ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಹಿನ್ನಲೆಯಲ್ಲಿ ಮನೆಗಳಲ್ಲಿ ನೀರಿನ ಸಂಗ್ರಹ ಮಾಡಿಕೊಳ್ಳುತ್ತಿರುವುದರಿಂದ ಡೆಂಗ್ಯೂ ಪ್ರಕರಣಗಳಿಗೆ ಕಾರಣ ಎನ್ನಲಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಎರಡು ಡೆಂಗ್ಯೂ ಪ್ರಕರಣ, ತರೀಕೆರೆ ಒಂದು, ಶೃಂಗೇರಿಯಲ್ಲಿ 5 ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ ತಿಂಗಳಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 88 ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದು ಆಶಾದಾಯಕವಾಗಿದೆ
ಜಿಲ್ಲೆಯ 39 ಗ್ರಾಮಗಳಲ್ಲಿ ಕುಡಿಯುವ ನೀರಿ ಸಮಸ್ಯೆ ಇದ್ದು, ಹಳ್ಳಿಗಳಿಗೆ 59 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದರಿಂದ ಜನರು ಟ್ಯಾಂಕ್ ಹಾಗೂ ಪ್ಲಾಸ್ಟಿಕ್ ಡ್ರಮ್ಗಳಲ್ಲಿ ನೀರು ಸಂಗ್ರಹಿಸಿಕೊಳ್ಳುತ್ತಿದ್ದು, ವಾರಗಟ್ಟಲೇ ನೀರನ್ನು ಬದಲಾಯಿಸದೆ ಇರುವುದರಿಂದ ಲಾರ್ವ ಉತ್ಪತ್ತಿಯಾಗಿ ಡೆಂಗ್ಯೂ ರೋಗಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 88 ಪ್ರಕರಣಗಳು :
ಸದ್ಯ ಚಿಕ್ಕಮಗಳೂರು ತಾಲೂಕಿನಲ್ಲಿ ಎರಡು ಡೆಂಗ್ಯೂ ಪ್ರಕರಣ, ತರೀಕೆರೆ ಒಂದು, ಶೃಂಗೇರಿಯಲ್ಲಿ ೫ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ ತಿಂಗಳಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 88 ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದು ಆಶಾದಾಯಕವಾಗಿದೆ.ಜನವರಿ ತಿಂಗಳಿಂದ ಇಲ್ಲಿಯವರೆಗೆ ಚಿಕ್ಕಮಗಳೂರು ತಾಲೂಕಿನಲ್ಲಿ 44, ತರೀಕೆರೆ ತಾಲೂಕಿನಲ್ಲಿ 8, ಕಡೂರು ತಾಲೂಕಿನಲ್ಲಿ 6, ನರಸಿಂಹರಾಜಪುರ ತಾಲೂಕಿನಲ್ಲಿ 2, ಕೊಪ್ಪ ತಾಲೂಕಿನಲ್ಲಿ 3, ಶೃಂಗೇರಿ ತಾಲೂಕಿನಲ್ಲಿ 12ಹಾಗೂ ಮೂಡಿಗೆರೆ ತಾಲೂಕಿನಲ್ಲಿ 2 ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು, ಗುಣಮುಖರಾಗಿದ್ದಾರೆ.
ಬಿಸಿಲತಾಪ ಸೇರಿದಂತೆ ಇನ್ನೀತ್ತರೆ ಕಾರಣಗಳಿಂದ ಜಿಲ್ಲೆಯಲ್ಲಿ ವೈರಲ್ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿ ಕಾಣಿಸಿ ಕೊಳ್ಳುತ್ತಿದೆ. ಜ್ವರ ಪ್ರಕರಣಗಳನ್ನು ಟೆಸ್ಟಿಂಗ್ ಮಾಡಿದ ಬಳಿಕ ಡೆಂಗ್ಯೂ ಜ್ವರ ಟೆಸ್ಟಿಂಗ್ ಮಾಡಲಾಗುತ್ತದೆ. ದೃಢಪಟ್ಟಲ್ಲಿ ಅವರಿಗೆ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದರು.ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಲಾರ್ವ ಸರ್ವೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಡೆಂಗ್ಯೂ ಜ್ವರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮಾಹಿತಿ ಕಲೆ ಹಾಕುತ್ತಿದ್ದಾರೆ.
ಡೆಂಗ್ಯೂ ಜ್ವರಕ್ಕೆ ಸಂಬಂಧಪಟ್ಟ ಸೊಳ್ಳೆ ಫ್ರೇಶ್ ನೀರಿನಲ್ಲಿ ಬೆಳೆಯುವಂತದ್ದು, ಕುಡಿಯುವ ನೀರಿನ ಕೊರತೆ ಇರುವುದರಿಂದ ವಾರಗಟ್ಟಲೇ ನೀರನ್ನು ಶೇಖರಿಸಿ ಇಡುವುದರಿಂದ ಡೆಂಗ್ಯೂ ಜ್ವರ ಕಾಣಿಸಿಕೊಳ್ಳಲು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನೀರನ್ನು ಸಂಗ್ರಹಿಸಿ ಇಡದಂತೆ. ಕಾಲ ಕಾಲಕ್ಕೆ ನೀರನ್ನು ಬದಲಿಸುವಂತೆ ಜನತೆಗೆ ತಿಳುವಳಿಕೆಯನ್ನು ನೀಡಲಾಗುತ್ತಿದೆ.ಇನ್ನೇನು ಮಳೆಗಾಲ ಆರಂಭವಾಗುತ್ತಿರುವುದರಿಂದ ಸೊಳ್ಳೆಗಳಿಂದ ಬೇರೆ ಬೇರೆ ರೋಗಗಳು ಉಲ್ಬಣಿಸುವ ಸಾಧ್ಯತೆ ಇರುವುದ ರಿಂದ ಡೆಂಗ್ಯೂ ಜ್ವರದ ಅರಿವು ಮೂಡಿಸುವುದರ ಜತೆಗೆ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ, ತೆಂಗಿನಸಿಪ್ಪೆ, ವಾಹನದ ಹಳೆಯ ಟೈರ್ಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು