ಛತ್ತೀಸ್‌ಗಢದ ರಾಯ್ಪುರದಲ್ಲಿ, ಪೆಟ್ರೋಲ್ ಪಂಪ್‌ನಲ್ಲಿ ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಲೈಟರ್‌ನಿಂದ ಇಂಧನ ನಳಿಕೆಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪಂಪ್ ಸಿಬ್ಬಂದಿ ಅಗ್ನಿಶಾಮಕ ಬಳಸಿ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ರಾಯ್ಪುರ: ಪೆಟ್ರೋಲ್ ಪಂಪ್‌ನಲ್ಲಿ ಸ್ಮೋಕ್ ಮಾಡ್ಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊರ್ವ ಕೈನಲ್ಲಿದ್ದ ಲೈಟರ್ ಪೆಟ್ರೋಲ್‌ಗೆ ತಾಗಿಸಿ ಇಡೀ ಪೆಟ್ರೋಲ್‌ಪಂಪ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ. ಛತ್ತೀಸ್‌ಗಢದ ರಾಜಧಾನಿ ರಾಯ್ಪುರದ ಉರ್ಲಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
26
ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಸಿಟ್ಟು
ಬೈಕ್‌ಗೆ ಪೆಟ್ರೋಲ್ ತುಂಬಿಸುತ್ತಿದ್ದ ವೇಳೆ ಯುವಕನೋರ್ವ ಅಲ್ಲೇ ನಿಂತುಕೊಂಡು ಸಿಗರೇಟ್ ಎಳೆಯುತ್ತಿದ್ದ ಈ ವೇಳೆ ಬೈಕ್ ಸವಾರ ಪೆಟ್ರೋಲ್ ತುಂಬಿಸುತ್ತಿರುವಾಗ ಧೂಮಪಾನ ಮಾಡಬೇಡಿ ಎಂದು ಆ ಯುವಕನಿಗೆ ಹೇಳಿದ್ದಾನೆ ಅಷ್ಟಕ್ಕೆ ಸಿಟ್ಟಾದ ಆ ಯುವಕ ಲೈಟರ್ ಉರಿಸಿ ಇಂಧನ ತುಂಬಿಸುವ ನಳಿಕೆಗೆ ಹಿಡಿದಿದ್ದಾನೆ. ಇದರಿಂದ ಬೆಂಕಿ ಧಗ್ಗನೇ ಉರಿದುಕೊಂಡಿದ್ದು, ಬೈಕ್ ಹಾಗೂ ಪೆಟ್ರೋಲ್ ಪಂಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಆತಂಕಕಾರಿ ಘಟನೆಯ ನಡುವೆಯೇ ಪಂಪ್ ಸಿಬ್ಬಂದಿ ಅಗ್ನಿ ಆರಿಸುವ ಯಂತ್ರದ (fire extinguisher)ಮೂಲಕ ಬೆಂಕಿ ಆರಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
36
ರ್ಲಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಘಟನೆ
ಗುರುವಾರ ಸಂಜೆ ಉರ್ಲಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಪ್ರಕಾರ, ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಇಂಧನ ತುಂಬಿಸಲು ಬೈಕ್‌ನಲ್ಲಿ ಪೆಟ್ರೋಲ್ ಪಂಪ್ ಗೆ ಬಂದಿದ್ದರು. ಇಮ್ರಾನ್ ಬೈಕ್‌ನಲ್ಲೇ ಕುಳಿತಿದ್ದರೆ ಧರ್ಮೇಂದ್ರ ಬೈಕ್‌ನ ಪಕ್ಕದಲ್ಲಿ ನಿಂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್ ತೆರೆಯುತ್ತಿದ್ದಂತೆ ಧರ್ಮೇಂದ್ರ ಸಿಗರೇಟನ್ನು ತೆಗೆದು ಅದನ್ನು ಹೊತ್ತಿಸಲು ಪ್ರಯತ್ನಿಸಿದರು. ಪೆಟ್ರೋಲ್ ಪಂಪ್‌ನಲ್ಲಿ ಧೂಮಪಾನ ಮಾಡದಂತೆ ಕೇಳಿದಾಗ ಅವನು ಕೋಪಗೊಂಡು ಲೈಟರ್ ಬಳಸಿ ಇಂಧನ ನಳಿಕೆಯ ಪೈಪ್‌ಗೆ ಬೆಂಕಿ ಹಚ್ಚಿದನು, ಇದರಿಂದ ಬೆಂಕಿ ಒಮ್ಮೆಗೆ ಹೊತ್ತಿಕೊಂಡಿತು.
