ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬವೊಂದು ತಮ್ಮ ಮಗಳು ಮತ್ತು ಹೊಸ ಅಳಿಯನ ಮೊದಲ ಸಂಕ್ರಾಂತಿ ಹಬ್ಬಕ್ಕಾಗಿ 158 ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ಅದ್ದೂರಿ ಔತಣ ನೀಡಿದೆ. ಗೋದಾವರಿ ಜಿಲ್ಲೆಯಲ್ಲಿ ಅಳಿಯನನ್ನು ರಾಜನಂತೆ ಸತ್ಕರಿಸುವ ಸಂಪ್ರದಾಯದ ಭಾಗವಾಗಿ ಈ ಸಂಭ್ರಮವನ್ನು ಆಚರಿಸಲಾಗಿದೆ.
ನಿನ್ನೆಯಷ್ಟೇ ಸಂಕ್ರಾಂತಿ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯ್ತು, ದೇಶದ ವಿವಿಧಿ ಭಾಗಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಪೊಂಗಲ್ ಎಂದು ಕರೆದರೆ ಉತ್ತರ ಭಾರತದಲ್ಲಿ ಬೋಗಿ, ಮಕರ ಸಂಕ್ರಾಂತಿ, ಸುಗ್ಗಿ ಹಬ್ಬ ಎಂದೆಲ್ಲಾ ಕರೆಯಲಾಗುತ್ತದೆ. ಈ ಹಬ್ಬದಂದು ವಿವಿಧ ತಿನಿಸುಗಳನ್ನು ತಯಾರಿಸಿ, ಹೊಸ ಅಕ್ಕಿ ಊಟ ಮಾಡಿ ರೈತಾಪಿ ಜನರು ಸಂಭ್ರಮದಿಂದ ಆಚರಣೆ ಮಾಡುತ್ತಾರೆ.
26
ಅಳಿಯನಿಗಾಗಿ 158 ಬಗೆಯ ಭೋಜನ ಸಿದ್ಧಪಡಿಸಿದ ಕುಟುಂಬ
ಹಾಗೆಯೇ ಆಂಧ್ರಪ್ರದೇಶದಲ್ಲಿ ಈ ಹಬ್ಬದಂದು ಕುಟುಂಬವೊಂದು ಹೊಸದಾಗಿ ಮದುವೆಯಾದ ತಮ್ಮ ಮಗಳು ಅಳಿಯನ ಮೊದಲ ಸಂಕ್ರಾಂತಿ ಹಬ್ಬಕ್ಕೆ 158 ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ಬಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
36
ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬದಿಂದ ವಿಶಿಷ್ಠ ಸತ್ಕಾರ
ಹೌದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬವೊಂದು ಈ ರೀತಿ ವಿಭಿನ್ನವಾಗಿ ಸಂಕ್ರಾಂತಿ ಆಚರಿಸಿದೆ. ವಂಡನಪು ಮುರಲಿಕೃಷ್ಣ ಹಾಗೂ ಅವರ ಪತ್ನಿ ತಮ್ಮ ಅಳಿಯ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಜಿಲ್ಲೆಯ ನಿವಾಸಿಯಾದ ಶ್ರೀದತ್ತ ಹಾಗೂ ಮಗಳು ಮೌನಿಕಾಗಾಗಿ ಈ ರೀತಿ ಅದ್ದೂರಿ ಸಂಕ್ರಾಂತಿ ಭೋಜನ ಕೂಟವನ್ನು ಆಯೋಜಿಸಿದ್ದರು. ಶ್ರೀದತ್ತ ಹಾಗೂ ಮೌನಿಕಾ ಕಳೆದ ವರ್ಷ ಮದುವೆಯಾಗಿದ್ದರಿಂದ ಅವರಿಗೆ ಇದು ತಮ್ಮ ಮೊದಲ ಸಂಕ್ರಾಂತಿ ಆಗಿತ್ತು. ಹೀಗಾಗಿ ಮೌನಿಕಾ ಕುಟುಂಬದವರು ಮಗಳು ಅಳಿಯನಿಗಾಗಿ ಸಂಕ್ರಾಂತಿಯಂದು ವಿಶೇಷ ಔತಣ ಕೂಟ ಏರ್ಪಡಿಸಿತ್ತು.
ಆಂಧ್ರಪ್ರದೇಶ ಹಲವು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಗೋದಾವರಿ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬ ಕೇವಲ ಸುಗ್ಗಿಯ ಆಚರಣೆಯಲ್ಲ, ಇದು ಕುಟುಂಬ ಪ್ರೀತಿ, ಸಂಬಂಧಿಕರ ಆರೈಕೆ ಅತಿಥ್ಯವನ್ನು ಒಳಗೊಂಡಿದೆ. ಅಲ್ಲಿ ಅಳಿಯನನ್ನು ರಾಜನಂತೆ ನಡೆಸಿಕೊಳ್ಳಲಾಗುತ್ತದೆ. ಕುಟುಂಬದವರು ಅವರನ್ನು ಪ್ರೀತಿ ಹಾಗೂ ಉಡುಗೊರೆಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸುತ್ತಾರೆ. ಆದರೆ ತೆನಾಲಿಯ ಈ ಕುಟುಂಬ ಈ ಸಂಭ್ರಮವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ.
56
158 ಬಗೆಯ ಆಹಾರದಲ್ಲಿ ಏನೇನಿತ್ತು?
ಸಿಹಿತಿಂಡಿಗಳು, ತಿಂಡಿಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಸಾಂಪ್ರದಾಯಿಕ ಭಕ್ಷ್ಯಗಳು ಸೇರಿದಂತೆ ಒಟ್ಟು158 ಬಗೆಯ ಆಹಾರವನ್ನು ಮಗಳು ಅಳಿಯನಿಗಾಗಿ ತಯಾರಿಸಿ ಬಡಿಸಿದೆ. ಆಂಧ್ರದ ಸಾಂಪ್ರದಾಯಿಕ ಖಾದ್ಯಗಳಾದ ಮುರುಕುಲು, ಚೆಕ್ಕಲು ಮತ್ತು ಗರೇಲು, ಅರಿಸೆಲು, ಬೊಬ್ಬಟ್ಲು, ಸುನ್ನುಂಡುಲು ಮತ್ತು ಕಜ್ಜಿಕಾಯಲು ಮುಂತಾದ ಬೆಲ್ಲವನ್ನು ಒಳಗೊಂಡಿರುವ ಸಿಹಿ ತಿನಿಸುಗಳ ಜೊತೆಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳು, ಅಕ್ಕಿಯಿಂದ ತಯಾರಿಸಿದ ತಿನಿಸುಗಳು, ಕರಿಗಳು ಇದರಲ್ಲಿ ಸೇರಿದ್ದವು.
ಇವರ ವೈವಿಧ್ಯತೆ ಹಾಗೂ ಅಳಿಯನನ್ನು ಸತ್ಕರಿಸಲು ಮಾಡಿದ ಕೆಲಸ ಎಲ್ಲರ ಮನೆ ಸೆಳೆಯಿತು. ಇದನ್ನು ಅನೇಕರು ತೆಲುಗು ಶೈಲಿಯಲ್ಲಿ ಅದಿರಿ ಪೋಯಿಂದಿ ಎಂದು ಬಣ್ಣಿಸಿದ್ದಾರೆ. ಗುಂಟೂರಿನ ಈ ತೆನಾಲಿ ಗ್ರಾಮವೂ ಕಲೆ, ನಾಟಕ ಮತ್ತು ಸಾಹಿತ್ಯದಲ್ಲಿ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ ಮತ್ತು ವಿಜಯನಗರ ಯುಗದ ಪೌರಾಣಿಕ ಹಾಸ್ಯಮಯ ಆಸ್ಥಾನ ಕವಿ ತೆನಾಲಿ ರಾಮನಿಗೂ ಹೆಸರುವಾಸಿಯಾಗಿದೆ. ಈ ಪಟ್ಟಣವು ಅದರ ಸಿಹಿತಿಂಡಿಗಳಿಗೆ, ವಿಶೇಷವಾಗಿ 'ಬೆಲ್ಲಂ ಜಿಲೇಬಿಗೂ ಫೇಮಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