ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಐತಿಹಾಸಿಕ ಪ್ರಾಚೀನ ಶಿಕ್ಷಣ ಕೇಂದ್ರಗಳನ್ನು ಕಳೆದುಕೊಂಡ ಭಾರತ, ಕರ್ನಾಟಕದ ಏಕೈಕ ವಿಶ್ವವಿದ್ಯಾಲಯವೂ ಈಗಿಲ್ಲ!

Published : Nov 11, 2026, 04:52 PM IST

ಪ್ರಾಚೀನ ಭಾರತವು ತಕ್ಷಶಿಲಾ, ನಳಂದ, ಮತ್ತು ವಲಭಿಯಂತಹ ಬೃಹತ್ ವಿಶ್ವವಿದ್ಯಾಲಯಗಳ ಮೂಲಕ ಜಾಗತಿಕ ಜ್ಞಾನ ಕೇಂದ್ರವಾಗಿತ್ತು. ಈ ಲೇಖನವು ಪ್ರಾಚೀನ ಶಿಕ್ಷಣ ಸಂಸ್ಥೆಗಳ ವೈಭವ, ಬೋಧನಾ ಪದ್ಧತಿಗಳು ಮತ್ತು ಅವುಗಳ ಅವನತಿಯ ಇತಿಹಾಸವನ್ನು ವಿವರಿಸುತ್ತದೆ.

PREV
111
ಭಾರತೀಯ ಶಿಕ್ಷಣ

ಭಾರತೀಯ ಶಿಕ್ಷಣ ಮತ್ತು ವಿದ್ಯಾಭ್ಯಾಸದ ಅತ್ಯಂತ ಸುದೀರ್ಘ ಹಾಗೂ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಸಿಂಧೂ ಕಣಿವೆ ನಾಗರಿಕತೆಯ ಕಾಲದಿಂದಲೂ ಜ್ಞಾನಾರ್ಜನೆಗೆ ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಸ್ಥಾನ ನೀಡಲಾಗಿತ್ತು. ಪ್ರಾಚೀನ ಭಾರತದಲ್ಲಿ ಕೇವಲ ಮೂಲಭೂತ ಶಿಕ್ಷಣವಷ್ಟೇ ಅಲ್ಲದೆ, ಉನ್ನತ ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ವಿಶ್ವದಾದ್ಯಂತ ವಿದ್ವಾಂಸರನ್ನು ಆಕರ್ಷಿಸುವ ಬೃಹತ್ ವಿಶ್ವವಿದ್ಯಾಲಯಗಳು ಕಾರ್ಯಾಚರಿಸುತ್ತಿದ್ದವು. ತಕ್ಷಶಿಲಾ, ನಳಂದ, ವಲಭಿ, ಶಾರದಾ ಪೀಠ, ವಿಕ್ರಮಶಿಲಾ, ಸೋಮಪುರ ಸೇರಿದಂತೆ ಅನೇಕ ಸಂಸ್ಥೆಗಳು ಜಾಗತಿಕ ಜ್ಞಾನ ಕೇಂದ್ರಗಳಾಗಿ ಬೆಳಗಿದ್ದವು.

