ನಟನೆ ಮತ್ತು ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾದ ಫಿರೋಜ್ ಖಾನ್, ಏಪ್ರಿಲ್ 2006 ರಲ್ಲಿ ತಮ್ಮ ಸಹೋದರ ಅಕ್ಬರ್ ಖಾನ್ ಅವರ 'ತಾಜ್ ಮಹಲ್' ಚಿತ್ರದ ಪ್ರಚಾರಕ್ಕಾಗಿ ಪಾಕಿಸ್ತಾನದ ಲಾಹೋರ್‌ಗೆ ತೆರಳಿದ್ದರು. ಅಲ್ಲಿ ಅವರು ಭಾರತವನ್ನು ಮುಕ್ತ ಕಂಠದಿಂದ ಹೊಗಳಿದರು.
ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ, ಫಿರೋಜ್ ಖಾನ್ ಪಾಕಿಸ್ತಾನದ ನೆಲದಲ್ಲಿ ಭಾರತವನ್ನು ಹೊಗಳಿದರು 'ಭಾರತವು ಜಾತ್ಯತೀತ ದೇಶ. ಅಲ್ಲಿ ಮುಸ್ಲಿಮರು ಪ್ರಗತಿ ಸಾಧಿಸುತ್ತಿದ್ದಾರೆ. ನಮ್ಮ ರಾಷ್ಟ್ರಪತಿ ಮುಸ್ಲಿಂ, ಪ್ರಧಾನಿ ಸಿಖ್. ಇಸ್ಲಾಂ ಹೆಸರಿನಲ್ಲಿ ಪಾಕಿಸ್ತಾನ ರಚನೆಯಾದರೂ ಇಲ್ಲಿನ ಮುಸ್ಲಿಮರ ಸ್ಥಿತಿ ಏನಾಗಿದೆ. ತಮ್ಮ ತಮ್ಮಲ್ಲೇ ಜಗಳವಾಡುತ್ತಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನಿ ಆ್ಯಂಕರ್ ಫಖ್ರ್-ಎ-ಆಲಂ ಅವರು ನಟಿ ಮನೀಶಾ ಕೊಯಿರಾಲಾ ಅವರ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದರು. ಇದಕ್ಕೆ ಫಿರೋಜ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಂಕರ್ ಮನಿಶಾ ಕೊಯಿರಾಲಾ ಅವರೊಂದಿಗೆ ಸ್ವಲ್ಪ ಕೆಟ್ಟ ರೀತಿಯಲ್ಲಿ ಮಾತನಾಡಿದ್ದರು.
ಆ್ಯಂಕರ್ ಮಾತು ಕೇಳಿ ಮನಿಷಾ ಕೊಯಿರಾಲಾ ಪಕ್ಕದಲ್ಲಿ ಕುಳಿತಿದ್ದ ಫಿರೋಜ್ ಖಾನ್ ಕೋಪಗೊಂಡರು. ನೀವು ಮನಿಶಾ ಕೊಯಿರಾಲಾ ಅವರ ಕ್ಷಮೆ ಕೇಳುವುದು ಉತ್ತಮ, ಇಲ್ಲದಿದ್ದರೆ ನೀವು ದಂಡ ಪಾವತಿಸಬೇಕಾಗುತ್ತದೆ ಎಂದು ನಟ ಎಚ್ಚರಿಸಿದ್ದರು.
ಫಿರೋಜ್ ಖಾನ್ ನಡವಳಿಕೆಯಿಂದ ಆಂಕರ್ ಫಖ್ರ್-ಎ-ಆಲಂ ಮತ್ತು ಅಲ್ಲಿ ನೆರೆದಿದ್ದ ಅನೇಕ ಪಾಕಿಸ್ತಾನಿಗಳು ಕೋಪಗೊಂಡರು. ಫಿರೋಜ್ ಖಾನ್ ಅವರನ್ನು ಪಾಕಿಸ್ತಾನದಲ್ಲಿ ನಿಷೇಧಿಸಿದ್ದರು. ಆಗಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಫಿರೋಜ್ ಖಾನ್‌ಗೆ ಪಾಕಿಸ್ತಾನ ವೀಸಾ ನೀಡದಂತೆ ಭಾರತದಲ್ಲಿನ ಪಾಕಿಸ್ತಾನಿ ಹೈಕಮಿಷನರ್‌ಗೆ ಆದೇಶಿಸಿದ್ದರು.
ನಾನು ಸ್ವಂತವಾಗಿ ಇಲ್ಲಿಗೆ ಬಂದಿಲ್ಲ, ಆದರೆ ನನಗೆ ಆಹ್ವಾನಿಸಲಾಗಿತ್ತು. ನಮ್ಮ ಸಿನಿಮಾಗಳು ಶಕ್ತಿಯುತವಾಗಿವೆ. ಆದ್ದರಿಂದಲೇ ಪಾಕಿಸ್ತಾನ ಸರ್ಕಾರವು ಅವರನ್ನು ದೀರ್ಘಕಾಲ ನಿಷೇಧಿಸಲು ಸಾಧ್ಯವಿಲ್ಲ ಎಂದು ಕಾರ್ಯಕ್ರಮದ ವೇಳೆ ಫಿರೋಜ್ ಖಾನ್ ಗುಡುಗಿದ್ದರು.
ಈ ಘಟನೆಯ ನಂತರ, ಮಹೇಶ್ ಭಟ್ ಫಿರೋಜ್ ಖಾನ್ ಪರವಾಗಿ ಆಂಕರ್ ಫಖ್ರ್-ಎ-ಆಲಂ ಮತ್ತು ಪಾಕಿಸ್ತಾನಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದರು. ಆ ಸಮಯದಲ್ಲಿ ಮಹೇಶ್ ಭಟ್ ಭಾರತದ ನಿಯೋಗದಲ್ಲಿದ್ದರು. ನಿಯೋಗದಲ್ಲಿದ್ದ ಉಳಿದವರೂ ಪಾಕಿಸ್ತಾನದ ಕ್ಷಮೆಯಾಚಿಸಿದರು. ಭಾರತದಿಂದ ಪಾಕಿಸ್ತಾನಕ್ಕೆ ಭೇಟಿ ನೀಡಿದ ಈ ನಿಯೋಗದಲ್ಲಿ, ಫಿರೋಜ್ ಅವರ ಸಹೋದರ ಅಕ್ಬರ್ ಖಾನ್, ಸಂಜಯ್ ಖಾನ್, ಪಹ್ಲಾಜ್ ನಿಹಲಾನಿ, ಫರ್ದೀನ್ ಖಾನ್, ಶ್ಯಾಮ್ ಶ್ರಾಫ್, ಶತ್ರುಘ್ನ ಸಿನ್ಹಾ, ಮಹೇಶ್ ಭಟ್, ವಿಕಾಸ್ ಮೋಹನ್ ಮತ್ತು ತಾಜ್ ಮಹಲ್ ಚಿತ್ರದ ಅನೇಕ ತಾರೆಯರು ಇದ್ದರು.
ಈ ಘಟನೆಯ 3 ವರ್ಷಗಳ ನಂತರ, ಅಂದರೆ ಏಪ್ರಿಲ್ 2009 ರಲ್ಲಿ, ಫಿರೋಜ್ ಖಾನ್ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬೆಂಗಳೂರಿನಲ್ಲಿ ನಿಧನರಾದರು. ಫಿರೋಜ್ ಖಾನ್ ಅವರ ಮಗ ಫರ್ದೀನ್ ಖಾನ್ ಕೂಡ ಬಾಲಿವುಡ್ ನಟ.