ಶಾರುಖ್ ಖಾನ್, ಪ್ರೀತಿ ಮತ್ತು ಪ್ರಣಯಕ್ಕೆ ಸಮಾನಾರ್ಥಕವಾದ ಹೆಸರು, ವಯಸ್ಸಿನ ಹಂಗಿಲ್ಲದೆ ಇನ್ನೂ ಲಕ್ಷಾಂತರ ಹುಡುಗಿಯರ ಹೃದಯವನ್ನು ಆಳುತ್ತಿದ್ದಾರೆ.
ಪತ್ನಿಯ ಮೇಲಿನ ಪ್ರೀತಿ, ಹುಡುಗಿಯರಿಗೆ ನೀಡುವ ಗೌರವ, ಹಾಸ್ಯಪ್ರಜ್ಞೆ ಮುಂತಾದ ಕಾರಣಗಳಿಗಾಗಿ ಶಾರೂಖ್ ಯಾವಾಗಲೂ ಮಹಿಳೆಯರ ಮನಸ್ಸನ್ನು ಗೆಲ್ಲುತ್ತಾರೆ.
ತನ್ನ 18ನೇ ವಯಸ್ಸಿನಲ್ಲೇ ಗೌರಿಯ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪತ್ನಿಯ ಬಗ್ಗೆ ಅತ್ಯುತ್ತಮ ಮಾತುಗಳನ್ನಾಡುವ ಮೂಲಕ ಮತ್ತೆ ಮಹಿಳೆಯರ ಮೆಚ್ಚುಗೆ ಗಳಿಸಿದ್ದಾರೆ.
ಅನೇಕ ಸಂದರ್ಶನಗಳಲ್ಲಿ ಶಾರುಖ್ ಅವರು ಡೇಟ್ ಮಾಡಿದ ಏಕೈಕ ಮಹಿಳೆ ಗೌರಿ ಎಂದು ಬಹಿರಂಗಪಡಿಸಿದ್ದಾರೆ ಮತ್ತು ಅವರು ಪಾರ್ಟಿಯಲ್ಲಿ ಮೊದಲ ಭೇಟಿಯಾದಾಗಲೇ ಆಕೆಯೇ ತನ್ನ ಪತ್ನಿ ಎಂದು ಖಚಿತವಾಗಿ ನಂಬಿದ್ದರು ಎಂದು ಹೇಳಿದ್ದಾರೆ.
ಅಂತರ್‌ಧರ್ಮೀಯ ವಿವಾಹ, ಪೋಸೆಸಿವ್‌ನೆಸ್ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾದಾಗಲೂ ಗೌರಿಯ ಪ್ರೀತಿ ಎಲ್ಲವನ್ನು ಮೀರಿಸಿತು ಮತ್ತು ಇಬ್ಬರೂ ಅಕ್ಟೋಬರ್ 25, 1991ರಂದು ವಿವಾಹವಾದರು.
ತಪ್ಪುಗಳ ಸರಣಿ
ಶಾರೂಖ್ ಖಾನ್ ಸಂದರ್ಶನವೊಂದರಲ್ಲಿ ತಾನು 'ತಪ್ಪುಗಳನ್ನು ಮಾಡಿದೆ, ಸಾಕಷ್ಟು ಅನುಚಿತವಾಗಿ ವರ್ತಿಸಿದೆ, ಗೌರಿಯ ವಿಷಯದಲ್ಲಿ ಸಾಕಷ್ಟು ಕೆಟ್ಟದಾಗಿ ನಡೆದುಕೊಂಡೆ. ಆದರೆ, ಅವಳು ಮೌನವಾಗಿಯೇ ಇದ್ದು ಎಲ್ಲವನ್ನೂ ಸಂಭಾಳಿಸಿಕೊಂಡು ಹೋದಳು' ಎಂದು ಹೇಳಿದ್ದರು.
ಶಾರೂಖ್ ಮಾತಾಡಿದ್ದು ಪ್ರಿಯಾಂಕಾ ಚೋಪ್ರಾ ವಿಷಯವೇ ಇರಬೇಕು ಎಂದು ಹಲವರು ಅಂದಾಜಿಸಿದ್ದಾರೆ. ಇಷ್ಟು ವರ್ಷಗಳ ನಟನಾ ವೃತ್ತಿಯಲ್ಲಿ ಶಾರೂಖ್ ಯಾವ ನಟಿಯ ಜೊತೆಗೂ ಅಫೇರ್ ಗಾಸಿಪ್‌ಗೆ ಆಹಾರವಾಗದಂತೆ ನೋಡಿಕೊಂಡಿದ್ದರು.
ಆದರೆ, ಇದ್ದಕ್ಕಿದ್ದಂತೆ ಡಾನ್ ಮತ್ತು ಡಾನ್ 2 ಚಿತ್ರೀಕರಣದ ಸಮಯದಲ್ಲಿ ಪ್ರಿಯಾಂಕಾ ಚೋಪ್ರಾಗೆ ತುಂಬಾ ಹತ್ತಿರವಾದರು. ಇಬ್ಬರ ನಡುವೆ ಏನೋ ನಡೀತಿದೆ ಎಂಬ ಗುಸುಗುಸು ಎಲ್ಲೆಡೆ ಹಬ್ಬಿತು.
ಶಾರುಖ್ ಪತ್ನಿ ಗೌರಿ ಖಾನ್ ಅವರು ತಮ್ಮ ಗಂಡನ ನಡವಳಿಕೆಯಿಂದ ಸ್ವಲ್ಪವೂ ಸಂತೋಷವಾಗಿರಲಿಲ್ಲ ಮತ್ತು ಪತಿಗೆ ಕಟ್ಟುನಿಟ್ಟಾಗಿ ಪ್ರಿಯಾಂಕಾ ಅವರೊಂದಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗುತ್ತದೆ.
ಅಂತೂ ಪ್ರಿಯಾಂಕಾ ಬಾಲಿವುಡ್ ಬಿಡುವಂತೆ ಮಾಡಲಾಯಿತು. ಈಗ ಶಾರೂಖ್ ಮತ್ತು ಪ್ರಿಯಾಂಕಾ ಅವರವರ ಸಂಸಾರದಲ್ಲಿ ಸಂತೋಷವಾಗಿದ್ದಾರೆ ಮತ್ತು ಶಾರೂಖ್ ತನ್ನ ತಪ್ಪಿನ ಬಗ್ಗೆ ಮಾತಾಡಿದ್ದಾಗ ಅದು ಪೀಸಿಯ ವಿಷಯವೇ ಆಗಿತ್ತು ಎನ್ನಲಾಗಿದೆ.
ಹಿಂದೊಮ್ಮೆ ಸಂದರ್ಶನದಲ್ಲಿ ಗೌರಿ, ಶಾರೂಖ್ ತನ್ನ ವಿಷಯದಲ್ಲಿ ಸಿಕ್ಕಾಪಟ್ಟೆ ಪೋಸೆಸಿವ್ ಆಗಿದ್ದಾರೆ. ಕೆಲವೊಮ್ಮೆ ಅದೊಂದು ಕಾಯಿಲೆಯ ಮಟ್ಟಕ್ಕೆ ಎಂದಿದ್ದರು.