ಶುಂಠಿ ಜೊತೆ ಎರಡೇ ಎರಡು ಕಾಳುಮೆಣಸು ಹಾಕಿ ಚುಮು ಚುಮು ಚಳಿಗೆ ಮಾಡ್ಕೊಳ್ಳಿ ಖಾರ ಖಾರವಾದ ಸೂಪ್

First Published | Nov 30, 2024, 10:21 PM IST

ಫೆಂಗಲ್ ಚಂಡಮಾರುತದಿಂದಾಗಿ ರಾಜ್ಯದ ಉತ್ತರ ಒಳನಾಡು ಭಾಗದಲ್ಲಿ ಮಳೆ ಜೊತೆಯಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಈ ಚಳಿಯಿಂದ ರಕ್ಷಣೆ ಪಡೆಯಲು ಗ್ರಾಮೀಣ ಪ್ರದೇಶಗಳಲ್ಲಿ ತಯಾರಿಸುವ ಖಾರದ ಸೂಪ್ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ.

ಫೆಂಗಲ್ ಚಂಡಮಾರುತದಿಂದಾಗ ರಾಜ್ಯದ  ಉತ್ತರ ಒಳನಾಡು ಭಾಗದಲ್ಲಿ ಮಳೆ ಜೊತೆಯಲ್ಲಿ ಚಳಿಯ ಪ್ರಮಾಣ ಏರಿಕೆಯಾಗಿದೆ. ಉಣ್ಣೆಯ ಬಟ್ಟೆಗಳಿಲ್ಲದೇ ಜನರು ಮನೆಯಿಂದ  ಹೊರ ಬರಲು ಸಾಧ್ಯವಾಗದ ರೀತಿಯಲ್ಲಿ ಚಳಿ ಹೆಚ್ಚಾಗುತ್ತಿದೆ.

ಮಳೆ-ಚಳಿ ಜೊತೆಯಲ್ಲಿ ತಂಪಾದ ಗಾಳಿ ಬೀಸುತ್ತಿರೋದರಿಂದ ಶೀತ ಸಂಬಂಧಿಸಿದ ರೋಗಗಳು ಬರೋ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತಯಾರಿಸುವ ವಿಶೇಷ ಸೂಪ್ ರೆಸಿಪಿಯನ್ನು ನಿಮಗಾಗಿ ತಂದಿದ್ದೇವೆ. ಈ ಸೂಪ್ ಐದರಿಂದ ಆರು ನಿಮಿಷದಲ್ಲಿ ಮಾಡಬಹುದು.

Latest Videos


ಸೂಪ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಕಾಳು ಮೆಣಸು: 2, ಜೀರಿಗೆ: ಅರ್ಧ ಟೀ ಸ್ಪೂನ್,  ಪುದಿನಾ ಎಲೆ: 2, ಅರಿಶಿನ: ಚಿಟಿಕೆ, ಉಪ್ಪು: ರುಚಿಗೆ ತಕ್ಕಷ್ಟು, ಲವಂಗ: 2, ನಿಂಬೆ ಹಣ್ಣಿನ ರಸ: 1/4 ಟೀ ಸ್ಪೂನ್, ಎರಡು ಗ್ಲಾಸ್ ನೀರು, ಅರ್ಧ ಇಂಚು ಹಸಿಶುಂಠಿ

ಖಾರವಾದ ಸೂಪ್ ಮಾಡುವ ವಿಧಾನ

ಮೊದಲಿಗೆ ಕಲ್ಲಿನಲ್ಲಿ ಕಾಳು ಮೆಣಸು ಮತ್ತು ಜೀರಿಗೆಯನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಒಲೆ ಆನ್ ಮಾಡ್ಕೊಂಡು ದೊಡ್ಡದಾದ ಪಾತ್ರೆಯನ್ನು ಇರಿಸಿಕೊಂಡು ಅದಕ್ಕೆ ಎರಡು ಗ್ಲಾಸ್‌ನಷ್ಟು ನೀರು ಹಾಕಿಕೊಳ್ಳಿ.

ನೀರು ಬಿಸಿಯಾಗಲು ಆರಂಭಿಸುತ್ತಿದ್ದಂತೆ ತರಿತರಿಯಾಗಿ ರುಬ್ಬಿಕೊಂಡಿರುವ ಕಾಳು ಮೆಣಸು ಮತ್ತು ಜೀರಿಗೆ ಮಿಶ್ರಣ ಹಾಗೂ ಪುದಿನಾ ಎಲೆಗಳನ್ನು ಸೇರಿಸಿಕೊಳ್ಳಿ. ನಂತರ ಅರ್ಧ ಇಂಚು ಶುಂಠಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಕುದಿಯುತ್ತಿರುವ ನೀರಿಗೆ ಸೇರಿಸಿ  ಚೆನ್ನಾಗಿ ಮಿಶ್ರಣ ಮಾಡ್ಕೊಳ್ಳಿ.  ತದನಂತರ ಲವಂಗ ಸಹ ಜಜ್ಜಿಕೊಂಡು ಸೇರಿಸಿಕೊಳ್ಳಬೇಕು.

ಆ ಬಳಿಕ ಚಿಟಿಕೆಯಷ್ಟು ಶುದ್ಧ ಅರಿಶಿನ ಪುಡಿ ಮತ್ತು ರುಚಿಗೆ  ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ನಾಲ್ಕರಿಂದ ಐದು ನಿಮಿಷ ಚೆನ್ನಾಗಿ ಕುದಿಸಿಕೊಳ್ಳಬೇಕು. ಕೊನೆಗೆ ನೀರನ್ನೆಲ್ಲಾ ಜರಡಿ ಹಿಡಿದುಕೊಂಡು ನಿಂಬೆ ಹಣ್ಣಿನ ರಸ ಸೇರಿಸಿದ್ರೆ ಖಾರ ಖಾರವಾದ ಸೂಪ್ ಕುಡಿಯಲು ಸಿದ್ಧವಾಗುತ್ತದೆ. (ಉಪ್ಪು ಹಾಕುವ ಬದಲು ಬೆಲ್ಲ ಸೇರಿಸಿಕೊಳ್ಳಬಹುದು)

click me!