ಮಲಗೋ ವಿಷಯ ಬಂದ್ರೆ, ಪ್ರತಿಯೊಬ್ಬರೂ ಮಲಗೋದಕ್ಕೆ ತುಂಬಾ ಪ್ರಾಮುಖ್ಯತೆ ಕೊಡ್ತಾರೆ. ಕೊಡಲೇಬೇಕಲ್ವಾ? ಇಲ್ಲಾಂದ್ರೆ ಆರೋಗ್ಯ ಸರಿಯಾಗಿರೋದು ಹೇಗೆ? ಆದರೆ ಈ ನಿದ್ರೆಯ ಬಗ್ಗೆ ಹೇಳೋದಾದ್ರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಮಲಗೋ ಅಭ್ಯಾಸ ಇರುತ್ತೆ. ತಮಗೆ ಆರಾಮವಾಗಿ ನಿದ್ರೆ (sound sleep) ಮಾಡಲು ಯಾವ ಭಂಗಿಯಲ್ಲಿ ಸಾಧ್ಯವೋ, ಜನರು ಹಾಗೇ ಮಲಗ್ತಾರೆ.
ಕೆಲವು ಜನರು ಬೆನ್ನಿನ ಮೇಲೆ ಮಲಗಲು ಇಷ್ಟಪಡುತ್ತಾರೆ, ಇನ್ನೂ ಕೆಲವು ಜನರಿಗೆ ಹೊಟ್ಟೆ ಮೇಲೆ ಮಲಗಲು ಹೆಚ್ಚು ಆರಾಮದಾಯಕವೆಂದು ಕಂಡು ಕೊಳ್ಳುತ್ತಾರೆ. ಹೊಟ್ಟೆ ಮೇಲೆ ಮಲಗಲು (sleeping on stomach) ಇಷ್ಟಪಡುವ ಅನೇಕರಿದ್ದಾರೆ. ಸುಸ್ತಾದ ದೇಹಕ್ಕೆ ಈ ಭಂಗಿ ಹೆಚ್ಚು ಜನಕ್ಕೆ ಆರಾಮ ನೀಡುತ್ತೆ. ಆದರೆ ಹೊಟ್ಟೆ ಮೇಲೆ ಮಲಗುವುದು ದೇಹ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಈ ಮಲಗುವ ಭಂಗಿ ನಿಮ್ಮ ದೇಹಕ್ಕೆ ಹಾನಿ ಮಾಡುತ್ತಿದೆಯೇ? ಅದನ್ನು ತಿಳಿಯೋಣ.
ಹೊಟ್ಟೆ ಮೇಲೆ ಮಲಗಲು ನಿಮಗೆ ಎಷ್ಟೇ ಆರಾಮದಾಯಕವೆನಿಸಿದರೂ, ಅದು ಉತ್ತಮ ಮಲಗುವ ಭಂಗಿಯಲ್ಲ ಎಂದು ವೈದ್ಯರು ಮತ್ತು ನಿದ್ರೆ ತಜ್ಞರು ಹೇಳುತ್ತಾರೆ. ಕೇವಲ 7% ಜನರು ಮಾತ್ರ ಮಲಗಲು ಈ ಭಂಗಿಯನ್ನು ಆಯ್ಕೆ ಮಾಡುತ್ತಾರೆ. ಉಳಿದ ಜನರು ಬೆನ್ನಿನ ಮೇಲೆ ಮಲಗುವ ಭಂಗಿಯನ್ನು ಅತ್ಯುತ್ತಮ ಎಂದು ಪರಿಗಣಿಸಿದ್ದಾರೆ.