211
ತಕ್ಷಶಿಲಾ ವಿಶ್ವವಿದ್ಯಾಲಯ

ಪ್ರಾಚೀನ ತಕ್ಷಶಿಲೆಯು ಪ್ರಸ್ತುತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ರಾವಲ್ಪಿಂಡಿ ಜಿಲ್ಲೆಯಲ್ಲಿದೆ. ಇದು ಪ್ರಪಂಚದ ಅತ್ಯಂತ ಪ್ರಾಚೀನ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಕ್ರಿಸ್ತಪೂರ್ವ 5 ನೇ ಅಥವಾ 6 ನೇ ಶತಮಾನದಲ್ಲೇ ಈ ಸಂಸ್ಥೆಯು ಅಸ್ತಿತ್ವದಲ್ಲಿದ್ದ ಕುರುಹುಗಳಿವೆ. ಇಲ್ಲಿ ದೊಡ್ಡ ಪ್ರಮಾಣದ ತರಗತಿ ಕೊಠಡಿಗಳ ಬದಲಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ವೈಯಕ್ತಿಕ ಸಂವಾದ ಮತ್ತು ಪ್ರತ್ಯೇಕ ಆಶ್ರಮ ಶೈಲಿಯ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಶ್ರೀಲಂಕಾದಲ್ಲಿ ರಚಿತವಾದ ಜಾತಕ ಕಥೆಗಳಲ್ಲಿ ತಕ್ಷಶಿಲೆಯ ಬೋಧನಾ ಪದ್ಧತಿಯ ಬಗ್ಗೆ ಉಲ್ಲೇಖಗಳಿವೆ. ಇಲ್ಲಿ ವೇದಗಳು, ಧರ್ಮ, ತತ್ವಜ್ಞಾನ, ಆಯುರ್ವೇದ , ಶಸ್ತ್ರಚಿಕಿತ್ಸೆ, ಜ್ಯೋತಿಷ್ಯ, ಗಣಿತ, ಕಾನೂನು, ಯುದ್ಧ ಕಲೆ (ಮಿಲಿಟರಿ ಸೈನ್ಸ್) ಮತ್ತು 18 ವಿಧದ ಶಿಲ್ಪ-ಕಲೆಗಳು ಸೇರಿದಂತೆ 60 ಕ್ಕೂ ಹೆಚ್ಚು ವಿಷಯಗಳನ್ನು ಬೋಧಿಸಲಾಗುತ್ತಿತ್ತು

ಸಂಸ್ಕೃತ ವ್ಯಾಕರಣದ ಅಡಿಪಾಯ ಹಾಕಿದ ಮಹಾನ್ ವ್ಯಾಕರಣಜ್ಞ ಪಾಣಿನಿ, ಸೌತ್ರಾಂತಿಕ ಬೌದ್ಧ ಶಾಲೆಯ ಸ್ಥಾಪಕ ಕುಮಾರಲಾತ, ಟಿಬೆಟಿಯನ್ ಬೌದ್ಧಧರ್ಮದ ಪ್ರಮುಖ ಪ್ರವರ್ತಕ ಹಾಗೂ ವಿಚಾರವಾದಿ ವಸುಬಂಧು ಇಲ್ಲಿನ ಪ್ರಸಿದ್ಧ ಪಂಡಿತರು. ಕೋಸಲ ರಾಜ್ಯದ ಅರಸ ಹಾಗೂ ಗೌತಮ ಬುದ್ಧನ ಆಪ್ತ ರಾಜ ಪಸೇನದಿ, ರಾಜಗೃಹದ ವೈದ್ಯ ಮತ್ತು ಬುದ್ಧನ ಪ್ರತ್ಯೇಕ ಆರೋಗ್ಯ ರಕ್ಷಕ ಜೀವಕ, ಆಯುರ್ವೇದ ಶಾಸ್ತ್ರದ ಪಿತಾಮಹರೆಂದೇ ಪ್ರಸಿದ್ಧರಾದ ಆಚಾರ್ಯ ಚರಕ ಪ್ರಸಿದ್ಧ ವಿದ್ಯಾರ್ಥಿಗಳು. ಸುಮಾರು ಸಾವಿರ ವರ್ಷಗಳ ಕಾಲ ಜ್ಞಾನದ ಕೇಂದ್ರವಾಗಿದ್ದ ಈ ಪೀಠವು ನಿರಂತರ ವಿದೇಶಿ ದಾಳಿಗಳಿಂದ ಅವನತಿ ಹೊಂದಿತು .

