ಅಂಜದ ಗಂಡು ಸಿನಿಮಾದಲ್ಲಿ ವಿಲನ್ ವಜ್ರಮುನಿ ಎದುರು ಮಾದಕವಾಗಿ 'ಆಕಾರದಲ್ಲಿ ಗುಲಾಬಿ ರಂಗಿದೆ, ಈ ಕಣ್ಣಿನಲ್ಲಿ ಶರಾಬು ಗುಂಗಿದೆ' ಎಂದು ಕುಣಿಯೋ ಕ್ಯಾಬರೆ ಡ್ಯಾನ್ಸರ್ ಡಿಸ್ಕೋ ಶಾಂತಿ ನೆನಪಿದ್ಯಾ. ಆ ಕಾಲದವರಿಗಂತೂ ಈ ಹೆಸರು ಕೇಳಿದರೆ ಮುಖ ಕೆಂಪಾಗುತ್ತೆ.
ಕನ್ನಡದ ಅನೇಕ ಸಿನಿಮಾಗಳಲ್ಲಿ ಕ್ಯಾಬರೆ ಡ್ಯಾನ್ಸರ್ ಆಗಿದ್ದ ಇವರು ಕನ್ನಡ ಮಾತ್ರವಲ್ಲ, ತಮಿಳು, ತೆಲುಗು ಮಲಯಾಳಂ, ಒಡಿಯಾ ಭಾಷೆಗಲ್ಲೂ ತಮ್ಮ ಮಾದಕ ಡ್ಯಾನ್ಸಿನಿಂದ ಪಡ್ಡೆ ಹುಡುಗರ ನಿದ್ದ ಕದ್ದಿದ್ದರು. ಸಾಮಾನ್ಯವಾಗಿ ಇಂಥ ನಟಿಯರ ಲೈಫು ಕರಾಳವಾಗಿರುತ್ತೆ. ಅವರ ಬದುಕಲ್ಲಿ ನೋವೇ ತುಂಬಿ ತುಳುಕುತ್ತಿರುತ್ತೆಂಬುವುದು ಜನ ಸಾಮಾನ್ಯರ ಗೆಸ್.
ಡಿಸ್ಕೊ ಶಾಂತಿ ಇದಕ್ಕೆ ಅಪವಾದ. ಕಳೆದ ಕೆಲವು ವರ್ಷಗಳ ಹಿಂದೆ ಅವರ ಫೋಟೋವೊಂದು ಸದ್ದು ಮಾಡಿದ್ದು. ಪಕ್ಕಾ ಸನ್ಯಾಸಿಯಂತೆ ಕಾಣಿಸುತ್ತಿದ್ದರು. ಅಷ್ಟು ಪ್ರಶಾಂತ, ನಿರ್ಮಲತೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅಷ್ಟಕ್ಕೂ ಈ ಹೆಣ್ಣಿನ ಬದುಕಲ್ಲಿ ಬೇರೆ ಕ್ಯಾಬರೆ ಡ್ಯಾನ್ಸರ್‌ನಂತೆ ನೋವೇ ಇರಲಿಲ್ಲವಾ? ಹತ್ತಿರತ್ತಿರ 60 ವರ್ಷದವರಾಗಿರುವ ಇವರು ಈಗೇನು ಮಾಡುತ್ತಿದ್ದಾರೆ?
ಶಾಂತ ಕುಮಾರಿ! ಎಂದರೆ ಯಾರಿಗೆ ಅರ್ಥವಾಗುತ್ತೆ ಹೇಳಿ? ಅದೇ 'ಡಿಸ್ಕೋ ಶಾಂತಿ' ಒಂದು ಏಜ್‌ಗ್ರೂಪ್‌ನವರ ಎದೆ ಬಡಿತ ಹೆಚ್ಚದಿದ್ದರೆ ಕೇಳಿ. ಈ ಶಾಂತಿ ಜನಿಸಿದ್ದು 1965ರ ಆಗಸ್ಟ್ 28ಕ್ಕೆ. ದಕ್ಷಿಣ ಭಾರತೀಯ ಚಿತ್ರಗಳಲ್ಲದೇ ಒಡಿಯಾ, ಹಿಂದಿ ಸೇರಿ ಸುಮಾರು 900 ಚಿತ್ರಗಳಲ್ಲಿ ಐಟಮ್ ನಂಬರ್ ಎನ್ನುವ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಹಾಗಂಥ ಇಂಥವರನ್ನ ಯಾರು ಮದುವೆ ಆಗ್ತಾರೆನ್ನಲು ಆಗೋಲ್ಲ. 1996ರಲ್ಲಿ ಡಿಸ್ಕೋ ಶಾಂತಿ ತೆಲುಗು ನಟ ಶ್ರೀಹರಿಯನ್ನು ಮದುವೆಯಾಗಿದ್ದಾರೆ. ಸಹಜವಾಗಿಯೇ ಈ ಕ್ಯಾಬರೆ ಡ್ಯಾನ್ಸ್‌ಗೆ ಗುಡ್ ಬೈ ಹೇಳಿದರು.
