ನಿಮ್ಮ ಆರೋಗ್ಯಕ್ಕೆ ಧಕ್ಕೆಯಾಗದಂತೆ ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಸೇರಿಸಲು ಮತ್ತೊಂದು ಅದ್ಭುತವಾದ ಆಹಾರವನ್ನು ಅಧ್ಯಯನವು ಕಂಡುಕೊಂಡಿದೆ. ದಕ್ಷಿಣ ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಆಹಾರದಿಂದ ಜನರು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಲ್ಲದೆ, ಅವರ ಕಾರ್ಡಿಯೋ ಮೆಟಾಬಾಲಿಕ್ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಕಂಡುಕೊಂಡಿದ್ದಾರೆ.
ಹಾಗಾದ್ರೆ, ಯಾವುದು ಈ ಆಹಾರ ಅಂತೀರಾ..? ಬಾದಾಮಿ. ಸಂಶೋಧಕರು ಶಕ್ತಿ-ನಿರ್ಬಂಧಿತ ಆಹಾರದಲ್ಲಿ ಬಾದಾಮಿಯ ಪರಿಣಾಮವನ್ನು ಪರಿಶೀಲಿಸಿದ್ದು, ಸುಮಾರು 7 ಕಿಲೋಗಳಷ್ಟು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ. ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ತೊಡಕುಗಳು ಕಾಳ್ಗಿಚ್ಚಿನಂತೆ ಹರಡುತ್ತಿರುವುದರಿಂದ ಅಧ್ಯಯನದ ಸಂಶೋಧನೆಗಳು ಜಾಗತಿಕವಾಗಿ ಪ್ರಸ್ತುತವಾಗಿವೆ.
ಬಾದಾಮಿಯಂತೆ ನಟ್ಸ್‌ನಲ್ಲೂ ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಅಧಿಕವಾಗಿರುತ್ತದೆ ಮತ್ತು ವಿಟಮಿನ್‌ಗಳು ಹಾಗೂ ಖನಿಜಗಳಿಂದ ತುಂಬಿರುತ್ತವೆ. ಆದರೆ ಅವುಗಳು ಹೆಚ್ಚಿನ ಕೊಬ್ಬಿನ ಅಂಶವನ್ನು ಹೊಂದಿರುತ್ತವೆ. ಇದು ಜನರ ತೂಕ ಹೆಚ್ಚಿಸುತ್ತದೆ ಎಂದು ಸಂಶೋಧಕ ಡಾ. ಶರಯಾ ಕಾರ್ಟರ್ ಹೇಳಿದರು.
9 ತಿಂಗಳ ಕಾಲ ಈ ಅಧ್ಯಯನ ನಡೆದಿದ್ದು, 106 ಜನ ಇದರಲ್ಲಿ ಭಾಗವಹಿಸಿದ್ದರು. 9 ತಿಂಗಳ ಪೈಕಿ ತೂಕ ನಷ್ಟಕ್ಕೆ ಮೂರು ತಿಂಗಳ ಶಕ್ತಿ-ನಿರ್ಬಂಧಿತ ಆಹಾರ ಹಾಗೂ ತೂಕ ನಿರ್ವಹಣೆಗಾಗಿ ಆರು ತಿಂಗಳ ಶಕ್ತಿ-ನಿಯಂತ್ರಿತ ಆಹಾರವನ್ನು ಒಳಗೊಂಡಿದೆ. "ಬಾದಾಮಿ ಪೂರಕ ಆಹಾರಗಳು ಕೆಲವು ಹೆಚ್ಚು ಅಥೆರೋಜೆನಿಕ್ ಲಿಪೊಪ್ರೋಟೀನ್ ಸಬ್‌ಫ್ರಾಕ್ಷನ್‌ಗಳಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಗಮನಾರ್ಹ ಬದಲಾವಣೆಗಳನ್ನು ಪ್ರದರ್ಶಿಸಿವೆ. ಇದು ದೀರ್ಘಾವಧಿಯಲ್ಲಿ ಸುಧಾರಿತ ಕಾರ್ಡಿಯೋಮೆಟಾಬಾಲಿಕ್ ಆರೋಗ್ಯಕ್ಕೆ ಕಾರಣವಾಗಬಹುದು" ಎಂದು ಸಂಶೋಧಕರು ಹೇಳಿದ್ದಾರೆ.
ಹಲವಾರು ಇತರ ಅಧ್ಯಯನಗಳು ಸಹ ಬಾದಾಮಿ ಮತ್ತು ಆರೋಗ್ಯಕರ ಹೃದಯದ ನಡುವೆ ನಿಕಟ ಸಂಬಂಧವನ್ನು ಕಂಡುಕೊಂಡಿವೆ. ಇದನ್ನು ಇಂಗ್ಲೀಷ್‌ನಲ್ಲಿ almonds ಎಂದು ಕರೆಯಲಾಗುತ್ತದೆ.
ಬಾದಾಮಿಯ ಪೌಷ್ಟಿಕಾಂಶದ ಮೌಲ್ಯ ಹೀಗಿದೆ..
100 ಗ್ರಾಂ ಬಾದಾಮಿಯು ಸುಮಾರು 580 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು 21.15-ಗ್ರಾಂ ಪ್ರೋಟೀನ್, 50 ಗ್ರಾಂ ಕೊಬ್ಬು, 21.55 ಗ್ರಾಂ ಕಾರ್ಬೋಹೈಡ್ರೇಟ್, 12.5 ಗ್ರಾಂ ಫೈಬರ್ ಮತ್ತು 4.35 ಗ್ರಾಂ ಸಕ್ಕರೆಯನ್ನು ಒಳಗೊಂಡಿದೆ. ಬಾದಾಮಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಮ್, ರಂಜಕ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಇ ಕೂಡ ಸಮೃದ್ಧವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA) ತಿಳಿಸಿದೆ.