ಬದಲಾಗುತ್ತಿರುವ ಜೀವನಶೈಲಿ (changing lifestyle), ಧೂಮಪಾನ ಮತ್ತು ಮದ್ಯಪಾನ, ಬೊಜ್ಜು, ಅನಿಯಮಿತ ಋತುಚಕ್ರ, ಕಡಿಮೆ ವೀರ್ಯಾಣುಗಳ ಸಂಖ್ಯೆ ಮುಂತಾದ ಅನೇಕ ಕಾರಣಗಳು ಬಂಜೆತನಕ್ಕೆ ಕಾರಣವಾಗಿವೆ. ಕೆಲವು ಸೂಕ್ಷ್ಮ ಪೋಷಕಾಂಶಗಳು ಫಲವತ್ತತೆ ದರವನ್ನು ಹೆಚ್ಚಿಸುತ್ತವೆ. ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅನೇಕ ಆಹಾರಗಳಿವೆ, ಅವುಗಳನ್ನು ಬಳಸಿ ಫಲವತ್ತತೆ ದರವನ್ನು ಹೆಚ್ಚಿಸಬಹುದು.
ಫೋಲೇಟ್ ಅಂಡಾಣುಗಳ ಕ್ವಾಲಿಟಿ ಹೆಚ್ಚಿಸುತ್ತದೆ
ಫೋಲೇಟ್ ಅನ್ನು ವಿಟಮಿನ್ ಬಿ 9 ಎಂದೂ ಕರೆಯಲಾಗುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳನ್ನು(red blood cells) ತಯಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಂಡಾಣುಗಳ ಕ್ವಾಲಿಟಿ, ಪಕ್ವತೆ, ಫಲೀಕರಣ ಮತ್ತು ಕಸಿಗೆ ಫೋಲೇಟ್ ಮಟ್ಟಗಳು ಅತ್ಯಗತ್ಯ. ಒಂದು ವೇಳೆ ನಿಮ್ಮ ದೇಹದಲ್ಲಿ ಫೋಲೇಟ್ ಕೊರತೆ ಉಂಟಾದರೆ ಗರ್ಭಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಏನನ್ನು ಸೇವಿಸಬೇಕು?
ಬೀನ್ಸ್, ಬೀಜ, ಮೊಟ್ಟೆ, ತಾಜಾ ಸೊಪ್ಪು, ಬೀಟ್ರೂಟ್, ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿಹಣ್ಣಿನಂತಹ ಸಿಟ್ರಸ್ ಹಣ್ಣುಗಳು, ಮೊಳಕೆ ಕಾಳು, ಬ್ರೊಕೋಲಿ, ಕೇಲ್ ಮತ್ತು ಆವಕಾಡೊದಂತಹ ಆಹಾರಗಳಲ್ಲಿ ಫೋಲೇಟ್ ನೈಸರ್ಗಿಕವಾಗಿ ಕಂಡುಬರುತ್ತದೆ.
ಸತು ಅಂಡೋತ್ಪತ್ತಿಗೆ ಸಹಾಯ ಮಾಡುತ್ತದೆ
ಅಂಡೋತ್ಪತ್ತಿ ಮತ್ತು ಋತುಚಕ್ರದಲ್ಲಿ ಸತುವು ಪ್ರಮುಖ ಪಾತ್ರ ವಹಿಸುತ್ತದೆ. ಇದು ವೀರ್ಯದ ಗುಣಮಟ್ಟ ಮತ್ತು ವೀರ್ಯಾಣು ಚಲನಶೀಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದು ಉರಿಯೂತದ ಏಜೆಂಟ್ ಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ.