1996ರಲ್ಲಿ ಡಿಸ್ಕೋ ಶಾಂತಿ ತೆಲುಗು ನಟ ಶ್ರೀಹರಿಯನ್ನು ಮದುವೆಯಾಗಿದ್ದಾರೆ. ಸಹಜವಾಗಿಯೇ ಈ ಕ್ಯಾಬರೆ ಡ್ಯಾನ್ಸ್‌ಗೆ ಗುಡ್ ಬೈ ಹೇಳಿದರು. ಈ ದಂಪತಿಗೆ ಎರಡು ಗಂಡು ಮತ್ತು ಒಬ್ಬಳು ಮಗಳಿದ್ದಳು. ಮಗಳು ಅಕ್ಷರಾ ಹುಟ್ಟಿ ನಾಲ್ಕು ತಿಂಗಳಿಗೆ ಕೊನೆಯುಸಿರೆಳೆದಳು. ಇವಳ ನೆನಪಲ್ಲಿಯೇ ಅಕ್ಷರಾ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಹಳ್ಳಿಗಳಿಗೆ ಶುದ್ಧ ನೀರು ಮತ್ತು ಶಾಲೆಗೆ ಬೇಕಾದ ಸೌಕರ್ಯ ನೀಡುವ ಕೆಲಸ ಮಾಡುತ್ತಿದೆ ಶಾಂತಿ ಅವರ ಕುಟುಂಬ. ಈ ಮಧ್ಯೆ ಶ್ವಾಸಕೋಶ ತೊಂದರೆಗೊಳಗಾದ ಶ್ರೀಹರಿ ನಟಿಸುತ್ತಿರವ ಸೆಟ್ನಲ್ಲೇ 2013ರಲ್ಲಿ ಕೊನೆಯುಸಿರೆಳೆದರು.
ಚಂದದ ಸಂಸಾರ ಇತ್ತು. ಸುಖವಾಗಿಯೇ ಇದ್ದರು. ದುಃಖವನ್ನು ಸಹಿಸಿಕೊಳ್ಳಲು ಪತಿ ಜೊತೆಗಿದ್ದರು. ಆದರೆ, ಅವರನ್ನು ಕಳೆದುಕೊಂಡ ಮೇಲೆ ಶಾಂತಿ ಸಿಕ್ಕಾಪಟ್ಟೆ ಮದ್ಯವ್ಯಸನಿಯಾಗಿದ್ದರು. ತದನಂತರದಲ್ಲಿ ಮಕ್ಕಳಿಗಾಗಿಯೇ ಕುಡಿಯುವುದನ್ನು ಬಿಟ್ಟರಂತೆ. ತೆಲಂಗಾಣಕ್ಕೆ ಸೇರಿರುವ ಹೈದ್ರಾಬಾದ್ ಸಮೀಪ ಮೆಡ್ಚಲ್‌ನ ಸುತ್ತಮುತ್ತ ಅನೇಕ ಹಳ್ಳಿಗಳನ್ನು ಡಿಸ್ಕೋ ಶಾಂತಿ ಕುಟುಂಬ ದತ್ತು ಪಡೆದಿದೆ. ಮಕ್ಕಳ ಹೆಸರು ಮೇಘಶ್ಯಾಂ ಮತ್ತು ಶಶಾಂಕ್. ಮೇಘಶ್ಯಾಂ ಸಿನಿಮಾದಲ್ಲಿಯೂ (movies) ನಟಿಸುತ್ತಿದ್ದಾರೆ.
