟಿಷ್ ರಾಜಮನೆತನದ ಸುಪರ್ದಿಯಲ್ಲಿರುವ ಈ ಅಮೂಲ್ಯ ವಜ್ರ ಸಿಕ್ಕಿದ್ದು ಎಲ್ಲಿ ಗೊತ್ತಾ? ಅಚ್ಚರಿಯಾದರೂ ಸತ್ಯ, ಕೊಹಿನೂರ್ ವಜ್ರ ದೊರೆತ ಪವಿತ್ರ ಗಣಿ ನಮ್ಮ ನೆರೆರಾಜ್ಯ ಆಂಧ್ರಪ್ರದೇಶದಲ್ಲಿದೆ! ಅಷ್ಟೇ ಅಲ್ಲ, ಇದು ನಮ್ಮ ಬೆಂಗಳೂರಿನಿಂದ ಕೇವಲ 10 ಗಂಟೆಗಳ ಪ್ರಯಾಣದ ದೂರದಲ್ಲಿದೆ.

24

ಕೊಹಿನೂರ್, ಹೋಪ್ ಡೈಮಂಡ್ ಜನಿಸಿದ್ದು ಇಲ್ಲೇ!

ಬೆಂಗಳೂರಿನಿಂದ ಸುಮಾರು 600 ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಪಲ್ನಾಡು (Palnadu) ಜಿಲ್ಲೆಯ ಬೆಲ್ಲಂಕೊಂಡ ಮಂಡಲ ವ್ಯಾಪ್ತಿಯಲ್ಲಿ, ಕೃಷ್ಣಾ ನದಿಯ ದಂಡೆಯ ಮೇಲಿರುವ ‘ಕೊಲ್ಲೂರು’ (Kolluru) ಎಂಬ ಪುಟ್ಟ ಗ್ರಾಮವೇ ಆ ಐತಿಹಾಸಿಕ ವಜ್ರದ ನೆಲೆವೀಡು. ಒಂದು ಕಾಲದಲ್ಲಿ ವಿಶ್ವದ ‘ವಜ್ರಗಳ ರಾಜಧಾನಿ’ ಎಂದೇ ಖ್ಯಾತಿ ಪಡೆದಿದ್ದ ಈ ಕೊಲ್ಲೂರು, ಇತಿಹಾಸ ಪ್ರಸಿದ್ಧ ‘ಗೋಲ್ಕೊಂಡ ವಜ್ರ’ಗಳ (Golconda Diamonds) ತವರೂರು. ಕಾಕತೀಯರು ಮತ್ತು ಗೋಲ್ಕೊಂಡ ಕುತುಬ್ ಶಾಹಿಗಳ ಆಳ್ವಿಕೆಯಲ್ಲಿ ಈ ಗಣಿಗಳಿಂದ ರಾಶಿ ರಾಶಿ ವಜ್ರಗಳನ್ನು ಹೊರತೆಗೆಯಲಾಗಿತ್ತು. ಕೊಲ್ಲೂರಿನ ಸಿರಿವಂತಿಕೆಯನ್ನು ಕಂಡೇ ಆ ಕಾಲದಲ್ಲಿ ತೆಲುಗಿನಲ್ಲಿ ‘ಕೊಲ್ಲೂರು ಪಟ್ಟಣದಂತೆ ಹೊಳೆಯುತ್ತಿದೆ’ ಎಂಬ ಗಾದೆ ಮಾತೇ ಹುಟ್ಟಿಕೊಂಡಿತ್ತು.

ಕೇವಲ ಕೊಹಿನೂರ್ ಮಾತ್ರವಲ್ಲದೆ, ಇಡೀ ವಿಶ್ವವನ್ನೇ ಆಕರ್ಷಿಸಿದ ಅಪರೂಪದ ನೀಲಿ ಬಣ್ಣದ ‘ಹೋಪ್ ಡೈಮಂಡ್’ (Hope Diamond), ಫ್ರಾನ್ಸ್ ರಾಜಮನೆತನದ ಆಭರಣವಾಗಿದ್ದ ‘ರೀಜೆಂಟ್ ಡೈಮಂಡ್’ (Regent Diamond) ಹಾಗೂ ಮೊಘಲ್ ಸಾಮ್ರಾಟರ ಖಜಾನೆಯಲ್ಲಿದ್ದ ‘ದಿ ಗ್ರೇಟ್ ಮೊಘಲ್’ ರತ್ನಗಳು ಸಿಕ್ಕಿದ್ದೂ ಕೂಡ ಇದೇ ಕೊಲ್ಲೂರು ಮಣ್ಣಿನಲ್ಲಿ!

34

ಒಂದೇ ಗಣಿಯಲ್ಲಿ 60,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು!

17ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪ್ರಸಿದ್ಧ ಫ್ರೆಂಚ್ ರತ್ನ ವ್ಯಾಪಾರಿ ಹಾಗೂ ಯಾಂತ್ರಿಕ ಜೀನ್-ಬ್ಯಾಪ್ಟಿಸ್ಟ್ ಟಾವೆರ್ನಿಯರ್ (Jean-Baptiste Tavernier) ಕೊಲ್ಲೂರಿನ ವೈಭವವನ್ನು ಕಂಡು ನಿಬ್ಬೆರಗಾಗಿದ್ದರು. ಆ ಕಾಲದಲ್ಲೇ ಕೊಲ್ಲೂರಿನ ವಜ್ರದ ಗಣಿಗಳಲ್ಲಿ ಬರೋಬ್ಬರಿ 60,000 ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದರು ಎಂದು ಅವರು ತಮ್ಮ ಪ್ರವಾಸ ಕಥನದಲ್ಲಿ ಬರೆದುಕೊಂಡಿದ್ದಾರೆ. ಕೃಷ್ಣಾ ನದಿಯ ಮರಳು ತಿಟ್ಟುಗಳಲ್ಲಿ ಸಿಗುತ್ತಿದ್ದ ಶುದ್ಧ ವಜ್ರಗಳು ವಿದೇಶಿ ವ್ಯಾಪಾರಿಗಳನ್ನು ಆಯಸ್ಕಾಂತದಂತೆ ಸೆಳೆಯುತ್ತಿದ್ದವು.

ನೀರಿನಲ್ಲಿ ಮುಳುಗಿಹೋಯ್ತು ಐತಿಹಾಸಿಕ ವಜ್ರದ ಗಣಿ!

18ನೇ ಶತಮಾನದ ವೇಳೆಗೆ ಭೂಮಿಯಡಿಯ ನಿಕ್ಷೇಪಗಳು ಕಡಿಮೆಯಾದಂತೆ ಗಣಿಗಾರಿಕೆ ನಿಧಾನವಾಗಿ ಸ್ಥಗಿತಗೊಂಡಿತು. ತದನಂತರ ಕೃಷ್ಣಾ ನದಿಗೆ ‘ಪುಲಿಚಿಂತಲ ಜಲಾಶಯ’ (Pulichintala Project) ನಿರ್ಮಾಣ ಮಾಡಲಾಯಿತು. ಇದರಿಂದಾಗಿ ಜಗತ್ತಿಗೆ ಅತಿ ಹೆಚ್ಚು ವಜ್ರಗಳನ್ನು ನೀಡಿದ ಈ ಐತಿಹಾಸಿಕ ಕೊಲ್ಲೂರು ಗ್ರಾಮ ಮತ್ತು ಅದರ ಗಣಿಗಳು ಶಾಶ್ವತವಾಗಿ ನೀರೊಳಗೆ ಮುಳುಗಿ ಜಲಸಮಾಧಿಯಾದವು.

44

ಇಂದಿಗೂ ನಡೆಯುತ್ತೆ ವಜ್ರದ ಬೇಟೆ!

ಒಂದು ಕಾಲದಲ್ಲಿ ಲಕ್ಷಾಂತರ ಜನರಿಂದ ಕಳೆಗಟ್ಟಿದ್ದ ಆ ಶ್ರೀಮಂತ ನಗರ, ಇಂದು ಪುಲಿಚಿಂತಲ ಜಲಾಶಯದ ಅಲೆಗಳ ಕೆಳಗೆ ಮೌನವಾಗಿ ಮಲಗಿದೆ. ಆದರೆ, ಇಂದಿಗೂ ಮಳೆಗಾಲ ಮುಗಿದು ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಅಥವಾ ಬೇಸಿಗೆಯಲ್ಲಿ ನೀರು ಇಳಿದಾಗ, ಸುತ್ತಮುತ್ತಲಿನ ಹಳ್ಳಿಗರು ಮತ್ತು ಅದೃಷ್ಟ ಪರೀಕ್ಷೆಗೆ ಇಳಿಯುವ ఔತ್ಸಾಹಿಕರು ಕೃಷ್ಣಾ ನದಿಯ ದಂಡೆಯಲ್ಲಿ ಜರಡಿ ಹಿಡಿದು ಮರಳಿನಲ್ಲಿ ವಜ್ರಗಳಿಗಾಗಿ ಹುಡುಕಾಟ ನಡೆಸುತ್ತಾರೆ!

ವಿಶ್ವ ಇತಿಹಾಸದ ಹಾದಿಯನ್ನೇ ಬದಲಿಸಿದ ಕೊಹಿನೂರ್ ನೀಡಿದ ಈ ಕೊಲ್ಲೂರು ಗ್ರಾಮದ ಕಥೆ, ಇತಿಹಾಸ ಪ್ರಿಯರಿಗೆ ಇಂದಿಗೂ ಒಂದು ರೋಚಕ ವಿಸ್ಮಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories