ಕಳೆದ ಕೆಲವು ದಿನಗಳ ಹಿಂದೆ ನಟಿ ಇಶಾ ಕೊಪ್ಪಿಕರ್ ಮತ್ತು ಆಕೆಯ ಪತಿ ಟಿಮ್ಮಿ ನಾರಂಗ್ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಈಗ, ಕಳೆದ ವರ್ಷ ನವೆಂಬರ್‌ನಲ್ಲಿ ವಿಚ್ಛೇದನ ಪಡೆದಿದ್ದೇವೆ ಎಂದು ಸ್ವತಃ ಟಿಮ್ಮಿ ಖಚಿತಪಡಿಸಿದ್ದಾರೆ. ಇವರಿಬ್ಬರೂ 2009 ರಲ್ಲಿ ಮದುವೆಯಾಗಿದ್ದು, ಒಂಬತ್ತು ವರ್ಷದ ಮಗಳು ರಿಯಾನ್ನಾಗೆ ಪೋಷಕರಾಗಿದ್ದಾರೆ. ಇಶಾ ತಮ್ಮ ಮಗಳೊಂದಿಗೆ ತನ್ನ ಮನೆಯಿಂದ ಹೊರನಡೆದಿದ್ದಾಳೆ ಎಂದು ಟಿಮ್ಮಿ ಖಚಿತಪಡಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಇಶಾ ಅವರ ಮಾಜಿ ಪತಿ ಟಿಮ್ಮಿ ನಾರಂಗ್ "ಸುಮಾರು ಒಂದೂವರೆ ವರ್ಷಗಳ ನಂತರ ನಾವು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲು ಮುಂದಾದೆವು. ಕಳೆದ ವರ್ಷ ನವೆಂಬರ್‌ನಲ್ಲಿ ವಿಚ್ಛೇದನ ಪಡೆದಿದ್ದೇವೆ. ಮತ್ತು ಇದು ಸೌಹಾರ್ದಯುತ ಷರತ್ತುಗಳ ಮೇಲೆ ನಡೆದಿದೆ. ಪರಸ್ಪರ ಒಪ್ಪಿಕೊಂಡು ಈ ಹೆಜ್ಜೆ ಇಟ್ಟಿದ್ದೇವೆ. ನಾವು ಈಗ ನಮ್ಮ ನಮ್ಮ ಜೀವನವನ್ನು ಮುಂದುವರಿಸಲು ಸ್ವತಂತ್ರರಾಗಿದ್ದೇವೆ, ಇದು ಸತ್ಯ. ಹಾಗಾಗಿ, ಅದರ ಬಗ್ಗೆ ಯಾವುದೇ ಗೊಂದಲ ನನಗೆ ಕಾಣುತ್ತಿಲ್ಲ." ಎಂದಿದ್ದಾರೆ.
ಇತ್ತೀಚಿನ ಕೆಲವು ವರದಿಗಳು ಇಶಾ ವಿಚ್ಛೇದನಕ್ಕೆ ಒಪ್ಪದೆ ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ ಎಂದು ಹೇಳಿತ್ತು. ಅಂತಹ ಊಹಾಪೋಹಗಳಿಗೆ ಕೊನೆ ಹಾಡುವ ಮೂಲಕ, ನಾನು ಇತ್ತೀಚಿನ ವರದಿಯನ್ನು ಓದದಿದ್ದರೂ, ವಿಚ್ಛೇದನವು ಈಗಾಗಲೇ ಬಂದಿರುವುದರಿಂದ ಕಾನೂನು ಆಯ್ಕೆಯನ್ನು ಪರಿಗಣಿಸುವುದು ಸಹ ಒಂದು ಆಯ್ಕೆಯಾಗಿಲ್ಲ, ಅದು ಸರಳವಾಗಿದೆ ಎಂದು ಟಿಮ್ಮಿ ಸ್ಪಷ್ಟಪಡಿಸಿದ್ದಾರೆ.
ಇಶಾ ಕೊಪ್ಪಿಕರ್ ಹಲವಾರು ಬಾಲಿವುಡ್ ಚಲನಚಿತ್ರಗಳಾದ ಡಾನ್, ಸಲಾಮ್-ಎ-ಇಷ್ಕ್, 36 ಚೈನಾ ಟೌನ್, ಕೃಷ್ಣಾ ಕಾಟೇಜ್, ಕಯಾಮತ್, ದಿಲ್ ಕಾ ರಿಶ್ತಾ, LOC ಕಾರ್ಗಿಲ್, ಹಮ್ ತುಮ್ ಮತ್ತು ರೈಟ್ ಯಾ ರಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಅನೇಕ ಮರಾಠಿ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ನಟಿ ಇಶಾ ಕೊಪ್ಪಿಕರ್ 2000 ಇಸವಿಯಲ್ಲಿ ಬಿಡುಗಡೆಯಾದ ದಿವಂಗತ ವಿಷ್ಣುವರ್ಧನ್ ನಟನೆಯ ಸೂರ್ಯವಂಶ, ವಿ.ರವಿಚಂದ್ರನ್ ಅವರ ಓ ನನ್ನ ನಲ್ಲೆ, ರಮೇಶ್ ಅರವಿಂದ್ ನಟನೆಯ ಹೂಂ ಅತಿಯಾ ಉಹೂಂ ಅಂತಿಯಾ, ಲೂಟಿ, ಕವಚ ಚಿತ್ರದಲ್ಲಿ ನಟಿಸಿದ್ದಾರೆ.