311
ನಳಂದ ಮಹಾವಿಹಾರ

ಆಧುನಿಕ ಬಿಹಾರದ ಪಾಟ್ನಾ ಸಮೀಪವಿರುವ ನಳಂದವು ಪ್ರಾಚೀನ ಮಗಧ ಸಾಮ್ರಾಜ್ಯದ ಅತ್ಯಂತ ವೈಭವೋಪೇತ ಬೌದ್ಧ ವಿಶ್ವವಿದ್ಯಾಲಯವಾಗಿತ್ತು. ಕ್ರಿ.ಶ. 5ನೇ ಶತಮಾನದಿಂದ 1200ರ ವರೆಗೆ ಇದು ವಿಶ್ವದ ಪ್ರಮುಖ ವಿದ್ಯಾಕೇಂದ್ರವಾಗಿ ಕಾರ್ಯನಿರ್ವಹಿಸಿತು. ಕ್ರಿ.ಶ. 5ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಚಕ್ರವರ್ತಿ ಕುಮಾರಗುಪ್ತ I ರ ಕಾಲದಲ್ಲಿ ಸ್ಥಾಪನೆಯಾಯಿತು. ನಾಲ್ಕನೇ ಶತಮಾನದ ವೇಳೆಗೆ ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ನಳಂದ ನೀಡಿದ ಕೊಡುಗೆ ಅಪಾರ. ಇದು ಜಗತ್ತಿನ ಮೊಟ್ಟಮೊದಲ ವಸತಿ ಆಧಾರಿತ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ ಪ್ರಸ್ತುತ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಇಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಮತ್ತು 2,000 ಕ್ಕೂ ಹೆಚ್ಚು ಶಿಕ್ಷಕರು ಇದ್ದರು. ಚೀನಾ, ಕೊರಿಯಾ, ಜಪಾನ್, ಟಿಬೆಟ್, ಗ್ರೀಸ್, ಪರ್ಷಿಯಾ ಮುಂತಾದ ದೇಶಗಳಿಂದ ವಿದ್ವಾಂಸರು ಇಲ್ಲಿಗೆ ಅಧ್ಯಯನಕ್ಕೆ ಬರುತ್ತಿದ್ದರು. ಬೌದ್ಧ ಧರ್ಮದ ಜೊತೆಗೆ ತರ್ಕಶಾಸ್ತ್ರ, ವೈದ್ಯಕೀಯ, ಗಣಿತ, ಖಗೋಳಶಾಸ್ತ್ರ, ವ್ಯಾಕರಣ ಮತ್ತು ತತ್ವಶಾಸ್ತ್ರಗಳನ್ನು ಬೋಧಿಸಲಾಗುತ್ತಿತ್ತು. ಪ್ರಸಿದ್ಧ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್ (Xuanzang) ಇಲ್ಲಿ ಓದಿ ಬೋಧಿಸಿದ್ದಾರೆ. ಕ್ರಿ.ಶ. 1193ರಲ್ಲಿ ಭಕ್ತಿಯಾರ್ ಖಿಲ್ಜಿ ನೇತೃತ್ವದ ದಾಳಿಕೋರರಿಂದ ಇದು ಧ್ವಂಸಗೊಂಡಿತು.

411
ವಲಭಿ ವಿಶ್ವವಿದ್ಯಾಲಯ

ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿದ್ದ ವಲಭಿ ವಿಶ್ವವಿದ್ಯಾಲಯವು ಪ್ರಾಚೀನ ಭಾರತದ ಮತ್ತೊಂದು ಪ್ರಮುಖ ಶಿಕ್ಷಣ ಕೇಂದ್ರವಾಗಿತ್ತು. ಇಂದಿನ ಭಾವನಗರ ಜಿಲ್ಲೆಯ ವಲ್ಲಭಿಪುರ ಪ್ರದೇಶದೊಂದಿಗೆ ಗುರುತಿಸಿಕೊಂಡಿರುವ ಈ ಸಂಸ್ಥೆಯು ಕ್ರಿ.ಶ. 6ನೇ ಶತಮಾನದಿಂದ 12ನೇ ಶತಮಾನದವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿತ್ತು.

ಸುಮಾರು ಕ್ರಿ.ಶ. 480ರಿಂದ 775ರವರೆಗೆ ವಲಭಿ ಮೈತ್ರಕ ರಾಜವಂಶದ ರಾಜಧಾನಿಯಾಗಿತ್ತು. ವಲಭಿ ವಿಶೇಷವಾಗಿ ಬೌದ್ಧ ಧರ್ಮದ ಹೀನಯಾನ ಪರಂಪರೆಯ ಅಧ್ಯಯನಕ್ಕೆ ಪ್ರಸಿದ್ಧವಾಗಿತ್ತು. ಧಾರ್ಮಿಕ ಶಿಕ್ಷಣದ ಹೊರತಾಗಿ ಆಡಳಿತ, ರಾಜಕೀಯ, ಅರ್ಥಶಾಸ್ತ್ರ, ಕಾನೂನು ಮತ್ತು ಇತರ ಪ್ರಾಯೋಗಿಕ ವಿಷಯಗಳ ಬೋಧನೆಯೂ ಇಲ್ಲಿ ನಡೆಯುತ್ತಿತ್ತು. ಒಂದು ಕಾಲದಲ್ಲಿ ನಳಂದ ವಿಶ್ವವಿದ್ಯಾಲಯಕ್ಕೆ ಸಮಾನವಾದ ಖ್ಯಾತಿಯನ್ನು ವಲಭಿ ಹೊಂದಿತ್ತು. ಭಾರತದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಿದ್ದರು.