ಕ್ಯಾಬರೆ ನರ್ತಕಿಯರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಆದರೆ ಡಿಸ್ಕೋ ಶಾಂತಿಯಂಥವರು ಅದನ್ನೊಂದು ಕಲಾ ಪ್ರಕಾರವೆಂದೇ ತಿಳಿದು ಆ ಡ್ಯಾನ್ಸ್‌ನಲ್ಲಿ (dance) ತಮ್ಮನ್ನು ತೊಡಗಿಸಿಕೊಂಡಿದ್ದರು. ಅದವರಿಗೆ ತುತ್ತು ತಂದು ಕೊಡುತ್ತಿದ್ದ ಉದ್ಯೋಗವಾಗಿತ್ತು.
ಡಿಸ್ಕೋ ಶಾಂತಿ ಅವರು ಆರಂಭದಲ್ಲಿ ಲಾಲ್ ಅಮೆರಿಕಾಯಿಲ್ (1989) ಎಂಬ ಸಿನಿಮಾದಲ್ಲಿ ಮಲಯಾಳಂ ತಾರೆ ಮೋಹನ್ ಲಾಲ್ ಅವರೊಂದಿಗೆ ನಟಿಯಾಗಿ ಕೆಲವು ಪ್ರಮುಖ ಪಾತ್ರ ಮಾಡಿದರೂ, ನಟಿಯಾಗಿ ಯಶಸ್ವಿಯಾಗಲಿಲ್ಲ. ಆದರೆ, ಕ್ಯಾಬರೆ ಪ್ರದರ್ಶನದಲ್ಲಿ ಅವರ ಮೊದಲ ಚಲನಚಿತ್ರದ ನಂತರ, ಅವರು ಮಾದಕ ನೋಟದ ಬೆಡಗಿಯಾಗಿ ಮನ್ನಣೆ ಪಡೆದರು. ಜೊತೆಗೆ ಹಲವಾರು ಚಲನಚಿತ್ರಗಳಲ್ಲಿ ನರ್ತಕಿಯಾಗಿ ನಟಿಸಿದರು. ಕನ್ನಡ ಚಲನಚಿತ್ರ 'ಸಾಂಗ್ಲಿಯಾನ' (1988) ಸಿನಿಮಾದಲ್ಲಿ 'ದೂರದ ಊರಿಂದ' ಹಾಡಿನಲ್ಲಿ ಮೈ ಬಳುಕಿಸುತ್ತಾರೆ. ತೆಲುಗು ಚಲನಚಿತ್ರ 'ರೌಡಿ ಅಲ್ಲುಡು' (1991) ನಲ್ಲಿ ಚಿರಂಜೀವಿಯೊಂದಿಗೆ ಬಿರುಗಾಳಿ ಎಬ್ಬಿಸುವ ನೃತ್ಯ ಮತ್ತು 'ಬಂಗಾರು ಕೊಡಿಪೆಟ್ಟ' ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿ ರಂಜಿಸಿದ್ದರು.
ಈಗೀಗ ಐಟಂ ಸಾಂಗ್ಸ್‌ನಲ್ಲಿ (item number)ಸುಪ್ರಸಿದ್ಧ ನಾಯಕಿಯರೇ ಮೈ ಕುಣಿಸುತ್ತಾರೆ. ಅದೊಂದು ಸ್ಪೆಷಲ್ ಡ್ಯಾನ್ಸ್ ಫಾರ್ಮ್ ಆಗಿದೆ. ಆದರೆ ಹಿಂದೆ ಇಂಥಾ ಡ್ಯಾನ್ಸ್ ಮಾಡುವ ನರ್ತಕಿಯರನ್ನು ಮಾತ್ರ ನಡೆಸಿಕೊಳ್ಳುತ್ತಿದ್ದ ರೀತಿಯೇ ಬೇರೆಯಾಗಿರುತ್ತಿತ್ತು. ಸಮಾಜ ಏನೇ ಹೇಳಲಿ ಸಮಸ್ಯೆಗಳಿಂದ ಹೊರಬಂದು ಸಾಮಾನ್ಯರಂತೆ ಸಾಂಸಾರಿಕ ಬದುಕು ನಡೆಸುತ್ತಿರುವ ಶಾಂತಿ ತನ್ನನ್ನು ಹೀಗೆಳೆದ ಸಮಾಜಕ್ಕೇ ತನ್ನಿಂದಾದಷ್ಟು ಸಹಾಯ ಮಾಡುತ್ತಿದ್ದಾರೆ. ಮಾನವೀಯತೆ ಅಂದ್ರೆ ಇದೇ ಅಲ್ವಾ?