ಕ್ಲೀವ್ಲ್ಯಾಂಡ್ ಕ್ಲಿನಿಕ್‌ನ ಅಧ್ಯಯನದ ಪ್ರಕಾರ, ಹೊಟ್ಟೆ ಮೇಲೆ ಮಲಗುವುದು ಬೆನ್ನುಹುರಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೆನ್ನುಹುರಿ (spinal cord) ಬಾಗುತ್ತದೆ. ವ್ಯಕ್ತಿಯ ದೇಹವು ಹದಗೆಡುವ ಅಪಾಯವಿರಬಹುದು. ಇದು ಕೆಲವೊಮ್ಮೆ ಮಾರಣಾಂತಿಕವಾಗುವ ಸಾಧ್ಯತೆ ಕೂಡ ಇದೆ ಅನ್ನೋದು ತಿಳಿದು ಬಂದಿದೆ.
ಹೊಟ್ಟೆ ಮೇಲೆ ಏಕೆ ಮಲಗಬಾರದು?
ಹೊಟ್ಟೆಯ ಮೇಲೆ ಮಲಗಿದಾಗ, ಬೆನ್ನಿನ ಕೆಳಭಾಗದಲ್ಲಿ ಸೆಳೆತ ಉಂಟಾಗುತ್ತೆ. ಅಷ್ಟೇ ಅಲ್ಲ, ಕುತ್ತಿಗೆಯನ್ನು ಒಂದು ಬದಿಗೆ ತಿರುಗಿಸಿ ಮಲಗುವುದರಿಂದ ಕುತ್ತಿಗೆ ನೋವು (neck pain) ಮತ್ತು ಬಿಗಿತ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ಕೆಲವು ಜನರು ಉಸಿರಾಟದ ತೊಂದರೆಯನ್ನು ಸಹ ಎದುರಿಸಬೇಕಾಗಬಹುದು.
ತಜ್ಞರ ಪ್ರಕಾರ, ಹೊಟ್ಟೆ ಮೇಲೆ ಮಲಗುವುದರಿಂದ ಭುಜದಲ್ಲಿ ತೀವ್ರ ನೋವಿನ ಸಮಸ್ಯೆ ಎದುರಿಸಬಹುದು. ಏಕೆಂದರೆ ಈ ಭಂಗಿಯಲ್ಲಿ ಮಲಗುವಾಗ, ಹೆಚ್ಚಿನವರು ತಮ್ಮ ತೋಳುಗಳನ್ನು ಮೇಲಕ್ಕೆ ಎತ್ತುತ್ತಾರೆ. ಇದರಿಂದ ಭುಜಗಳಲ್ಲಿ ನೋವು (shoulder pain) ಕಾಣಿಸಿಕೊಳ್ಳುತ್ತದೆ. ಆದುದರಿಂದ ಈ ಬಗ್ಗೆ ಎಚ್ಚರವಾಗಿರೋದು ಮುಖ್ಯ.
ಯಾವ ಮಲಗುವ ಭಂಗಿ ಉತ್ತಮ?
ನೀವು ಒಂದು ಸೈಡಿಗೆ ಮಲಗಬಹುದು ಅಥವಾ ನಿಮ್ಮ ಬೆನ್ನಿನ ಮೇಲೆ ಆರಾಮವಾಗಿ ಮಲಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಯಾರಿಗಾದರೂ ಸ್ಲೀಪ್ ಅಪ್ನಿಯಾ ಅಥವಾ ಗೊರಕೆ ಸಮಸ್ಯೆ ಇದ್ದರೆ, ಅಂತಹ ಜನರು ಬೆನ್ನಿನ ಮೇಲೆ ಮಲಗಬಾರದು.
ಹೃದಯ ಸಂಬಂಧಿತ (heart problem) ಸಮಸ್ಯೆಗಳನ್ನು ಹೊಂದಿರುವ ಜನರು, ಬಲಭಾಗಕ್ಕೆ ಮಲಗಬೇಕು.
ಜೀರ್ಣಕ್ರಿಯೆಗೆ (Digestive System) ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು, ಎಡಭಾಗದಲ್ಲಿ ಮಲಗುವುದು ಉತ್ತಮ. ಯಾಕಂದ್ರೆ ಇದು ಹೊಟ್ಟೆ ಮೇಲೆ ಒತ್ತಡ ಹೇರುವುದಿಲ್ಲ.