511
ಶಾರದಾ ಪೀಠ

ಪ್ರಾಚೀನ ಭಾರತದ ಧಾರ್ಮಿಕ ಮತ್ತು ಬೌದ್ಧಿಕ ಇತಿಹಾಸದಲ್ಲಿ ಶಾರದಾ ಪೀಠಕ್ಕೆ ವಿಶೇಷ ಸ್ಥಾನವಿದೆ. ಇಂದಿನ ಪಾಕಿಸ್ತಾನ ಆಡಳಿತದಲ್ಲಿರುವ ಕಾಶ್ಮೀರದ ನೀಲಂ ಕಣಿವೆಯಲ್ಲಿರುವ ಈ ಪ್ರಾಚೀನ ದೇವಾಲಯ ಮತ್ತು ಕಲಿಕಾ ಕೇಂದ್ರವು ಶತಮಾನಗಳ ಕಾಲ ವಿದ್ವಾಂಸರ ಗಮನ ಸೆಳೆದಿತ್ತು.

ಕ್ರಿ.ಶ. 6ನೇ ಶತಮಾನದಿಂದ 12ನೇ ಶತಮಾನದ ಅವಧಿಯಲ್ಲಿ ಶಾರದಾ ಪೀಠವು ಭಾರತೀಯ ಉಪಖಂಡದ ಪ್ರಮುಖ ಜ್ಞಾನಕೇಂದ್ರಗಳಲ್ಲಿ ಒಂದಾಗಿ ಬೆಳೆದಿತ್ತು. ವಿಶೇಷವಾಗಿ ಸಂಸ್ಕೃತ ಭಾಷೆ, ವ್ಯಾಕರಣ, ತತ್ವಶಾಸ್ತ್ರ, ಧರ್ಮ ಮತ್ತು ಸಾಹಿತ್ಯ ಅಧ್ಯಯನಕ್ಕೆ ಇದು ಹೆಸರುವಾಸಿಯಾಗಿತ್ತು. 11ನೇ ಶತಮಾನದ ವೈಷ್ಣವ ತತ್ವಜ್ಞಾನಿ ಸ್ವಾಮಿ ರಾಮಾನುಜಾಚಾರ್ಯರು, ಜೈನ ವಿದ್ವಾಂಸ ಮತ್ತು ವ್ಯಾಕರಣಕಾರ ಹೇಮಚಂದ್ರಾಚಾರ್ಯರು, 10ನೇ ಶತಮಾನದ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ. ತ್ರಿಕೋನಮಿತಿ ಹಾಗೂ ಗಣಿತ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದ ವಟೇಶ್ವರ, ಪ್ರಸಿದ್ಧ ಬೌದ್ಧ ವಿದ್ವಾಂಸ ಮತ್ತು ಅನುವಾದಕ ಕುಮಾರಜೀವ, ಸಂಸ್ಕೃತ ಬೌದ್ಧ ಗ್ರಂಥಗಳನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸಿದ ಪ್ರಮುಖ ವಿದ್ವಾಂಸ ರಿಂಚೆನ್ ಜಾಂಗ್ಪೋ, ಕಾಶ್ಮೀರದ ಇತಿಹಾಸವನ್ನು ದಾಖಲಿಸಿದ ಪ್ರಸಿದ್ಧ ಇತಿಹಾಸಕಾರ. ಅವರ 'ರಾಜತರಂಗಿಣಿ' ಕೃತಿ ಭಾರತೀಯ ಇತಿಹಾಸ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಹೊಂದಿದ ಕಲ್ಹಣ, ಭಾರತೀಯ ಅದ್ವೈತ ವೇದಾಂತ ತತ್ವಶಾಸ್ತ್ರದ ಪ್ರಮುಖ ಪ್ರತಿಪಾದಕರು ಆದಿ ಶಂಕರಾಚಾರ್ಯರು ಈ ಪೀಠಕ್ಕೆ ಸಂಬಂಧ ಹೊಂದಿರುವ ಪ್ರಮುಖ ವಿದ್ವಾಂಸರು.

