ಆಹಾ ಬಾಯಿಗೆ ರುಚಿ ಅಂತ ಸಿಕ್ಕಿದ್ದೆಲ್ಲಾ ತಿಂದು ಹೊಟ್ಟೆ ಭಾರ ಆಗೋದು ಸಹಜ. ಇನ್ನು ವಿಶೇಷ ಔತಣ ಅಂದ್ರೆ ಹೊಟ್ಟೆ ಸಾಕು ಅಂದ್ರೂ ನಾಲಗೆಯ ಒತ್ತಾಯಕ್ಕೆ ಮಣಿದು ತುಸು ಹೆಚ್ಚೇ ತಿನ್ನುತ್ತೇವೆ.
ತಟ್ಟೆ ತುಂಬಾ ವಿವಿಧ ಖಾದ್ಯ ಇಟ್ಟು ತಿನ್ನೋದೇನೋ ಚಂದ.. ಆಮೇಲಿನ ಕಷ್ಟ ಬೇಕಾ..?
ಬೇಕಾಬಿಟ್ಟಿ ತಿಂದು ಹೊಟ್ಟೆ ತಳಮಳ, ಉಬ್ಬರಿಸೋದು, ಸುಸ್ತು ಹೀಗೆ ಏನೇನೋ ಆಗಲಾರಂಭಿಸಿ ಯಾಕಾದ್ರೂ ತಿಂದೆನೋ ಎಂದೆನಿಸಿಬಿಡುವಂತಾಗುತ್ತದೆ.
ಇದರಿಂದ ಅಸಿಡಿಟಿ, ಅಜೀರ್ಣ ಸೇರಿ ಹಲವು ಸಮಸ್ಯೆಗಳೂ ಉಂಟಾಗಬಹುದು.
ಜೀರಾ ನೀರು ಕುಡಿಯೋದರ ಬದಲು ನಿಮ್ಮ ಹೊಟ್ಟೆ ತಳಮಳ ತಕ್ಷಣ ಗುಣಮಾಡಲು ಇಲ್ಲಿದೆ ಜೀರಾ ಕೂಲರ್ ರೆಸಿಪಿ
ಈ ರೆಸಿಪಿಯಲ್ಲಿ ಜೀರಿಗೆ ಜೊತೆ ಉಪ್ಪು, ಲಿಂಬೆ ರಸದ ಗುಣವೂ ಸೇರುತ್ತದೆ.
ಜೀರಾ ಕೂಲರ್ ತಯಾರಿಸೋಕೆ ಏನೇನು ಬೇಕು: 2 ಗ್ಲಾಸ್ ನೀರು, 2-3 ಚಮಚ ಜೀರಿಗೆ, ಉಪ್ಪು, ಅರ್ಧ ಚಮಚಕ್ಕಿಂತ ಕಡಿಮೆ ಮೆಣಸಿನ ಹುಡಿ, ರುಚಿಗೆ ತಕ್ಕಂತೆ ಲಿಂಬೆ ರಸ, ಸಕ್ಕರೆಜೇನು, ಒಂದೆರಡು ಪುದೀನಾ ಎಲೆ, ಸೋಡಾ
ಮಾಡುವ ವಿಧಾನ: ಪುದೀನಾ ಸೊಪ್ಪನ್ನು ಸಣ್ಣಗೆ ಜಜ್ಜಿ ಬದಿಗಿಡಿ. ಜೀರಿಗೆಯನ್ನು ಪರಿಮಳ ಬಿಡುವಷ್ಟು ಹುರಿಯಿರಿ. ಜೀರಿಗೆಗೆ ನೀರು ಸೇರಿಸಿ ಕುದಿಸಿ.
ಮೀಡಿಯಂ ಫ್ಲೇಮ್‌ನಲ್ಲಿಟ್ಟು 5-10 ನಿಮಿಷ ಕುದಿಸಿ. ನಂತರ ಇಳಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇನ್ನನು ಗ್ಲಾಸ್ ತಗೊಂಡು ಕಾಲು ಗ್ಲಾಸ್‌ನಷ್ಟು ಜೀರಾ ರಸ ಹಾಕಿ. ಜಜ್ಜಿದ ಪುದೀನಾ ಸೊಪ್ಪು ಹಾಕಿ, ಉಪ್ಪು, ಲಿಂಬೆ ರಸ, ಮೆಣಸಿನ ಹುಡಿ, ಸಕ್ಕರೆ ಜೇನು ಬೆರೆಸಿ ಮಿಕ್ಸ್ ಮಾಡಿ.
ನಂತರ ಸೋಡಾ ಬೆರೆಸಿ. ಸ್ವಲ್ಪ ಐಸ್ ಸೇರಿಸಿಕೊಳ್ಳಿ. ಸೋಡಾ ಇಷ್ಟವಿಲ್ಲದಿದ್ದರೆ ತಣ್ಣೀರು ಸೇರಿಸಬಹುದು. ಹಾಗೆ ನೀರು ಸೇರಿಸೋದಾದರೆ ಅರ್ಧ ಗ್ಲಾಸ್ ಜೀರಾ ನೀರು ಸೇರಿಸಿ