ಶ್ರೇಯಾ ಘೋಷಾಲ್ ಭಾರತೀಯ ಸಂಗೀತ ಉದ್ಯಮದಲ್ಲಿ ಹೆಚ್ಚು ಮೆಚ್ಚುಗೆ ಪಡೆದ ಹಿನ್ನೆಲೆ ಗಾಯಕಿಯಾಗಿದ್ದು, ಅವರ ಮಧುರ ಧ್ವನಿ ಮತ್ತು ಬಹುಮುಖತೆಗೆ ಹೆಸರುವಾಸಿ.
ತಮ್ಮ ಮನಮೋಹಕ ಧ್ವನಿಯೊಂದಿಗೆ ವಿಶ್ವಾದ್ಯಂತ ಜನ ಮನ ಗೆದ್ದಿರುವ ಶ್ರೇಯಾ ಘೋಷಾಲ್ ಮರೆಯಲಾಗದ ಹಾಡುಗಳಿಂದ ಬಾಲಿವುಡ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.
ಹಿಂದಿ, ಮರಾಠಿ, ತಮಿಳು, ಮಲಯಾಳಂ, ತೆಲುಗು, ಕನ್ನಡ, ಗುಜರಾತಿ, ಬೆಂಗಾಲಿ, ಅಸ್ಸಾಮಿ, ನೇಪಾಳಿ, ಒಡಿಯಾ, ಭೋಜ್‌ಪುರಿ, ಪಂಜಾಬಿ, ಉರ್ದು, ತುಳು ಸೇರಿ ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಸುಮಾರು 2341ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಘೋಷಾಲ್ ಅವರ ವೃತ್ತಿಜೀವನವು ಅವರು ಟಿವಿಯ ರಿಯಾಲಿಟಿ ಶೋ ಸಾ ರೆ ಗಾ ಮಪಾ ಸ್ಪರ್ಧೆಯನ್ನು ಗೆದ್ದ ನಂತರದಿಂದ ಪ್ರಾರಂಭವಾಯಿತು.
ದೇವದಾಸ್ (2002) ಚಿತ್ರದ ತನ್ನ ಚೊಚ್ಚಲ ಹಾಡು ಬೈರಿ ಪಿಯಾದೊಂದಿಗೆ ಶ್ರೇಯಾ ವ್ಯಾಪಕವಾದ ಮನ್ನಣೆ ಗಳಿಸಿದರು ಮತ್ತು ಅಂದಿನಿಂದ ಬಾಲಿವುಡ್‌ನಲ್ಲಿ ಹೆಚ್ಚು ಬೇಡಿಕೆಯಿರುವ ಗಾಯಕಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಚೊಚ್ಚಲ ಹಾಡಿಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೊಂದಿಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಹೊಸ ಸಂಗೀತ ಪ್ರತಿಭೆಗಾಗಿ ಫಿಲ್ಮ್‌ಫೇರ್ R. D. ಬರ್ಮನ್ ಪ್ರಶಸ್ತಿಯನ್ನು ಪಡೆದ ಕೀರ್ತಿ ಶ್ರೇಯಾ ಅವರದ್ದು.
ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 7 ಬಾರಿ ಫಿಲ್ಮ್‌ಫೇರ್ ಹಾಗೂ 10 ಬಾರಿ ಲ್ಮ್‌ಫೇರ್ ಸೌತ್ ಆವಾರ್ಡ್‌ಗಳನ್ನು ಗೆದ್ದಿದ್ದಾರೆ, ಮುಂಗಾರು ಮಳೆ ಚಿತ್ರ ಸೇರಿ ಅನೇಕ ಕನ್ನಡ ಚಿತ್ರಗಳಿಗೂ ತಮ್ಮ ಅಮೂಲ್ಯ ಧ್ವನಿಯಲ್ಲಿ ಹಾಡಿರುವುದು ಶ್ರೇಯಾ ವಿಶೇಷತೆ.
ಸಿನಿಮಾ ಹಾಡುಗಳ ಜೊತೆಗೆ ಶ್ರೇಯಾ 20 ಸ್ಟುಡಿಯೋ ಆಲ್ಬಮ್‌ಗಳನ್ನು ಸಹ ಬಿಡುಗಡೆ ಮಾಡಿದ್ದಾರೆ ಮತ್ತು 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಹಿನ್ನೆಲೆ ಗಾಯನದ ಹೊರತಾಗಿ, ಘೋಷಾಲ್ ಹಲವಾರು ದೂರದರ್ಶನ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಅವರು ಪ್ರಪಂಚದಾದ್ಯಂತ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡುತ್ತಾರೆ