ಶುಕ್ರವಾರದ ದಿನ ದೋಸೆ ತಿನ್ಬೇಕು ಅಂತ ಬೆಂಗಳೂರಿನ 'ಗಾಂಧಿ ಬಜಾರ್'ಗೆ ಹೋದ್ರೆ ಫೇಮಸ್ ಹೋಟೆಲ್ ವಿದ್ಯಾರ್ಥಿ ಭವನದಲ್ಲಿ ದೋಸೆಗೆ ಸರತಿ ಸಾಲಲ್ಲಿ ನಿಲ್ಲೋ ಅಗತ್ಯವೇ ಇಲ್ಲ. ಕಾರಣ ಅಲ್ಲಿ 'ಈ ದಿನ ರಜಾ' ಬೋರ್ಡ್ ಇರುತ್ತೆ. ದೋಸೆಯ ಆಸೆ ನಿರಾಸೆ ಆಗುತ್ತೆ. ಇದಕ್ಕೆ ಕಾರಣ ಸಾಮಾನ್ಯ ಅಲ್ಲ. ಒಂದು ಐತಿಹಾಸಿಕ ಹಿನ್ನೆಲೆ ಇದೆ.
1947 ಆಗಸ್ಟ್ 15ರಂದು ಭಾರತ ಸ್ವತಂತ್ರ ರಾಷ್ಟ್ರವಾದ ದಿನ ಶುಕ್ರವಾರ. ಅಂದಿನ ವಿದ್ಯಾರ್ಥಿ ಭವನದ ಮಾಲೀಕರಾದ ಸಾಲಿಗ್ರಾಮ ಪರಮೇಶ್ವರ ಉರಾಳರು ಎಂದಿಗಿಂತ ಮುಂಚೆಯೇ ಎದ್ದು ಸಾಮಾನ್ಯ ತಯಾರಿಸುವ ಪ್ರಮಾಣಕ್ಕಿಂತ 4 - 5 ಪಟ್ಟು ಹೆಚ್ಚು ಸಿಹಿತಿಂಡಿ ತಯಾರಿಸಿ, ವಿದ್ಯಾರ್ಥಿ ಭವನದ ಬಾಗಿಲು ತೆರೆದರು.
ಹೊರಗೆ ಗಾಂಧಿಬಜಾರ್ ಚೌಕದಲ್ಲಿ ಇಡೀ ಬೆಂಗಳೂರು ಜನತೆ ಸೇರಿದಂತೆ ಕಂಡಿತು. ಮೂಲತಃ ಪರಮೇಶ್ವರ ಉರಾಳರು ರಾಷ್ಟ್ರಪ್ರೇಮಿ. ಸ್ವಾತಂತ್ರ್ಯ ಹೋರಾಟಕ್ಕೆ ವಿದ್ಯಾರ್ಥಿ ಭವನ ಕೂಡಾ ತನ್ನದೇ ರೀತಿಯಲ್ಲಿ ಸೇವೆ ಸಲ್ಲಿಸಿತ್ತು. ಉರಾಳರು ಅಡುಗೆ ಕೋಣೆಯಲ್ಲಿದ್ದ ಸಿಹಿ ತಿಂಡಿಗಳನ್ನೆಲ್ಲಾ ಭವನದ ಬಾಗಿಲಲ್ಲಿಟ್ಟರು.
ಮೊದಲ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮುಳುಗಿದ ಜನಸಂದಣಿಗೆ ಪರಮೇಶ್ವರ ಉರಾಳರ ಔದಾರ್ಯ ರಾಷ್ಟ್ರಪ್ರೇಮದ ಪ್ರತೀಕವಾಗಿ ಕಂಡಿತು. ಹೆಚ್ಚು ಜನರಿಗೆ ಸಿಹಿ ನೀಡಿದರು. ಇದೆಲ್ಲ ಆದ ಬಳಿಕ ಪರಮೇಶ್ವರ ಉರಾಳರಿಗೆ ಮಾಣಿಗಳಿಗೆಲ್ಲ ವಿಶ್ರಾಂತಿ ಕೊಡುವ ಮನಸ್ಸಾಯಿತು.
ಜೊತೆ ಜೊತೆಗೆ ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಪ್ರತಿ ಶುಕ್ರವಾರವನ್ನು ವಾರದ ರಜೆ ದಿನವನ್ನಾಗಿ ಆಚರಿಸಬಾರದೇಕೆ ಎನಿಸಿತು. ಅಂದಿನಿಂದ ಶುರುವಾದ ಶುಕ್ರವಾರದ ರಜೆ ಸಂಪ್ರದಾಯ ಇಂದಿಗೂ ಮುಂದುವರೆದಿದೆ.