4 ಕಾಳುಮೆಣಸು, 1 ಟೊಮೆಟೋ ಹಾಕಿ ತಯಾರಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನೋ ಹುಳಿ ರಸಂ

First Published | Nov 19, 2024, 2:58 PM IST

ಕೆಲಸದ ಒತ್ತಡದಲ್ಲಿ ಅಡುಗೆ ಮಾಡಲು ಸಮಯವಿಲ್ಲದವರಿಗೆ, ಕೇವಲ ಐದು ನಿಮಿಷಗಳಲ್ಲಿ ಸಿದ್ಧವಾಗುವ ಹುಳಿ ರಸಂ ರೆಸಿಪಿ. ಬ್ಯಾಚುಲರ್‌ಗಳಿಗೆ ಒಂದು ತ್ವರಿತ ಮತ್ತು ರುಚಿಕರವಾದ ಊಟ.

ಮನೆಯಲ್ಲಿ ಬೇಳೆ ಮತ್ತು ತರಕಾರಿ ಇಲ್ಲದಿರುವಾಗ ಇಂದು ನಾವು ಹೇಳುತ್ತಿರುವ ರುಚಿಯಾದ ಹುಳಿ ರಸಂ ತಯಾರಿಸಿಕೊಳ್ಳಿ. ಈ ರಸಂ ಮಾಡಲು ಕೇವಲ 4 ರಿಂದ 5 ನಿಮಿಷ ಬೇಕಾಗುತ್ತದೆ. 

ಇಂದು ಅಡುಗೆ ಮಾಡಿಕೊಳ್ಳಲು ಸಮಯವಿಲ್ಲ. ಕೆಲಸದ ಒತ್ತಡದಲ್ಲಿ ಅಡುಗೆ ತಯಾರಿಸಿಕೊಳ್ಳಲು ಬೇಸರವಾಗುತ್ತದೆ. ಆದ್ರೆ ಹೊರಗಿನ ಊಟಕ್ಕೆ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ.

Latest Videos


ಬ್ಯುಸಿ ಶೆಡ್ಯೂಲ್‌ನಲ್ಲಿರೋರಿಗಾಗಿಯೇ ಕೇವಲ ನಾಲ್ಕರಿಂದ ಐದು ನಿಮಿಷದಲ್ಲಿ ಸಿದ್ಧವಾಗುವ ರಸಂ ರೆಸಿಪಿ ತಂದಿದ್ದೇವೆ. ಬಹುತೇಕ ಬ್ಯಾಚುಲರ್‌ಗಳ ಇಷ್ಟದ ರೆಸಿಪಿ ಇದಾಗಿದೆ. ಅನ್ನಕ್ಕೆ ಬಿಸಿಯಾದ ಹುಳಿ ರಸಂ ಹಾಕಿಕೊಂಡು ತಿಂದ್ರೆ ಎರಡು ತುತ್ತು ಹೆಚ್ಚು ತಿನ್ನುತ್ತೀರಿ.

ಹುಳಿ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು

ಗುಂಟೂರು ಮೆಣಸಿನಕಾಯಿ: 2, ಕಾಳು ಮೆಣಸು: 1 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್,  ಹಸಿಮೆಣಸಿನಕಾಯಿ: 2, ಬೆಳ್ಳುಳ್ಳಿ: 5 ರಿಂದ 6 ಎಸಳು, ಹುಣಸೆರಸ: 2 ಟೀ ಸ್ಪೂನ್: ಟೊಮೆಟೋ: 1, ಅಡುಗೆ ಎಣ್ಣೆ: 2 ಟೀ ಸ್ಪೂನ್, ಕೋತಂಬರಿ ಸೊಪ್ಪು, ಅರಿಶಿಣ: 1/4 ಟೀ ಸ್ಪೂನ್, ಕರೀಬೇವು: 5 ಎಲೆ, ಸಾಸವೆ: ಅರ್ಧ ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು 

ಹುಳಿ ರಸಂ ಮಾಡುವ ವಿಧಾನ

ಮೊದಲಿಗೆ ಮಿಕ್ಸಿ ಜಾರ್‌ಗೆ ಕಾಳು ಮೆಣಸು, ಜೀರಿಗೆ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಅರ್ಧ ಟೊಮೆಟೋ ಹಾಕಿ, ಅರ್ಧ ಕಪ್‌ನಷ್ಟು ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ. ಇದಾದ ನಂತರ ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಿ.

ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಜೀರಿಗೆ, ಸಾಸವೆ ಮತ್ತು ಕರೀಬೇವು ಹಾಕಿಕೊಳ್ಳಬೇಕು. ನಂತರ ಗುಂಟೂರು ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಮಾಡಿ ಒಗ್ಗರಣೆಗೆ ಸೇರಿಸಿಕೊಳ್ಳಬೇಕು.
 

ಆ ಬಳಿಕ ಒಗ್ಗರಣೆಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ ಸೇರಿಸಿ ಸಾಫ್ಟ್ ಆಗೋವರೆಗೂ ಬೇಯಿಸಿಕೊಳ್ಳಿ. ಆ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನ ಸೇರಿಸಿ. ಆನಂತರ ರುಬ್ಬಿಕೊಂಡಿರುವ ಪೇಸ್ಟ್ ಮತ್ತು ಹುಣಸೆ ರಸ ಸೇರಿಸಿ ಸುತ್ತಲೂ ಎಣ್ಣೆ ಬಿಡುವರೆಗೂ ಬೇಯಿಸಿ.

ಕೊನೆಗೆ ಒಂದು ಗ್ಲಾಸ್ ನೀರು ಸೇರಿಸಿ ಹೈ ಫ್ಲೇಮ್‌ನಲ್ಲಿ ಎರಡು ನಿಮಿಷ ಕುದಿಸಿದ್ರೆ ರುಚಿಯಾದ ಹುಳಿ ರಸಂ ಸವಿಯಲು ಸಿದ್ಧವಾಗುತ್ತದೆ.  ನಂತರ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೇರಿಸಬಹುದು. (ಬೇಕಿದ್ದರೆ  ಒಗ್ಗರಣೆಗೆ ಇಂಗು ಮತ್ತು ಸಿಹಿ ಇಷ್ಟಪಡೋರು ಒಂದು ತುಂಡು ಬೆಲ್ಲ ಸೇರಿಸಕೊಳ್ಳಬಹುದು)

click me!