ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟವನ್ನು ಗಳಿಸಿಕೊಂಡಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ಮಂಗಳವಾರ ಏಷ್ಯಾದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 6.83 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮುಕೇಶ್ ಈ ಸ್ಥಾನಕ್ಕೇರಿದ್ದಾರೆ. ಆದರೆ ಎಷ್ಟು ಕಾಸ್ಟ್ಲೀ ಆಹಾರವನ್ನು ತಿನ್ನಬಹುದಾದ್ರೂ ಮುಕೇಶ್ ಅಂಬಾನಿ ತುಂಬಾ ಸರಳ ಆಹಾರವನ್ನು ಸೇವಿಸುತ್ತಾರೆ.
ಬಕಿಂಗ್ಹ್ಯಾಮ್ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆ ಆಂಟಿಲಿಯಾ ಮತ್ತು ಐಷಾರಾಮಿ ಜೀವನದ ಹೊರತಾಗಿಯೂ ಅವರು ಸರಳ ಆಹಾರಪದ್ಧತಿಯನ್ನು ಅನುಸರಿಸುತ್ತಾರೆ. ಮುಕೇಶ್ ಅಂಬಾನಿ ಅವರು ಮನೆಯಲ್ಲೇ ತಯಾರಿಸಿದ ಅಡುಗೆಯನ್ನು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ಎರಡು ಸ್ಟ್ರೀಟ್ ಫುಡ್‌ನ್ನು ಅವರು ತುಂಬಾ ಇಷ್ಟಪಟ್ಟು ತಿನ್ನುತ್ತಾರಂತೆ.
ಮುಕೇಶ್ ಅಂಬಾನಿ ನೆಚ್ಚಿನ ಬೀದಿ ಬದಿಯ ಆಹಾರವೆಂದರೆ ಭೇಲ್ ಮತ್ತು ದಹಿ ಬಟಾಟಾ ಪುರಿ. ಮುಕೇಶ್ ಅಂಬಾನಿ ಅವರು ಬೀದಿ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ ಮತ್ತು ಈ ಎರಡು ಭಕ್ಷ್ಯಗಳು ಯಾವಾಗಲೂ ಅವರ ನೆಚ್ಚಿನದ್ದಾಗಿರುತ್ತವೆ ಎಂದು ನೀತಾ ಅಂಬಾನಿ ಹೇಳುತ್ತಾರೆ.
ಫೆಮಿನಾ ಮಾಧ್ಯಮ ಜೊತೆಗಿನ ಈ ಹಿಂದಿನ ಸಂದರ್ಶನದಲ್ಲಿ ಮಾತನಾಡಿದ್ದ ನೀತಾ ಅಂಬಾನಿ, ಕುಟುಂಬದ ಉಳಿದವರಿಗೂ ಸಮಯವನ್ನು ನೀಡುವುದರ ಜತೆಗೆ, ದಂಪತಿ ಇನ್ನೂ ಹೆಚ್ಚಿನ ಸಮಯವನ್ನು ಒಟ್ಟಾಗಿ ಕಳೆಯುತ್ತಾರಂತೆ. ಕೆಲವೊಮ್ಮೆ ಬೀದಿ ಆಹಾರವನ್ನು ಸೇವಿಸಲು ಹೊರಗಡೆ ಹೋಗುವುದಾಗಿ ನೀತಾ ಅಂಬಾನಿ ತಿಳಿಸಿದ್ದಾರೆ.
ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ. ಕೆಲವೊಮ್ಮೆ ನಮ್ಮ ಪ್ಲ್ಯಾನ್ಗಳು ದಿಢೀರ್ ಆಗಿರುತ್ತವೆ. ತಡರಾತ್ರಿಯಲ್ಲಿ ಎದ್ದು ಒಂದು ಕಪ್ ಕಾಫಿಗೆ ಹೋಗೋಣ ಎಂದು ಹೇಳುತ್ತಾರೆ. ಭೇಲ್ ಅಥವಾ ದಹಿ ಬಟಾಟಾ ಪೂರಿಗಾಗಿ ಸ್ವಾತಿ ಸ್ನ್ಯಾಕ್ಸ್‌ಗೆ ಹೋಗುತ್ತೇವೆ ಎಂದು ನೀತಾ ಅಂಬಾನಿ ಹೇಳಿದರು.
ಮುಕೇಶ್ ಮತ್ತು ನೀತಾ ಅಂಬಾನಿ ಮುಂಬೈನಲ್ಲಿ ಗ್ರ್ಯಾಂಡ್ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ನೀತಾ ಅಂಬಾನಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಅಂಬಾನಿಗಳು ಸರಳ ಜೀವನ ನಡೆಸಲು ಬಯಸುತ್ತಾರೆ.
ಮುಕೇಶ್ ಅಂಬಾನಿ ನೆಚ್ಚಿನ ಆಹಾರವೂ ಸಾಮಾನ್ಯ ಜನರ ಮುಖ್ಯ ಆಹಾರವಾಗಿದೆ. ಅವರು ಸಾದಾ ದಾಲ್, ಚಪಾತಿ ಮತ್ತು ಅನ್ನವನ್ನು ತಿನ್ನಲು ಇಷ್ಟಪಡುತ್ತಾರೆ. ಅವರು ಎಲ್ಲಿ ತಿನ್ನುತ್ತಾರೆ ಎಂಬುದು ಮುಖ್ಯವಲ್ಲ. ರಸ್ತೆ ಬದಿಯ ಅಂಗಡಿಯಿಂದ ತಿನ್ನುವುದಾದರೂ ಆಹಾರವು ರುಚಿಕರವಾಗಿರಬೇಕು. ಎಂದು ಅವರು ಬಯಸುತ್ತಾರೆ ಎಂದು ತಿಳಿದುಬಂದಿದೆ.