611
ಪುಷ್ಪಗಿರಿ ವಿಹಾರ

ಒಡಿಶಾ ರಾಜ್ಯದ ಜಾಜ್‌ಪುರ ಜಿಲ್ಲೆಯ ಲಂಗುಡಿ ಬೆಟ್ಟಗಳಲ್ಲಿರುವ ಪುಷ್ಪಗಿರಿ ವಿಹಾರವು ಪ್ರಾಚೀನ ಭಾರತದ ಪ್ರಮುಖ ಬೌದ್ಧ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿತ್ತು. ಇದು ಬೌದ್ಧ ಧರ್ಮದ ಅಧ್ಯಯನ, ಧಾರ್ಮಿಕ ಚಟುವಟಿಕೆ ಮತ್ತು ಜ್ಞಾನ ಪ್ರಸರಣಕ್ಕೆ ಹೆಸರುವಾಸಿಯಾಗಿತ್ತು.ಚೀನಾದ ಪ್ರಸಿದ್ಧ ಬೌದ್ಧ ಪ್ರವಾಸಿಗ ಹ್ಯೂಯೆನ್ ತ್ಸಾಂಗ್ ಅವರ ಪ್ರವಾಸ ವಿವರಣೆಗಳಲ್ಲಿ ಪುಷ್ಪಗಿರಿಯ ಉಲ್ಲೇಖ ಕಂಡುಬರುತ್ತದೆ.ಸುಮಾರು ಕ್ರಿ.ಶ. 3ನೇ ಶತಮಾನದಿಂದ 11ನೇ ಶತಮಾನದವರೆಗೆ ಪುಷ್ಪಗಿರಿ ಪ್ರಮುಖ ಬೌದ್ಧ ಕೇಂದ್ರವಾಗಿ ಅಭಿವೃದ್ಧಿ ಹೊಂದಿತ್ತು.

711
ಓಡಂತಪುರಿ ವಿಶ್ವವಿದ್ಯಾಲಯ

8ನೇ ಶತಮಾನದಲ್ಲಿ ಪಾಲ ರಾಜವಂಶದ ಗೋಪಾಲ- 1 ನಿಂದ ಸ್ಥಾಪಿತವಾದ ಇದು ಮಗಧ ಪ್ರಾಂತ್ಯದಲ್ಲಿ ನಳಂದದ ನಂತರದ ಅತ್ಯಂತ ಪ್ರಮುಖ ಮಠೀಯ ವಿದ್ಯಾಪೀಠವಾಗಿತ್ತು. ಪ್ರಾಚೀನ ಬಿಹಾರ ಪ್ರದೇಶದಲ್ಲಿದ್ದ ಓಡಂತಪುರಿ ಮಹಾವಿಹಾರವು ಭಾರತದ ಪ್ರಮುಖ ಬೌದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿತ್ತು. ಇದನ್ನು ಓದಂತಪುರಿ ಅಥವಾ ಉದ್ದಂಡಪುರ ಎಂದೂ ಕರೆಯಲಾಗುತ್ತಿತ್ತು. ಪಾಲ ದೊರೆಗಳ ಆಶ್ರಯದಿಂದ ಬಿಹಾರ ಮತ್ತು ಬಂಗಾಳ ಪ್ರದೇಶಗಳಲ್ಲಿ ಬೌದ್ಧ ಶಿಕ್ಷಣ ಸಂಸ್ಥೆಗಳು ವ್ಯಾಪಕವಾಗಿ ಬೆಳವಣಿಗೆ ಕಂಡಿದ್ದವು. ನಳಂದ, ವಿಕ್ರಮಶಿಲಾ ಮತ್ತು ಓಡಂತಪುರಿ ಈ ಜ್ಞಾನ ಪರಂಪರೆಯ ಪ್ರಮುಖ ಕೇಂದ್ರಗಳಾಗಿದ್ದವು. 12ನೇ ಶತಮಾನದ ಅಂತ್ಯದ ವೇಳೆಗೆ ತುರ್ಕಿ ಸೇನಾಪಡೆಯ ದಾಳಿಗಳಿಂದ ಓಡಂತಪುರಿ ಸೇರಿದಂತೆ ಹಲವು ಬೌದ್ಧ ಶಿಕ್ಷಣ ಕೇಂದ್ರಗಳು ನಾಶವಾದವು.

