
ಶ್ರೀಮಸ್ತು ಶುಭಮಸ್ತು ಸೀರಿಯಲ್ (shrirasthu Shubhamasthu Serial) ಮೂಲಕ ತುಳಸಿ ಅಮ್ಮನಾಗಿ ಕಾಣಿಸಿಕೊಂಡು ದಿನನಿತ್ಯವೂ ನಿಮ್ಮ ಮನೆ ಬಾಗಿಲಿಗೆ ಬರ್ತಿರೋ ಎವರ್ಗ್ರೀನ್ ತಾರೆ ಸುಧಾರಾಣಿಯವರ ಈ ಸೀರಿಯಲ್ ಮುಗಿದಿದೆ. 1973ರಲ್ಲಿ ಹುಟ್ಟಿರೋ ಸುಧಾರಾಣಿಯವರಿಗೆ ಇದೀಗ 52ರ ಹರೆಯ. 2 ವರ್ಷದ ಪುಟಾಣಿಯಾಗಿ ಬಿಸ್ಕೆಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿಯವರು, ಬಣ್ಣದ ಲೋಕಕ್ಕೆ ಕಾಲಿಟ್ಟು 50 ವರ್ಷಗಳೇ ಸಂದಿವೆ. ಇದೀಗ ಕಿರುತೆರೆಯಲ್ಲಿ ತುಳಸಿ ಆಗುವ ಮೂಲಕ ಮೂರು ವರ್ಷ ಪ್ರೇಕ್ಷಕರನ್ನು ರಂಜಿಸಿದರು.
ಸುಧಾರಾಣಿ ಅವರು ಮುಂದೇನು ಮಾಡಲಿದ್ದಾರೆ, ಅವರ ಮುಂದಿನ ಗುರಿಯೇನು ಎನ್ನುವ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಆ ಬಗ್ಗೆ ನ್ಯೂಸೋ ನ್ಯೂಸ್ ಯುಟ್ಯೂಬ್ ಚಾನೆಲ್ನಲ್ಲಿ ನಟಿ ಮಾತನಾಡಿದ್ದಾರೆ. ಈ ವರ್ಷ ನನಗೆ ಗುರಿಯ ಪೈಕಿ ಎರಡು ಗುರಿ ಈಡೇರಿದೆ. ಒಂದು ಷಾರ್ಟ್ ಫಿಲಮ್ ಪ್ರೊಡ್ಯೂಸ್ ಮಾಡಿದ್ದೇನೆ, ಇನ್ನೊಂದು ಯುಟ್ಯೂಬ್ ಚಾನೆಲ್ ಶುರು ಮಾಡಿದ್ದು ಎಂದಿದ್ದಾರೆ.
ಮುಂದಿನ ಪ್ಲ್ಯಾನ್ ಬಗ್ಗೆ ಸುಧಾರಾಣಿ ಇದೀಗ ಮಾತನಾಡಿದ್ದಾರೆ. ಇದುವರೆಗೆ ನನ್ನ ಈ ಬಯಕೆ ಈಡೇರಿಲ್ಲ ಎಂದಿದ್ದಾರೆ. ಅದು ಭರತನಾಟ್ಯ ಮುಂದುವರೆಸಬೇಕು ಎನ್ನುವುದು ನನ್ನ ದೊಡ್ಡ ಗುರಿ. ನನ್ನ ಮಗಳು ನಿಧಿ ಹೇಳಿಕೊಡ್ತೇನೆ ಎಂದಾಗಲೆಲ್ಲಾ ಏನೋ ಆಗುತ್ತೆ. ಟೈಮೇ ಸಾಕಾಗ್ತಿಲ್ಲ ಎಂದಿದ್ದಾರೆ ಸುಧಾರಾಣಿ. ಎರಡು ದಿನ ಫುಲ್ ಜೋಶ್ನಲ್ಲಿ ಶುರುಮಾಡಿದೆ. ಮೂರನೆಯ ದಿನ ಬಿದ್ದು ಕಾಲಿಗೆ ಏಟು ಮಾಡಿಕೊಂಡೆ ಎಂದಿದ್ದಾರೆ. ಆದರೂ ಅದನ್ನು ಮುಂದುವರಿಸುವ ಗುರಿ ಇದೆ ಎಂದಿದ್ದಾರೆ.
ಇನ್ನು ಸುಧಾರಾಣಿ ಕುರಿತು ಹೇಳುವುವದಾದರೆ, ಇನ್ನೂ 3 ವರ್ಷ ಆಗುವ ಮುಂಚೆಯೇ, ಬಾರಿಗೆ ಕ್ಯಾಮೆರಾ ಎದುರಿಸಿದ್ದು ಕ್ವಾಲಿಟಿ ಬಿಸ್ಕೆಟ್ ಜಾಹೀರಾತಿಗೆ! ಮುಂದೆ ಸೋಪ್, ಬ್ರೆಡ್, ಕುಕ್ಕಿಂಗ್ ಆಯಿಲ್ ಸೇರಿದಂತೆ ಏಳೆಂಟು ಜಾಹೀರಾತುಗಳಿಗೆ ಮಾಡೆಲ್ ಆಗಿದ್ದರು ಸುಧಾರಾಣಿ. ಸುಮಾರು ಹತ್ತು ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. 'ಕಿಲಾಡಿ ಕಿಟ್ಟು' (1978), 'ಕುಳ್ಳ ಕುಳ್ಳಿ', 'ರಂಗನಾಯಕಿ', 'ಅನುಪಮ', 'ಭಾಗ್ಯವಂತ', 'ಬಾಡದ ಹೂ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.
