ಪ್ರತಿಯೊಂದು ರೋಗಕ್ಕೂ, ನೀವು ಸಾಮಾಜಿಕ ಮಾಧ್ಯಮದಲ್ಲಿ (social media)ಹಲವಾರು ಚಿಕಿತ್ಸೆಗಳು ಮತ್ತು ಪರಿಹಾರಗಳನ್ನು ಕಾಣಬಹುದು. ಆದ್ರೆ ನಿಜವಾಗ್ಲೂ ಈ ಪರಿಹಾರಗಳು ರೋಗವನ್ನು ಗುಣಮುಖ ಮಾಡುತ್ತಾ? ಅಥವಾ ವೈದ್ಯರೇ ಒಪ್ಪಿಗೆ ಸೂಚಿಸಿರುವ ಚಿಕಿತ್ಸೆಗಳೇ ಎಂದು ನೋಡಿದ್ರೆ, ಅಲ್ಲವೇ ಅಲ್ಲ. ಇಲ್ಲಿ ನೀವು ಇಲ್ಲಿವರೆಗೆ ನಂಬುತ್ತಿದ್ದಂತಹ, ಆದರೆ ಆದರೆ ಸುಳ್ಳಾಗಿರುವಂತಹ ಆರೋಗ್ಯ ಸಲಹೆ ಬಗ್ಗೆ ಹೇಳ್ತೀವಿ ಕೇಳಿ
ಸೂಪರ್ ಫುಡ್ (Superfood)
ಕೆಲವು ಆಹಾರಗಳನ್ನು ತುಂಬಾನೆ ಪವರ್ ಫುಲ್ ಆಗಿರೋ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ 'ಸೂಪರ್ ಫುಡ್‌ಗಳು' ಎಂದು ಕರೆಯಲಾಗುತ್ತದೆ. ಅದೇ ಆಹಾರ ತಿನ್ನಲು ಸಹ ಸಲಹೆ ನೀಡಲಾಗುತ್ತೆ. ಆದರೆ ನಿಜಾ ಹೇಳಬೇಕಂದ್ರೆ ಆ ಆಹಾರವು ಪೌಷ್ಟಿಕವಾಗಿದ್ದರೂ, ಯಾವುದೇ ಒಂದು ಆಹಾರವು ಎಲ್ಲಾ ಕಾಯಿಲೆಗಳನ್ನು ಗುಣಪಡಿಸಲು ಅಥವಾ ಸಮತೋಲಿತ ಆಹಾರವನ್ನು ಬದಲಾಯಿಸಲು ಸಾಧ್ಯವಿಲ್ಲ.
ಗ್ಲುಟೆನ್ ಮುಕ್ತ ಆಹಾರ (Gluten Free Food)
ಗ್ಲುಟೆನ್ ಮುಕ್ತ ಆಹಾರ ತುಂಬಾನೆ ಆರೋಗ್ಯಕರವಾಗಿದೆ ಎಂಬ ತಪ್ಪು ಕಲ್ಪನೆ ಇದೆ. ಸೀಲಿಯಾಕ್ ಕಾಯಿಲೆ ಅಥವಾ ಗ್ಲುಟೆನ್ ಸೂಕ್ಷ್ಮತೆಯಂತಹ ಕಾಯಿಲೆಯನ್ನು ಹೊಂದಿರದ ಹೊರತು, ಅನಗತ್ಯವಾಗಿ ಗ್ಲುಟೆನ್ ಅನ್ನು ಆಹಾರದಿಂದ ತೆಗೆದುಹಾಕುವುದು ಪೋಷಕಾಂಶಗಳ ಕೊರತೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಡಿಟಾಕ್ಸ್ ಡಯಟ್ (Detox Diet)
ದೇಹವನ್ನು ನಿರ್ವಿಷಗೊಳಿಸುವ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಡಿಟಾಕ್ಸ್ ಡಯಟ್ ಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆದರೆ ನಿಜವಾಗಿಯೂ, ದೇಹವು ತನ್ನದೇ ಆದ ನಿರ್ವಿಷೀಕರಣ ಕಾರ್ಯವಿಧಾನಗಳನ್ನು ಹೊಂದಿದೆ. ಅವು ದೇಹವನ್ನು ನಿರ್ವಿಷಗೊಳಿಸುತ್ತೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ತೋರಿಸಿದಂತೆ ವಿಪರೀತ ಡಿಟಾಕ್ಸ್ ಡಯಟ್ ಮಾಡಿದ್ರೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಕಚ್ಚಾ ಆಹಾರ ಉತ್ತಮ (Eating Raw Food)