ಹಾರ್ಮೋನ್ ಸಮತೋಲನಕಾರಕವಾಗಿ (hormonal balance) ಸತುವು ಟೆಸ್ಟೋಸ್ಟೆರಾನ್ ಮತ್ತು ಪ್ರೊಜೆಸ್ಟರಾನ್ ಅನ್ನು ಸಮತೋಲನಗೊಳಿಸುತ್ತದೆ. ಇದು ಪುರುಷರು ಮತ್ತು ಮಹಿಳೆಯರ ಲೈಂಗಿಕ ಆರೋಗ್ಯ ಬಲಪಡಿಸುತ್ತದೆ. ಕೆಂಪು ಮಾಂಸವು ಸತುವಿನ ಉತ್ತಮ ಮೂಲ. ಕುಂಬಳಕಾಯಿ ಬೀಜಗಳು, ಸೆಣಬಿನ ಬೀಜಗಳು, ಎಳ್ಳು ಮತ್ತು ಅಗಸೆ ಬೀಜಗಳು ಹೆಚ್ಚಿನ ಪ್ರಮಾಣದ ಸತುವನ್ನು ಹೊಂದಿರುತ್ತವೆ. ಡೈರಿ ಉತ್ಪನ್ನಗಳು, ತರಕಾರಿಗಳು, ಬೀಜಗಳು, ಡಾರ್ಕ್ ಚಾಕೊಲೇಟ್ ಸಹ ಇದರ ಮೂಲಗಳಾಗಿವೆ.
ವಿಟಮಿನ್ ಎ ಭ್ರೂಣದ ಬೆಳವಣಿಗೆಗೆ ಸಹಕಾರಿ
ಸಾಕಷ್ಟು ವಿಟಮಿನ್ ಎ (Vitamin A) ಮಟ್ಟವು ಅಂಡಾಣುಗಳ ಗುಣಮಟ್ಟ ಮತ್ತು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆರೋಗ್ಯಕರ ರೋಗನಿರೋಧಕ ವ್ಯವಸ್ಥೆ, ಬೆಳವಣಿಗೆ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ. ಈ ಅಂಶಗಳ ಕೊರತೆ ಉಂಟಾದರೆ ಭ್ರೂಣದಲ್ಲಿ ವಿರೂಪಕ್ಕೆ ಕಾರಣವಾಗಬಹುದು. ಅದಕ್ಕಾಗಿ ನಿಮ್ಮ ಆಹಾರಗಳಲ್ಲಿ ಕಾಡ್ ಲಿವರ್ ಎಣ್ಣೆ, ಸಿಹಿ ಗೆಣಸು, ಕ್ಯಾರೆಟ್ ಮತ್ತು ಇತರ ಅನೇಕ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬಹುದು.
ಸೆಲೆನಿಯಂ
ಸೆಲೆನಿಯಂ (selenium) ಫರ್ಟಿಲಿಟಿಗೆ (Fertility) ಅಗತ್ಯವಾದ ಖನಿಜ. ಇದನ್ನು ಪ್ರೋಟೀನ್ಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕವಾಗಿದ್ದಿ, ಫರ್ಟಿಲಿಟಿ (fertility) ಹೆಚ್ಚಿಸಲು ಮುಖ್ಯವಾಗಿದೆ. ಲ್ಯೂಟಿಯಲ್ ಹಂತದಲ್ಲಿ ಸೆಲೆನಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಸೆಲೆನಿಯಂ ಹೊಂದಿರುವ ಆಹಾರಗಳಲ್ಲಿ ಬ್ರೆಜಿಲ್ ಬೀಜಗಳು, ಸಮುದ್ರಾಹಾರಗಳು, ಕೋಳಿ, ಬ್ರೌನ್ ರೈಸ್ ಮತ್ತು ಗೋಧಿ ಬ್ರೆಡ್ ಸೇರಿವೆ.
Image: Getty
ವಿಟಮಿನ್ ಡಿ ಫಲವತ್ತತೆಯನ್ನು ಹೆಚ್ಚಿಸಬಹುದು
ವಿಟಮಿನ್ ಡಿ ಸಂತಾನೋತ್ಪತ್ತಿ ಅಂಗಾಂಶಗಳಾದ್ಯಂತ ವಿತರಿಸಲ್ಪಡುತ್ತವೆ. ವಿಟಮಿನ್ ಡಿ ಫಲವತ್ತತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಚಿಕಿತ್ಸೆಯು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಫಲವತ್ತತೆ ದರವನ್ನು ಹೆಚ್ಚಿಸುತ್ತದೆ. ಸೂರ್ಯನ ಬೆಳಕಿನ ಜೊತೆಗೆ, ವಿಟಮಿನ್ ಡಿ ಹಸುವಿನ ಹಾಲು, ಸೋಯಾ ಹಾಲು, ಕಿತ್ತಳೆ ರಸ, ಧಾನ್ಯಗಳಲ್ಲಿಯೂ ಕಂಡುಬರುತ್ತದೆ.