ತಾನೇ ಹೊಲಿದ 20ಕೆಜಿ ತೂಕದ ಬಟ್ಟೆಯ ಜೊತೆ ಮೊದಲ ಬಾರಿಗೆ ಕ್ಯಾನೆಸ್ 2024 ನಲ್ಲಿ ಮಿಂಚಿದ ಭಾರತದ ನ್ಯಾನ್ಸಿ

First Published | May 19, 2024, 5:14 PM IST

ಯುಪಿಎಸ್‌ಸಿ ಬರೆಯಲು ಮನಸ್ಸು ಮಾಡಿ ಉತ್ತರ ಪ್ರದೇಶದ ಪುಟ್ಟ ಹಳ್ಳಿಯಿಂದ ಬಂದು ಕೋವಿಡ್‌ ಬಳಿಕ ಆರ್ಥಿಕವಾಗಿ ಸಂಕಷ್ಟ ಎದುರಾದಾಗ ವಿಡಿಯೋ ಕಂಟೆಂಟ್‌ ಮಾಡಿ ಟ್ರೋಲ್‌ ಗೆ ಒಳಗಾಗಿ ಸಂಕಟ ಅನುಭವಿಸಿ ಇಂದು ಭಾರತೀಯ ಫ್ಯಾಶನ್ ಪ್ರಭಾವಿಯಾಗಿ ಬೆಳೆದಿರುವ ನ್ಯಾನ್ಸಿ ತ್ಯಾಗಿ  ತಾನೇ ಹೊಲಿದ ಬಟ್ಟೆಯಿಂದ ಕ್ಯಾನೆಸ್ 2024ರಲ್ಲಿ ಹೆಜ್ಜೆ ಹಾಕಿ ಇಡೀ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಭಾರತೀಯ ಫ್ಯಾಶನ್ ಪ್ರಭಾವಿ ನ್ಯಾನ್ಸಿ ತ್ಯಾಗಿ ಅವರು ಕ್ಯಾನೆಸ್ 2024 ರ 77 ನೇ ಚಲನಚಿತ್ರೋತ್ಸವದಲ್ಲಿ  ತಾನೇ ವಿನ್ಯಾಸಗೊಳಿಸಿ ಹೊಲಿದ ಗುಲಾಬಿ ಬಣ್ಣದ ಗೌನ್‌ ಮೂಲಕ ಪದಾರ್ಪಣೆ ಮಾಡಿದ್ದಾರೆ. ಗುಲಾಬಿ ಬಣ್ಣದ ರಫಲ್ಡ್ ಗೌನ್ 20 ಕೆಜಿ ತೂಕವಿದ್ದು,  1000 ಮೀಟರ್ ಫ್ಯಾಬ್ರಿಕ್‌ನಿಂದ ಮಾಡಲ್ಪಟ್ಟಿದೆ. ಮಾತ್ರವಲ್ಲ ನ್ಯಾನ್ಸಿ ತ್ಯಾಗಿಯ ರೆಡ್ ಕಾರ್ಪೆಟ್ ಡ್ರೆಸ್ ಅನ್ನು ತಯಾರಿಸಲು ಒಂದು ತಿಂಗಳು ತೆಗೆದುಕೊಂಡಿದ್ದಾರೆ.

ನ್ಯಾನ್ಸಿ ತನ್ನ ಫೋಟೋಗಳನ್ನು ಪೋಸ್ಟ್ ಮಾಡಿದಾಗಿನಿಂದ ಎಲ್ಲಾ ಕಡೆಯಿಂದ ಪ್ರಶಂಸೆಗಳು ಬರುತ್ತಿದೆ. ರೆಡ್ ಕಾರ್ಪೆಟ್ ಮೇಲೆ ನ್ಯಾನ್ಸಿ ಕಾಣಿಸಿಕೊಂಡಿರುವ ಬ್ರೂಟ್ ಇಂಡಿಯಾದ ವೀಡಿಯೊ 24 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ 24 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಮಾತ್ರವಲ್ಲ ನಟಿ ಸೋನಮ್ ಕಪೂರ್ ಮತ್ತು ಉರ್ಫಿ ಸೇರಿ ಹಲವಾರು ಸೆಲೆಬ್ರಿಟಿಗಳು  ನ್ಯಾನ್ಸಿ ವಿಡಿಯೋವನ್ನು  ಹಂಚಿಕೊಂಡಿದೆ.

Tap to resize

ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಬರನ್ವಾ ಹಳ್ಳಿಯಿಂದ ಫ್ರಾನ್ಸ್ ನಲ್ಲಿ ನಡೆಯುತ್ತಿರುವ   ಕ್ಯಾನೆಸ್ ವರೆಗಿನ ನ್ಯಾನ್ಸಿಯ ಪ್ರಯಾಣವು ಸುಲಭವಾಗಿರಲಿಲ್ಲ.  ಈಕೆಯ ಜೀವನದ ಕಠಿಣ ಪರಿಶ್ರಮದ ಕಥೆ ಇತರರಿಗೆ ಸ್ಫೂರ್ಥಿಯಾಗಿದೆ.  COVID-19 ಸಾಂಕ್ರಾಮಿಕ ರೋಗ ಬರುವುದಕ್ಕೂ ಮುನ್ನ UPSC ಪರೀಕ್ಷೆಗೆ ತಯಾರಾಗಲು ತನ್ನ ಹಳ್ಳಿಯಿಂದ ದೆಹಲಿಗೆ ಶಿಫ್ಟ್ ಆದಳು. ಆಕೆಯ ತಾಯಿ ದೆಹಲಿಯ ಕಾರ್ಖಾನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ  ಹೊರಗೆ ಹೋಗುವುದು  ಇಷ್ಟವಿಲ್ಲದ ಕಾರಣ ಆಕೆಯ ತಂದೆ  ಆರ್ಥಿಕವಾಗಿ ಬೆಂಬಲ ನೀಡಲಿಲ್ಲ. ಆದರೆ ಆಕೆಯ ತಾಯಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನ್ಯಾನ್ಸಿಯನ್ನು ದೆಹಲಿಗೆ ಕರೆತಂದರು. 

ಆಕೆಯ ತಾಯಿ ಕಾರ್ಖಾನೆ ಕೆಲಸಕ್ಕೆ ಸೇರಿ ಸಹಾಯ ಮಾಡಿದರು ಎಂದು ನ್ಯಾನ್ಸಿ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ. ಲಾಕ್‌ಡೌನ್ ಆರ್ಥಿಕ ಸಂಪನ್ಮೂಲಗಳ ಮೇಲೆ ಅಪಾರ ಒತ್ತಡವನ್ನು ಉಂಟುಮಾಡಿತು, ನ್ಯಾನ್ಸಿಯ ಭವಿಷ್ಯದ ಮೇಲೆ  ಚಿಂತೆ ಆರಂಭವಾಯ್ತು. ನ್ಯಾನ್ಸಿಯ ಮೊದಲ ಗುರಿ ತನ್ನ ತಾಯಿಗೆ ಉತ್ತಮ ಜೀವನವನ್ನು ಒದಗಿಸುವುದಾಗಿತ್ತು. ತನಗಾಗಿ ಜೀವವನ್ನೇ ಮುಡಿಪಿಟ್ಟ  ತಾಯಿಯು ಅಂತಹ ಕಠಿಣ ಜೀವನವನ್ನು ಮುಂದುವರಿಸುವುದು ಬೇಡವೆಂದು ನಿರ್ಧರಿಸಿ ಕಂಟೆಂಟ್ ಕ್ರೀಯೇಷನ್‌ಗೆ  ಮುಂದಾದಳು. ತನ್ನ ಬಳಿ ಇರುವ ಹಣದಿಂದ ಕ್ಯಾಮೆರಾ, ಲೈಟ್‌  ಮತ್ತು ಫೋನ್ ಖರೀದಿಸಿದಳು. 