811
ಸೋಮಪುರ

ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯ ಪಹರ್‌ಪುರದಲ್ಲಿರುವ ಸೋಮಪುರ ಮಹಾವಿಹಾರವು ಅತ್ಯಂತ ವಿಶಾಲವಾದ ಸನ್ಯಾಸಿ ಮಠ ಹಾಗೂ ವಿಶ್ವವಿದ್ಯಾಲಯವಾಗಿತ್ತು.ಇದು ಅಂದಿನ ಕಾಲದ ಬೃಹತ್ ವಸತಿ ವಿಶ್ವವಿದ್ಯಾಲಯ. 1985 ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು. ಇಸ್ಲಾಮಿಕ್ ಪೂರ್ವದ ಬಾಂಗ್ಲಾದೇಶದ ವಾಸ್ತುಶಿಲ್ಪಕ್ಕೆ ಇದೊಂದು ಅತ್ಯುತ್ತಮ ನಿದರ್ಶನವಾಗಿದ್ದು, ದಿನಾಜ್‌ಪುರ ಪ್ರದೇಶದ ಇತರ ಪ್ರಾಚೀನ ವಿಹಾರಗಳೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.

ಪ್ರಾಚೀನ ಭಾರತದ ಶಿಕ್ಷಣ ಮತ್ತು ಬೌದ್ಧ ಧಾರ್ಮಿಕ ಇತಿಹಾಸದಲ್ಲಿ ಸೋಮಪುರ ಮಹಾವಿಹಾರವು ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿದೆ. ಇಂದಿನ ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯ ಪಹರ್‌ಪುರ ಪ್ರದೇಶದಲ್ಲಿರುವ ಈ ಬೃಹತ್ ಬೌದ್ಧ ಮಠವು ಪ್ರಾಚೀನ ಕಾಲದ ಪ್ರಮುಖ ವಸತಿ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿತ್ತು.

ಪಾಲ ರಾಜವಂಶದ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ಸೋಮಪುರ ಮಹಾವಿಹಾರವು ಬೌದ್ಧ ಧರ್ಮದ ಅಧ್ಯಯನ, ತತ್ವಶಾಸ್ತ್ರ, ಧಾರ್ಮಿಕ ಚರ್ಚೆ ಮತ್ತು ಜ್ಞಾನ ಪ್ರಸರಣದ ಪ್ರಮುಖ ಕೇಂದ್ರವಾಗಿತ್ತು. ಇದರ ನಿರ್ಮಾಣವನ್ನು ಪಾಲ ದೊರೆ ಧರ್ಮಪಾಲನ ಕಾಲಕ್ಕೆ ಸಂಬಂಧಿಸಲಾಗುತ್ತದೆ.

911
ವಿಕ್ರಮಶಿಲಾ ವಿಶ್ವವಿದ್ಯಾಲಯ

ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ವಿಕ್ರಮಶಿಲಾ ವಿಶ್ವವಿದ್ಯಾಲಯವೂ ಒಂದು. ಇಂದಿನ ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯ ಅಂತಿಚಕ್ ಪ್ರದೇಶದಲ್ಲಿ ಇದರ ಅವಶೇಷಗಳು ಕಂಡುಬರುತ್ತವೆ. ಪಾಲ ಸಾಮ್ರಾಜ್ಯದ ದೊರೆ ಧರ್ಮಪಾಲನು ಕ್ರಿ.ಶ. 8ನೇ ಶತಮಾನದ ಅಂತ್ಯ ಅಥವಾ 9ನೇ ಶತಮಾನದ ಆರಂಭದಲ್ಲಿ ವಿಕ್ರಮಶಿಲಾ ಮಹಾವಿಹಾರವನ್ನು ಸ್ಥಾಪಿಸಿದ. ಆ ಕಾಲದಲ್ಲಿ ನಳಂದ ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ಖ್ಯಾತಿಯನ್ನು ಹೊಂದಿದ್ದರೂ, ಅಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮತ್ತೊಂದು ಉನ್ನತ ಶಿಕ್ಷಣ ಕೇಂದ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿಕ್ರಮಶಿಲಾ ಸ್ಥಾಪನೆಯಾಯಿತು ಎಂಬ ವಿವರಣೆಯೂ ಇದೆ.ಬೌದ್ಧ ತತ್ವಶಾಸ್ತ್ರ, ವಜ್ರಯಾನ ಬೌದ್ಧಧರ್ಮ, ತರ್ಕಶಾಸ್ತ್ರ, ವ್ಯಾಕರಣ ಮತ್ತು ಧಾರ್ಮಿಕ ಅಧ್ಯಯನಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ವಾಂಸರು ಮತ್ತು ಬೌದ್ಧ ಸನ್ಯಾಸಿಗಳಿಗೆ ಪ್ರಮುಖ ಸ್ಥಾನವಿತ್ತು. ಆದರೆ ಕ್ರಿ.ಶ. 1193ರ ಸುಮಾರಿಗೆ ಮುಹಮ್ಮದ್ ಬಿನ್ ಭಕ್ತಿಯಾರ್ ಖಿಲ್ಜಿಯ ಸೇನಾಪಡೆಯ ದಾಳಿಯಿಂದ ವಿಕ್ರಮಶಿಲಾ ಮಹಾವಿಹಾರ ನಾಶವಾಯಿತು.