ಕೊನೆಗೆ ಪಾರ್ವತಮ್ಮ ಅವರ ಕಣ್ಣಿಗೆ ಬಿದ್ದು, ಶಿವರಾಜ್‌ಕುಮಾರ್ ಜೊತೆ ಆನಂದ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಆಗ ಕುತೂಹಲ ಎಂದರೆ ಸುಧಾರಾಣಿಗೆ ಇನ್ನೂ 13 ವರ್ಷ ವಯಸ್ಸು. 52ನೇ ವಯಸ್ಸಿನಲ್ಲಿಯೂ ನಟಿ ಸಿನಿಮಾಗಳು ಮತ್ತು ಕಿರುತೆರೆ ಧಾರಾವಾಹಿಗಳ ಮೂಲಕ ಜನರಿಗೆ ಮನೋರಂಜನೆ ನೀಡುತ್ತಿದ್ದಾರೆ.
ಈ ಹಿಂದೆ ಸುಧಾರಾಣಿ ಅವರು ತಮ್ಮ ಕ್ಯಾಮೆರಾ ಅನುಭವವನ್ನು ತೆರೆದಿಟ್ಟಿದ್ದರು. 'ಕ್ಯಾಮೆರಾಗಳು ಸುತ್ತ ಬೆಳೆದ ಕಾರಣ ಅದನ್ನು ಎದುರಿಸಲು ನನಗೆ ಏನೋ ಹೊಸತು ಅನಿಸಲಿಲ್ಲ. ನನ್ನ ಪಕ್ಕ ಕಲ್ಲಿನಂತೆ ನಿಂತಿದು ಧೈರ್ಯ ಕೊಟ್ಟಿದ್ದು ನನ್ನ ತಾಯಿ. ಇಂದು ನಾನು ಏನೇ ಆಗಿದ್ದರು ಅದು ನನ್ನ ತಾಯಿಗೆ ಸೇರಬೇಕಿರುವ ಕ್ರೆಡಿಟ್. ಪುಟ್ಟ ಮಗುವಾಗಿದ್ದಾಗ ಕ್ಯಾಮೆರಾ ಎದುರಿಸಲು ಶುರು ಮಾಡಿದೆ ಅಲ್ಲಿಂದ ಅವಕಾಶಗಳು ಹುಡುಕಿ ಬಂದಿತ್ತು. ಅಲ್ಲಿಂದ ತಾಯಿ ಏನೇ ಹೇಳಿದ್ದರೂ ಕೇಳಬೇಕು ಅನ್ನೋ ಆಲೋಚನೆ ಶುರುವಾಗಿತ್ತು, ಇದು ಭಯದಿಂದ ಅಲ್ಲ ನಂಬಿಕೆಯಿಂದ ಎಂದಿದ್ದರು.
ಇನ್ನು ನಟಿ ಜೀವನದಲ್ಲಿ ಸಾಕಷ್ಟು ನೋವನ್ನುಂಡವರು. 1999ರಲ್ಲಿ ಮದುವೆಯಾಗುವ ಮೂಲಕ ಬಣ್ಣದ ಬದುಕಿನಿಂದ ಸುಧಾರಾಣಿಯವರು ಮೊದಲ ಬಾರಿಗೆ ದೂರವಾದರು. ಆದರೆ, ಮದುವೆ ಅವರ ಪಾಲಿಗೆ ವರವಾಗುವ ಬದಲು ಶಾಫವಾಯಿತು. ಅಮೆರಿಕಾದಲ್ಲಿ ಅನಸ್ತೇಷಿಯಾ ಸ್ಪೆಷಲಿಸ್ಟ್ ಆಗಿದ್ದ ಗಂಡ ಡಾ ಸಂಜಯ್, ಯಾವುದೋ ರಹಸ್ಯ ಕೆಮಿಕಲ್ಸ್ ನೀಡಿ ಸುಧಾರಾಣಿಯವರನ್ನು ಮುಗಿಸಲು ಕೂಡ ಪ್ಲಾನ್ ಮಾಡಿದ್ದರಂತೆ. ಜತೆಗೆ, ಮದುವೆಯಾದ ಸ್ವಲ್ಪ ದಿನಗಳ ಬಳಿಕ ಸುಧಾರಾಣಿಯವರಿಗೆ ಇನ್ನಿಲ್ಲದ ಟಾರ್ಚರ್ ಕೊಡಲು ಶುರು ಮಾಡಿದ್ದರಂತೆ.
ಒಟ್ಟಿನಲ್ಲಿ, ಡಾ ಸಂಜಯ್ ಮೂಲಕ ಅಮೇರಿಕಾದಲ್ಲಿ ಸುಧಾರಾಣಿ ವೈವಾಹಿಕ ಬದುಕು ನರಕವಾಯಿತು. ಗಂಡನಿಂದ ತಪ್ಪಿಸಿಕೊಂಡು ಬಂದು ಗೆಳತಿ ಮನೆಯಲ್ಲಿ ರಹಸ್ಯವಾಗಿ ಆಶ್ರಯ ಪಡೆದು, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಂಬರೀಷ್ ಸಹಾಯದಿಂದ ಅಮೆರಿಕಾದಿಂದ ತಪ್ಪಿಸಿಕೊಂಡು ಬಂದು ಸುಧಾರಾಣಿಯವರು ಬೆಂಗಳೂರಿನ ತವರುಮನೆ ಸೇರಿಕೊಂಡರು ಎನ್ನಲಾಗಿದೆ. ಅಂದು ಸುಧಾರಾಣಿಯವರು ಖಿನ್ನತೆಗೆ ಕೂಡ ಜಾರಿದ್ದರಂತೆ.