ಕಚ್ಚಾ ಆಹಾರಗಳು ಪೌಷ್ಟಿಕವಾಗಿದ್ದರೂ, ಬೇಯಿಸಿದ ಆಹಾರಗಳಿಗಿಂತ ಅವು ಯಾವಾಗಲೂ ಶ್ರೇಷ್ಠವಾಗಿವೆ ಎಂಬ ತಪ್ಪು ಕಲ್ಪನೆ ಇದೆ. ಅಡುಗೆಯು ಕೆಲವು ಪೋಷಕಾಂಶಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಆಹಾರಗಳನ್ನು ಜೀರ್ಣಿಸಿಕೊಳ್ಳಲು ಸುಲಭಗೊಳಿಸುತ್ತದೆ.
ಕಾರ್ಬೋಹೈಡ್ರೇಟ್ (Carbohydrate)
ಕಾರ್ಬೋಹೈಡ್ರೇಟ್ ಗಳನ್ನು ತೂಕ ಹೆಚ್ಚಳ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವೆಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ತೋರಿಸಲಾಗುತ್ತದೆ. ಆದರೆ ಸತ್ಯ ಏನಂದ್ರೆ, ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಲ್ಲಿರುವಂತಹ ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ಶಕ್ತಿಗೆ ಅತ್ಯಗತ್ಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶಗಳು ಮತ್ತು ಫೈಬರ್ ಅನ್ನು ಒದಗಿಸುತ್ತವೆ.
ಕೊಬ್ಬಿನ ಆಹಾರಗಳನ್ನು ಅವಾಯ್ಡ್ ಮಾಡೋದು (Avoiding Fatty Food)
ಎಲ್ಲಾ ಕೊಬ್ಬಿನ ಆಹಾರಗಳನ್ನು ಡಯಟ್ ನಿಂದ ತೆಗೆಯೋದು ಆರೋಗ್ಯಕ್ಕೆ ಕೀಲಿ ಎಂದು ಅನೇಕರು ನಂಬುತ್ತಾರೆ. ಆದರೆ, ವಿವಿಧ ದೈಹಿಕ ಕಾರ್ಯಗಳಿಗೆ ಆರೋಗ್ಯಕರ ಕೊಬ್ಬುಗಳು ಅತ್ಯಗತ್ಯ. ನೀವು ಕಡಿಮೆ ಕೊಬ್ಬು ಇರುವ ಆಹಾರಗಳು ಎಂದು ಸೇವಿಸುವ ಉತ್ಪನ್ನಗಳು ಹೆಚ್ಚಾಗಿ ಹೆಚ್ಚುವರಿ ಸಕ್ಕರೆಗಳು ಮತ್ತು ಇತರ ಅನಾರೋಗ್ಯಕರ ಪದಾರ್ಥಗಳನ್ನು ಹೊಂದಿರುತ್ತವೆ.
ವೈದ್ಯರನ್ನು ಕಾಣೋದು ಉತ್ತಮ
ಈ ಸೋಶಿಯಲ್ ಮೀಡಿಯಾ ನೋಡಿ ನೀವು ಯಾವುದೇ ಆಹಾರ ಬದಲಾವಣೆಗಳನ್ನು ಮಾಡುವ ಮೊದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಪೂರಕವನ್ನು ಸೇರಿಸುವ ಮೊದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ. ಇಲ್ಲಾಂದ್ರೆ ಆರೋಗ್ಯ ಸಮಸ್ಯೆ ಉಂಟಾಗಬಹುದು.