1011
ಜಗದ್ದಲ ಮಹಾವಿಹಾರ

ಪಾಲರ ಕಾಲದ ಕೊನೆಯ ಪ್ರಮುಖ ಶಿಕ್ಷಣ ಕೇಂದ್ರ. ಪ್ರಾಚೀನ ಭಾರತದ ಬೌದ್ಧ ಶಿಕ್ಷಣ ಸಂಸ್ಥೆಗಳ ಇತಿಹಾಸದಲ್ಲಿ ಜಗದ್ದಲ ಮಹಾವಿಹಾರವು ವಿಶೇಷ ಸ್ಥಾನ ಹೊಂದಿದೆ. ಕ್ರಿ.ಶ. 11ನೇ ಶತಮಾನದ ಅಂತ್ಯದಿಂದ 12ನೇ ಶತಮಾನದ ಮಧ್ಯಭಾಗದವರೆಗೆ ಇದು ಪ್ರಮುಖ ಬೌದ್ಧ ಕಲಿಕಾ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು.

ಇಂದಿನ ಬಾಂಗ್ಲಾದೇಶದ ಉತ್ತರ ಭಾಗದಲ್ಲಿರುವ ಐತಿಹಾಸಿಕ ವರೇಂದ್ರ ಪ್ರದೇಶದಲ್ಲಿ ಈ ಮಹಾವಿಹಾರ ನೆಲೆಗೊಂಡಿತ್ತು. ಪಾಲ ರಾಜವಂಶದ ದೊರೆ ರಾಮಪಾಲನು ಇದನ್ನು ಸ್ಥಾಪಿಸಿದ. ಜಗದ್ದಲವು ಬೌದ್ಧ ಧರ್ಮದ ಅಧ್ಯಯನ, ಸಂಸ್ಕೃತ ಮತ್ತು ಟಿಬೆಟಿಯನ್ ಭಾಷೆಗಳಲ್ಲಿನ ಧಾರ್ಮಿಕ ಗ್ರಂಥಗಳ ರಚನೆ ಹಾಗೂ ಅನುವಾದ ಚಟುವಟಿಕೆಗಳಿಗೆ ಪ್ರಸಿದ್ಧವಾಗಿತ್ತು.

ಬಿಕ್ರಮ್‌ಪುರ ವಿಹಾರ

ಪಾಲ ಅರಸರ ಕಾಲದಲ್ಲಿ ವರೇಂದ್ರ ಪ್ರಾಂತ್ಯದಲ್ಲಿ ಸ್ಥಾಪನೆಯಾದ ಬೌದ್ಧ ಶಿಕ್ಷಣ ಕೇಂದ್ರ. ಬಾಂಗ್ಲಾದೇಶದ ಇಂದಿನ ಢಾಕಾ ವಿಭಾಗದ ಮುನ್ಷಿಗಂಜ್ ಜಿಲ್ಲೆಯ ಬಿಕ್ರಮ್‌ಪುರ ಪ್ರದೇಶವು ಪ್ರಾಚೀನ ಕಾಲದಲ್ಲಿ ಬೌದ್ಧ ಧರ್ಮ ಮತ್ತು ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿರುವ ಬಿಕ್ರಮ್‌ಪುರ ವಿಹಾರವು ಪ್ರಾಚೀನ ಬೌದ್ಧ ಮಹಾವಿಹಾರಗಳ ಪೈಕಿ ಒಂದಾಗಿದೆ.

