ಆಫ್ಘಾನ್ ಎದುರು ದೊಡ್ಡ ಶತಕ ಸಿಡಿಸಿ ಶಿಖರ್ ಧವನ್, ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್..!

Published : Jun 17, 2026, 05:41 PM IST

ಲಖನೌ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ದೊಡ್ಡ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದರ ಜತೆಗೆ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ. 

PREV
16
ಸ್ಪೋಟಕ ಶತಕ ಸಿಡಿಸಿದ ಶುಭ್‌ಮನ್ ಗಿಲ್

ಇಲ್ಲಿನ ಏಕಾನ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಗಿಲ್ ಕೇವಲ 110 ಎಸೆತಗಳನ್ನು ಎದುರಿಸಿ 22 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 154 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

26
ಗಿಲ್-ಕಿಶನ್ ಜುಗಲ್ಬಂದಿ

ಭಾರತ ಪರ ಮೂರನೇ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ಇಶಾನ್ ಕಿಶನ್‌ ಜೋಡಿ ಬರೋಬ್ಬರಿ 224 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಅನಾಯಾಸವಾಗಿ 350ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಇದೇ ವೇಳೆ ಶುಭ್‌ಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

36
ಅತಿ ಕಡಿಮೆ ಇನ್ನಿಂಗ್ಸ್‌ಗಳನ್ನಾಡಿ 3000 ರನ್ ಬಾರಿಸಿದ ಭಾರತೀಯ ಬ್ಯಾಟರ್ ಗಿಲ್:

ಶುಭ್‌ಮನ್ ಗಿಲ್ ಇದೀಗ ಕೇವಲ 62 ಏಕದಿನ ಇನ್ನಿಂಗ್ಸ್‌ಗಳನ್ನಾಡಿ 3000 ರನ್ ಪೂರೈಸುವ ಮೂಲಕ ಅತಿವೇಗವಾಗಿ ಏಕದಿನ ಕ್ರಿಕೆಟ್‌ನಲ್ಲಿ 3000 ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ. ಈ ಮೊದಲು ಶಿಖರ್ ಧವನ್ ಹಾಗೂ ಶ್ರೇಯಸ್ 72 ಇನ್ನಿಂಗ್ಸ್‌ಗಳನ್ನಾಡಿ 3 ಸಾವಿರ ರನ್ ಪೂರೈಸುವ ಮೂಲಕ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿ 75 ಏಕದಿನ ಇನ್ನಿಂಗ್ಸ್‌ಗಳನ್ನಾಡಿ 3000 ರನ್ ಪೂರೈಸಿದ್ದರು.

46
ಎರಡನೇ ಅತಿಕಡಿಮೆ ಎಸೆತಗಳನ್ನು ಎದುರಿಸಿ 3000 ರನ್

ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 3000 ರನ್ ಬಾರಿಸಲು 3016 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ಎರಡನೇ ಸ್ಥಾನಕ್ಖೇರಿದ್ದಾರೆ. ಇನ್ನು 2995 ಎಸೆತಗಳಲ್ಲಿ 3000 ರನ್ ಬಾರಿಸಿರುವ ಕಪಿಲ್ ದೇವ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಶ್ರೇಯಸ್ ಅಯ್ಯರ್(3049) ಹಾಗೂ ವಿರೇಂದ್ರ ಸೆಹ್ವಾಗ್(3164) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

56
ಅತಿಕಡಿಮೆ ಎಸೆತಗಳಲ್ಲಿ 150+ ರನ್ ಬಾರಿಸಿದ ಮೂರನೇ ಬ್ಯಾಟರ್ ಗಿಲ್

ಶುಭ್‌ಮನ್ ಗಿಲ್ 108 ಎಸೆತಗಳನ್ನು ಎದುರಿಸಿ 150 ರನ್ ಬಾರಿಸುವ ಮೂಲಕ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 150+ ರನ್ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನುಳಿದಂತೆ ಇಶಾನ್ ಕಿಶನ್(103 ಎಸೆತ) ಹಾಗೂ ವಿರಾಟ್ ಕೊಹ್ಲಿ 106 ಎಸೆತಗಳಲ್ಲಿ 150 ರನ್ ಬಾರಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ.

66
ಬೃಹತ್ ಮೊತ್ತ ಕಲೆಹಾಕಿದ ಭಾರತ

ಇನ್ನು ಭಾರತ-ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಮ್ಯಾಚ್ ವಿಚಾರಕ್ಕೆ ಬರುವುದಾದರೇ, ಶುಭ್‌ಮನ್ ಗಿಲ್(154) ಹಾಗೂ ಇಶಾನ್ ಕಿಶನ್(125) ಸ್ಪೋಟಕ ಶತಕಗಳ ನೆರವಿನಿಂದ 49.5 ಓವರ್‌ಗಳಲ್ಲಿ 402 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು ಆಫ್ಘಾನಿಸ್ತಾನಕ್ಕೆ ಕಠಿಣ ಗುರಿ ನೀಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories