ಮಲ್ಲೇಶ್ವರಂನಲ್ಲಿರುವ ಈಟ್ ರಾಜಾ ಎಂಬ ಜ್ಯೂಸ್ ಬಾರ್, ದೇಶದ ಮೊದಲ ಝೀರೋ ವೇಸ್ಟ್ ಜ್ಯೂಸಂಗಡಿ ಎಂಬ ಹೆಗ್ಗಳಿಕೆ ಪಡೆದಿದೆ. ಇದರ ನಾವೀನ್ಯತೆ ಎಲ್ಲರನ್ನೂ ಸೆಳೆಯುತ್ತಿದೆ.
'ಈಟ್ ರಾಜಾ' 2017 ರಿಂದ ಹಣ್ಣಿನ ಚಿಪ್ಪುಗಳಲ್ಲಿಯೇ ತಾಜಾವಾಗಿ ತಯಾರಿಸಿದ ಹಣ್ಣಿನ ರಸಗಳನ್ನು ನೀಡುತ್ತಾ, ಕುಡಿದವರ ಆರೋಗ್ಯಕ್ಕೂ, ಪರಿಸರದ ಆರೋಗ್ಯಕ್ಕೂ ಪೂರಕವಾಗಿದೆ.
ಇಲ್ಲಿ ಮಾವಿನ ಹಣ್ಣಿನ ಚಿಪ್ಪಿನೊಳಗೆ ಪ್ಯಾಶನ್ ಫ್ರೂಟ್ ಜ್ಯೂಸ್, ಪೇರಲೆ ಹಣ್ಣಿನ ಚಿಪ್ಪಿನೊಳಗೆ ಮಾವು, ಕರಬೂಜದೊಳಗೊಂದು ಜ್ಯೂಸ್, ಸೌತೆಕಾಯಿಯೊಳಗೆ ನಿಂಬೆಜ್ಯೂಸ್- ಹೀಗೆ ವಿಧ ವಿಧವಾದ ಜ್ಯೂಸ್‌ಗಳು ದೊರೆಯುತ್ತವೆ.
ಗಂಟೆಗೊಮ್ಮೆ ಮೆನು ಬದಲಾಗುವುದಾಗಿಯೂ ಬೋರ್ಡ್ ಹಾಕಿಕೊಳ್ಳಲಾಗಿದೆ. ಇಲ್ಲಿನ ಮತ್ತೊಂದು ಹೊಸ ವಿಶೇಷ ಎಂದರೆ, ಸೈಕಲ್ ಮಿಕ್ಸೀ.
ಇಲ್ಲಿ ಜ್ಯೂಸ್ ಬೇಕಾದವರು ಸ್ವತಃ ಸೈಕಲ್ ಹೊಡೆದು ಮಿಕ್ಸಿ ತಿರುಗುವಂತೆ ಮಾಡಿ ಜ್ಯೂಸ್ ತಯಾರಿಸಿಕೊಳ್ಳಬಹುದು. ಇದು ಸೈಕಲ್ ಹೊಡೆದವರಿಗೆ ವ್ಯಾಯಾಮವೂ ಆಯಿತು, ಪರಿಸರ ಸ್ನೇಹಿ ಜ್ಯೂಸ್ ಕೂಡಾ ಆಯಿತು.
ಇಲ್ಲಿ ಲೋಟ, ಟಿಶ್ಯೂ ಏನೂ ಬಳಸೋಲ್ಲ.. ಸಾಕಷ್ಟು ಹಣ್ಣುಗಳನ್ನು ಜ್ಯೂಸ್ ಲೋಟವಾಗಿ ಬಳಸಿದಾಗ ಹಾಗೆಯೇ ಸೇವಿಸಲಾಗುತ್ತದೆ. ನಂತರವೂ ಉಳಿದ ಸಿಪ್ಪೆಗಳನ್ನು ಹಸುಗಳಿಗೆ ಹಾಕಲಾಗುತ್ತದೆ.
ಆನಂದರಾಜ್ ಎಂಬವರು ಈ ಜ್ಯೂಸ್ ಬಾರ್ ನಡೆಸುತ್ತಿದ್ದು, ತ್ಯಾಜ್ಯ ನಿರ್ವಹಣೆ ಮತ್ತು ಇಂಧನ ಸಂರಕ್ಷಣೆಯ ಮೌಲ್ಯಗಳನ್ನು ಪ್ರಚಾರ ಮಾಡುತ್ತಿದ್ದಾರೆ.
ಜ್ಯೂಸ್ ಕುಡಿಯಿರಿ, ಹಣ್ಣು ತಿನ್ನಿರಿ ಎಂಬ ನೀತಿಯೊಂದಿಗೆ ಕೆಲಸ ಮಾಡುವ ಈ ಅಂಗಡಿಯು ಜನರಿಗೆ ಹೆಚ್ಚು ಆಕರ್ಷಕವಾಗಿದೆ. ಜೊತೆಗೆ, ಇಲ್ಲಿನ ವೈವಿಧ್ಯಮಯ ರೆಸಿಪಿಗಳು ಕೂಡಾ ಗಮನ ಸೆಳೆಯುತ್ತವೆ.
ಸಿಗರೇಟ್ ಜ್ಯೂಸ್ ಎಂಬ ವಿಶಿಷ್ಟ ಉಪಕ್ರಮವಿದ್ದು, ಒಬ್ಬ ವ್ಯಕ್ತಿಯು ಸಿಗರೇಟನ್ನು ಮುಂದೆ ಇಟ್ಟಿರುವ ತೊಟ್ಟಿಯಲ್ಲಿ ಎಸೆದರೆ ಅವರ ಆಯ್ಕೆಯ ಉಚಿತ ಜ್ಯೂಸ್ ಸಿಗುತ್ತದೆ.
ಇಲ್ಲಿ ಹಣ್ಣಿನ ಸಿಪ್ಪೆಯನ್ನು ಹಸುಗಳಿಗೆ ಹಾಕುವುದೇ ಅಲ್ಲದೆ, ಅವುಗಳ ತಿರುಳು ಬಳಸಿ ಒಣಗಿಸಿ, ನೈಸರ್ಗಿಕ ಸೋಪ್ ಮತ್ತು ಜಾಮ್ ತಯಾರಿಸಲಾಗುತ್ತದೆ.