1111
ಮಾನ್ಯಖೇಟ

ಭಾರತದ ಇತರೆ ಪ್ರಮುಖ ಪ್ರಾಚೀನ ಶಿಕ್ಷಣ ಕೇಂದ್ರಗಳು

ದಕ್ಷಿಣ ಭಾರತದ ಕಾಂಚೀಪುರಂ, ಕರ್ನಾಟಕದ ಮಾನ್ಯಖೇಟ (ಮಾಲ್ಖೇಡ್), ಆಂಧ್ರಪ್ರದೇಶದ ನಾಗಾರ್ಜುನಕೊಂಡ, ಮಧ್ಯಪ್ರದೇಶದ ಉಜ್ಜಯಿನಿ, ಹಾಗೂ ಉತ್ತರಪ್ರದೇಶದ ವಾರಣಾಸಿ (ಕಾಶಿ) ಯುಗಯುಗಗಳಿಂದಲೂ ಭಾರತೀಯ ತತ್ವಶಾಸ್ತ್ರ ಮತ್ತು ಗಣಿತಕ್ಕೆ ಕೊಡುಗೆ ನೀಡುತ್ತಾ ಬಂದಿವೆ.

ಕಾಂಚೀಪುರಂ: ಇಂದಿನ ತಮಿಳುನಾಡಿನ ಪ್ರಮುಖ ಪ್ರಾಚೀನ ಶಿಕ್ಷಣ ಮತ್ತು ಧಾರ್ಮಿಕ ಕೇಂದ್ರ. ಸಂಸ್ಕೃತ, ತತ್ವಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನಕ್ಕೆ ಹೆಸರುವಾಸಿಯಾಗಿತ್ತು.

ಮಾನ್ಯಖೇಟ: ಇಂದಿನ ಕರ್ನಾಟಕದ ಮಳಖೇಡ ಪ್ರದೇಶವು ರಾಷ್ಟ್ರಕೂಟರ ಕಾಲದಲ್ಲಿ ರಾಜಕೀಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಮಾನ್ಯಖೇಟ ಇಂದಿನ ಮಳಖೇಡ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿದೆ, 9ನೇ ಮತ್ತು 10ನೇ ಶತಮಾನದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ಸ್ಥಳವು ಜೈನ ಧರ್ಮ, ಸಾಹಿತ್ಯ ಮತ್ತು ಗಣಿತಶಾಸ್ತ್ರದ ಅಧ್ಯಯನಕ್ಕೆ ವಿಶ್ವಪ್ರಸಿದ್ಧವಾಗಿತ್ತು

ಉಜ್ಜಯಿನಿ: ಮಧ್ಯಪ್ರದೇಶದಲ್ಲಿರುವ ಈ ಪ್ರಾಚೀನ ನಗರವು ಗಣಿತ, ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಅಧ್ಯಯನಕ್ಕೆ ಪ್ರಸಿದ್ಧವಾಗಿತ್ತು.

ನಾಗಾರ್ಜುನಕೊಂಡ: ಆಂಧ್ರಪ್ರದೇಶದಲ್ಲಿರುವ ಈ ಐತಿಹಾಸಿಕ ಪ್ರದೇಶವು ಬೌದ್ಧ ಧರ್ಮ, ಧಾರ್ಮಿಕ ಅಧ್ಯಯನ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರಮುಖ ಕೇಂದ್ರವಾಗಿತ್ತು.

ವಾರಣಾಸಿ: ಉತ್ತರ ಪ್ರದೇಶದ ಈ ಪ್ರಾಚೀನ ನಗರವು ವೇದ, ಸಂಸ್ಕೃತ, ತತ್ವಶಾಸ್ತ್ರ, ಧರ್ಮ ಮತ್ತು ಸಾಹಿತ್ಯ ಅಧ್ಯಯನಕ್ಕೆ ಶತಮಾನಗಳಿಂದ ಪ್ರಸಿದ್ಧವಾಗಿದೆ.

ಕಾಶ್ಮೀರದ ಇತರೆ ಕಲಿಕಾ ಕೇಂದ್ರಗಳು: ಧಾರ್ಮಿಕ ಚಿಂತನೆ, ಸಂಸ್ಕೃತ ಸಾಹಿತ್ಯ, ತತ್ವಶಾಸ್ತ್ರ ಮತ್ತು ಭಾಷಾಶಾಸ್ತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಶ್ರೀಲಂಕಾದ ಬೌದ್ಧ ವಿಹಾರಗಳು: ಭಾರತೀಯ ಉಪಖಂಡದ ಬೌದ್ಧ ಶಿಕ್ಷಣ ಪರಂಪರೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದವು. ಧಾರ್ಮಿಕ ಅಧ್ಯಯನ ಮತ್ತು ಗ್ರಂಥಗಳ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದವು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories