ಕೇರಳದಲ್ಲಿ ಕಾಲ್ತುಳಿತಕ್ಕೆ ಕಾರಣವಾದ ಗಾಯಕಿ ನಿಕಿತಾ ಗಾಂಧಿ ಯಾರು ?

First Published | Nov 26, 2023, 1:11 PM IST

ನಿನ್ನೆ ಕೇರಳದಲ್ಲಿ ಕಾಲೇಜೊಂದರ ಟೆಕ್‌ ಫೆಸ್ಟ್ ವೇಳೆ ಆಯೋಜಿಸಿದ ಗಾಯಕಿ ನಿಖಿತಾ ಗಾಂಧಿ ಸಂಗೀತಾ ರಸಮಂಜರಿ ವೇಳೆ ಕಾಲ್ತುಳಿತ ಉಂಟಾಗಿ 4 ಜನ ಮೃತಪಟ್ಟಿದ್ದು 40 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ನಿಖಿತಾ ಗಾಂಧಿ ಸಂಗೀತಾ ರಸಮಂಜರಿ ವೇಳೆ ಈ ಅವಾಂತರ ನಡೆದಿದ್ದು, ಯುವ ಸಮೂಹವನ್ನು ತಮ್ಮ ಸಂಗೀತಾದ ಮೂಲಕ ಹುಚ್ಚೆಬ್ಬಿಸುವ ಈ ನಿಖಿತಾ ಗಾಂಧಿ ಬಗ್ಗೆ ಇಲ್ಲಿದೆ ಡಿಟೇಲ್...

ನಿಖಿತಾ ಗಾಂಧಿ ಅರ್ಧ ಪಂಜಾಬಿ ಅರ್ಧ ಬೆಂಗಾಲಿ  ಪರಂಪರೆಯನ್ನು ಹೊಂದಿರುವ ಭಾರತೀಯ ಹಿನ್ನೆಲೆ ಗಾಯಕಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. 

1991ರ ಅಕ್ಟೋಬರ್ ಒಂದರಂದು ಜನಿಸಿದ ನಿಖಿತಾ, ಕೋಲ್ಕತ್ತಾದ ಲಾ ಮಾರ್ಟಿನಿಯರ್ ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. 

Latest Videos


ನಂತರ ದಂತ ವೈದ್ಯಕೀಯದಲ್ಲಿ ಉನ್ನತ ಶಿಕ್ಷಣ ಪಡೆಯಲು 2010ರಲ್ಲಿ ಚೆನ್ನೈಗೆ ತೆರಳಿದ ನಿಖಿತಾ ನಂತರ ಬಂದಿದ್ದು ಸಂಗೀತಾ ಲೋಕಕ್ಕೆ.

ಆರ್ಕೆಸ್ಟ್ರಾವೊಂದರಲ್ಲಿ ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್ ಅವರನ್ನು ಭೇಟಿಯಾದ ನಂತರ ನಿಖಿತಾ ಗಾಂಧಿ ಜೀವನ ಊಹಿಸದ ತಿರುವು ಪಡೆದುಕೊಂಡಿತು. 

ವೃತ್ತಿಪರ ತರಬೇತಿ ನೀಡಿದರೆ  ಒಂದು ಹಾಡನ್ನು ಹಾಡುವ ಅವಕಾಶ ನೀಡುವುದಾಗಿ ಸ್ವತಃ ಎ ಆರ್ ರೆಹಮಾನ್ ಆಕೆಗೆ ಭರವಸೆ ನೀಡಿದರು. ಅದರಂತೆ ದಂತ ವೈದ್ಯಕೀಯ ಶಿಕ್ಷಣದ ಜೊತೆ ಜೊತೆಗೆ ಆಕೆ ಸಂಗೀತವನ್ನು ಅಭ್ಯಾಸ ಮಾಡಿದರು. 