ನ್ಯಾನ್ಸಿ  ತಾನು ಹೊಲಿದ ಬಟ್ಟೆಯನ್ನು ಧರಿಸಿ ಸಹೋದರನಿಂದ  1.5 ವರ್ಷಗಳ ಕಾಲ   ವೀಡಿಯೊಗಳನ್ನು ಚಿತ್ರೀಕರಿಸಿ ಪೋಸ್ಟ್ ಮಾಡಲು ಪ್ರಾರಂಭಿಸಿದಳು ಆದರೆ ಆಗ ವೀಡಿಯೊಗಳು ವೀಕ್ಷಣೆ ಪಡೆಯಲಿಲ್ಲ. ಬದಲಾಗಿ ಟ್ರೋಲ್‌ ಆಗಲು ಪ್ರಾರಂಭವಾಯ್ತು. ಅತ್ತ ಯುಪಿಎಸ್‌ಸಿ ಕೂಡ ಮಾಡಲಾಗಲಿಲ್ಲ. ಇತ್ತ ವಿಡಿಯೋ ಕೂಡ ಕ್ಲಿಕ್‌ ಆಗಲಿಲ್ಲ.  ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಯಾಗಿತ್ತು. ತನ್ನ ವೀಡಿಯೊಗಳು ಯಾಗ ಫೇಮಸ್‌ ಆಗುತ್ತಿದೆ ಎಂದು ಗೊತ್ತಾಯ್ತೋ ನ್ಯಾನ್ಸಿ "ಔಟ್‌ಫಿಟ್ಸ್ ಫ್ರಮ್ ಸ್ಕ್ರ್ಯಾಚ್" ಎಂಬ 100 ದಿನಗಳ ಸರಣಿಯನ್ನು ಪ್ರಾರಂಭಿಸಿದರು.

ಈ ಸರಣಿಯು ಒಂದು ಮಹತ್ವದ ತಿರುವು ನೀಡಿತು, ಏಕೆಂದರೆ ಆಕೆಯ ವೀಡಿಯೊಗಳು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಲಾರಂಭಿಸಿದವು ಮತ್ತು ನೆಟಿಜನ್‌ಗಳು ಆಕೆಯ ಪ್ರತಿಭೆಯನ್ನು ಗುರುತಿಸಲು ಪ್ರಾರಂಭಿಸಿದರು. ನ್ಯಾನ್ಸಿಯ ವೀಡಿಯೊಗಳು  ಹೊಲಿಗೆ ಯಂತ್ರ,  ತನ್ನ ಕೈಯಿಂದ ಮಾಡಿದ ಉಡುಪುಗಳನ್ನು ಹೊಲಿಯುವ ಮತ್ತು ಮಾಡೆಲಿಂಗ್ ಮಾಡುವ ಪ್ರಕ್ರಿಯೆಯನ್ನು ಪ್ರದರ್ಶಿಸಿದರು. ಇದಾದ ಬಳಿಕ ಅವರು ಅನೇಕ ಪ್ರಸಿದ್ಧ ವ್ಯಕ್ತಿಗಳ ಮತ್ತು ವಿನ್ಯಾಸಕರ ನೋಟವನ್ನು ಮರುಸೃಷ್ಟಿ ಮಾಡಿದರು, ಇದು ಎಲ್ಲೆಡೆ  ಪ್ರಶಂಸೆಗೆ ಕಾರಣವಾಯ್ತು. ರಾಷ್ಟ್ರೀಯ  ಕ್ರಿಯೇಟರ್‌ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ.  

ನ್ಯಾನ್ಸಿ ಕೇನ್ಸ್ 2024 ನಲ್ಲಿರುವ ತನ್ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ,  77 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಚೊಚ್ಚಲ ಬಾರಿಗೆ ಹೆಜ್ಜೆ ಹಾಕುವುದು ನಂಬಲಾಗುತ್ತಿಲ್ಲ. 30 ದಿನಗಳು, 1000 ಮೀಟರ್ ಬಟ್ಟೆ ಮತ್ತು 20 ಕೆಜಿಗಿಂತ ಹೆಚ್ಚು ತೂಕವಿರುವ ಈ ಗುಲಾಬಿ ಗೌನ್ ಮನಸ್ಸಿಂದ ರಚಿಸಿದೆ . ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಸಂತೋಷ ಮತ್ತು ಕೃತಜ್ಞಳಾಗಿದ್ದೇನೆ. ಇದು ನನಸಾಗುವ ಕನಸು, ಮತ್ತು ನಿಮ್ಮ ಬೆಂಬಲವು ನನಗೆ ಸ್ಫೂರ್ತಿ ನೀಡಿದಂತೆ ನನ್ನ ಸೃಷ್ಟಿ ನಿಮ್ಮನ್ನು ಬೆರಗುಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮನದ ಅಂತರಾಳದಿಂದ ಧನ್ಯವಾದಗಳು ಎಂದು ಸಂತಸ ಹಂಚಿಕೊಂಡಿದ್ದಾರೆ

Latest Videos

click me!