ಬೆಂಕಿ ಬೇಗನೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮತ್ತು ಪಂಪ್ ಯಂತ್ರಕ್ಕೆ ವ್ಯಾಪಿಸಿ ಸ್ಥಳದಲ್ಲಿದ್ದವರು ಭಯಭೀತರಾಗಿ ಓಡಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಇಬ್ಬರು ಆರೋಪಿಗಳು, ಬೈಕರ್ ಮತ್ತು ಪಂಪ್ ಸಿಬ್ಬಂದಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡಿಹೋಗಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ, ಪೆಟ್ರೋಲ್ ಪಂಪ್‌ನ ಅಟೆಂಡೆಂಟ್ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ, ಇಂಧನ ಪೈಪ್ ಅನ್ನು ತೆಗೆದುಹಾಕಿ ಮುಖ್ಯ ಇಂಧನ ಪೂರೈಕೆಯನ್ನು ಆಫ್ ಮಾಡಿದರು.
56
ಪರಾರಿಯಾಗಲು ಯತ್ನಿಸಿದವರ ಬಂಧನ
ನಂತರ ಪಂಪ್‌ನಲ್ಲಿ ಲಭ್ಯವಿರುವ ಅಗ್ನಿಶಾಮಕ ಸುರಕ್ಷತಾ ಕಿಟ್ ಅನ್ನು ಬಳಸಿಕೊಂಡು, ಸಿಬ್ಬಂದಿ ಸಕಾಲದಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಇದರಿಂದಾಗಿ ದೊಡ್ಡ ಸ್ಫೋಟ ಅಥವಾ ಬೆಂಕಿ ಅಪಘಾತ ಸಂಭವಿಸುವುದು ತಪ್ಪಿತು. ಈ ಗೊಂದಲದ ಸಮಯದಲ್ಲಿ, ಉರಿಯುತ್ತಿರುವ ಇಂಧನವು ಆರೋಪಿಯ ಮೇಲೂ ಚಿಮ್ಮಿದೆ ಎಂದು ವರದಿಯಾಗಿದೆ. ಘಟನೆಯ ನಂತರ, ಇಬ್ಬರೂ ಪರಾರಿಯಾಗಲು ಪ್ರಯತ್ನಿಸಿದರು ಆದರೆ ಪಂಪ್ ಸಿಬ್ಬಂದಿ ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು ಎಂದು ವರದಿಯಾಗಿದೆ.
ಪಂಪ್ ಮ್ಯಾನೇಜರ್ ನೀಡಿದ ದೂರು ಮತ್ತು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಉರ್ಲಾ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಕಿ ಹಚ್ಚುವಿಕೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಉರ್ಲಾ ಇನ್ಸ್‌ಪೆಕ್ಟರ್ ರೋಹಿತ್ ಮಹೇಲ್ಕರ್ ತಿಳಿಸಿದ್ದಾರೆ. ಪೆಟ್ರೋಲ್ ಪಂಪ್ ನೌಕರರ ತ್ವರಿತ ಪ್ರತಿಕ್ರಿಯೆಯಿಂದ ಸಂಭಾವ್ಯ ದುರಂತವನ್ನು ತಪ್ಪಿಸಲಾಗಿದೆ. ಏಕೆಂದರೆ ಬೆಂಕಿ ಹತ್ತಿರದ ವಾಹನಗಳು ಮತ್ತು ಇಂಧನ ಸಂಗ್ರಹಣಾ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