ಇದಕ್ಕಾಗಿ ಚೆನ್ನೈನ  K.M ಕಾಲೇಜ್ ಆಫ್ ಮ್ಯೂಸಿಕ್ ಅಂಡ್ ಟೆಕ್ನಾಲಜಿ ಕಾಲೇಜಿಗೂ ಸೇರಿಕೊಂಡರು. ನಂತರ ನಡೆದಿದ್ದು ಈಗ ಇತಿಹಾಸ, ರೆಹಮಾನ್ ತಾವು ನೀಡಿದ ಮಾತಿನಂತೆ ಆಕೆಗೆ ಅವಕಾಶ ನೀಡಿದರು. 


ಅದರಂತೆ 2014ರಲ್ಲಿ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಐ ಸಿನಿಮಾದ ಹಾಡುಗಳನ್ನು ಹಾಡಲು ನಿಖಿತಾಗೆ ಅವಕಾಶ ನೀಡಿದರು ರೆಹಮಾನ್‌. ಹೀಗಾಗಿ ಮೂರು ಭಾಷೆಗಳಲ್ಲೂ ಐ ಸಿನಿಮಾದ ಹಾಡುಗಳನ್ನು ನಿಖಿತಾ ಹಾಡಿದ್ದಾರೆ.

ಹೀಗೆ ರೆಹಮಾನ್ ಕೃಪಾ ಕಟಾಕ್ಷದಿಂದ ಐ ಸಿನಿಮಾದ ಮೂಲಕ ಪ್ರಖ್ಯಾತಿಗೆ ಬಂದ ನಿಖಿತಾ ಇಂದು ಭಾರತೀಯ ಸಂಗೀತಾ ಲೋಕದ ಜನಮೆಚ್ಚುವ ತಾರೆಯಾಗಿದ್ದಾರೆ.

ಇದರ ಜೊತೆಗೆ ನಿಖಿತಾ ಇರಾನ್ ಮೂಲದ ಮಹಮ್ಮದ್ 'ದ ಮೆಸೇಂಜರ್ ಆಫ್ ಗಾಡ್‌'  ಸಿನಿಮಾದಲ್ಲೂ ಮೂರು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೇ  2016 ರಲ್ಲಿ ತೆರೆ ಕಂಡ ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ಪೀಲೆಯ ಕಥೆಯನ್ನು ಹೇಳುವ ಹಾಲಿವುಡ್ ಚಲನಚಿತ್ರ 'ಪೀಲೆ: ಬರ್ತ್ ಆಫ್ ಎ ಲೆಜೆಂಡ್‌' ಸಿನಿಮಾದ ಮೂರು ಹಾಡಿಗೂ ದನಿ ನೀಡಿದ್ದಾರೆ ನಿಖಿತಾ. 

ಸಿನಿಮಾ ಸಂಗೀತಾದ ಆಚೆಗೆ ನಿಖಿತಾ ಗಾಂಧಿ ನೂರ್ ಎಂಬ ಮ್ಯೂಸಿಕ್ ಬ್ಯಾಂಡ್‌ನ್ನು ಕೂಡ ಸ್ಥಾಪಿಸಿದ್ದು, ಇದರಲ್ಲಿ ಅವರೊಂದಿಗೆ ಸಹ ಗಾಯಕರಾಗಿ  ಸಜಿತ್ ಸತ್ಯ, ಜೆರಾರ್ಡ್ ಫೆಲಿಕ್ಸ್, ಗಾಡ್ಫ್ರೇ ಇಮ್ಯಾನುಯೆಲ್ ಮತ್ತು ಜೋಶುವಾ ಗೋಪಾಲ್ ಇದ್ದಾರೆ.

ಇದರ ಜೊತೆಗೆ  ರಾಬ್ತಾ ಶೀರ್ಷಿಕೆ ಗೀತೆಗಾಗಿ 2018ರಲ್ಲಿ ಜೀ ಸಿನಿ ಅವಾರ್ಡ್ಸ್‌ನ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ಈ ಗಾಯಕಿ

ಇದಲ್ಲದೇ 'ಜಬ್ ಹ್ಯಾರಿ ಮೆಟ್ ಸೇಜಲ್‌ನ, 'ಘರ್' ಹಾಡಿಗೆ 63ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಯಾಗಿ ನಾಮನಿರ್ದೇಶನಗೊಂಡಿದ್ದರು

click me!