ತೆರೆ ಮೇಲೆ ಹೀರೋ-ಹೀರೋಯಿನ್ ಕಮೆಸ್ಟ್ರಿ, ನಿರ್ದೇಶನ, ಸಿನಿಮಾ ಎಲ್ಲವೂ ಚೆನ್ನಾಗಿರುತ್ತೆ. ಆದರೆ ತೆರೆ ಹಿಂದೆ ವ್ಯತಿರಿಕ್ತವಾಗಿರುತ್ತದೆ ಎಂದು ಹಲವು ನಟಿಯರು ಹೇಳಿದ್ದಾರೆ. ತಮಗಾದ ಅನುಭವ ಬಿಚ್ಚಿಟ್ಟಿದ್ದಾರೆ. ಅರ್ಜುನ್ ರೆಡ್ಡಿ ಸೇರಿದಂತೆ ಕೆಲ ಪ್ರಮುಖ ಸಿನಿಮಾ ಮೂಲಕ ಶಾಲಿನಿ ಪಾಂಡೆ ಜನಪ್ರಿಯರಾಗಿದ್ದಾರೆ. ಇದೀಗ ಶಾಲಿನಿ ಪಾಂಡೆ ಕೂಡ ತೆರೆ ಹಿಂದಿನ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.
ಫಿಲ್ಮಿಗ್ಯಾನ್‌ಗೆ ನೀಡಿದ ಸಂದರ್ಶನದಲ್ಲಿ ಶಾಲಿನಿ ಪಾಂಡೆ ಈ ಘಟನೆ ಹೇಳಿದ್ದಾರೆ. ತೆರೆ ಮೇಲೆ ನನ್ನ ಪಾತ್ರ, ಅಲ್ಲಿನ ಕಮೆಸ್ಟ್ರಿ, ಪ್ರಚಾರ, ಇತರ ವೇದಿಕೆಗಳಲ್ಲಿ ನೋಡಿದರೆ ನಾನು ಉತ್ತಮ ವ್ಯಕ್ತಿಗಳ ಜೊತೆ ಸಿನಿಮಾ ಮಾಡಿದ್ದೇನೆ ಎಂದು ಭಾವಿಸಬಹುದು. ನನ್ನ ಸಿನಿಮಾ ಕರಿಯರ್‌ನಲ್ಲಿ ಎಷ್ಟು ಉತ್ತಮ ವ್ಯಕ್ತಿಗಳ ಜೊತೆ ಸಿನಿಮಾ ಮಾಡಿದ್ದೇನೋ, ಅಷ್ಟೇ ಕೆಟ್ಟ ವ್ಯಕ್ತಿಗಳ ಜೊತೆಗೂ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ.
ನನಗೆ ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲ.ನನ್ನ ಸಿನಿಮಾ ಕರಿಯರ್‌ನ ಆರಂಭಿಕ ದಿನ ಅದು. ದಕ್ಷಿಣ ಭಾರತದ ಸಿನಿಮಾ ಒಂದನ್ನು ಮಾಡುತ್ತಿದ್ದೆ. ಈ ವೇಳೆ ವ್ಯಾನ್‌ನಲ್ಲಿ ನಾನು ಡ್ರೆಸ್ ಚೇಂಜ್ ಮಾಡುತ್ತಿದ್ದೆ. ಇದೇ ಸಮಯ ನೋಡಿಕೊಂಡು ನಿರ್ದೇಶಕ ನೇರವಾಗಿ ನನ್ನ ಕೋಣೆಗೆ ಬಂದಿದ್ದ. ಯಾವುದೇ ಅನುಮತಿ ಇಲ್ಲ, ಕನಿಷ್ಠ ಬಾಗಿಲು ತಟ್ಟದೇ ನೇರವಾಗಿ ವ್ಯಾನ್ ಕೋಣೆಗೆ ಬಂದಿದ್ದ. ಅವರು ಉದ್ದೇಶಪೂರ್ವಕವಾಗಿಯೇ ಕೋಣೆಗೆ ಬಂದಿದ್ದರು ಎಂದು ಶಾಲಿನಿ ಪಾಂಡೆ ಘಟನೆ ವಿವರಿಸಿದ್ದಾರೆ.
ನಿರ್ದೇಶಕ ಕೋಣೆಗೆ ಬರುತ್ತಿದ್ದಂತೆ ನಾನು ಬೆಚ್ಚಿ ಬಿದ್ದಿದ್ದೆ. ನನ್ನ ವಯಸ್ಸು ಕೇವಲ 22. ನನಗೆ ಏನು ಮಾಡಬೇಕು ಎಂದೇ ತೋಚಲಿಲ್ಲ. ಆದರೆ ನಾನು ಆಕ್ರೋಶ ಭರಿತಳಾಗಿ ನಿರ್ದೇಶಕರಿಗೆ ಹೊರಹೋಗುವಂತೆ ಏರು ಧ್ವನಿಯಲ್ಲಿ ಹೇಳಿದ್ದೆ. ನನ್ನ ಕಿರುಚಾಟದ ಧ್ವನಿ ವ್ಯಾನ್ ಮಾತ್ರವಲ್ಲ, ಶೂಟಿಂಗ್ ಸೆಟ್‌ಗೂ ಕೇಳಿಸಿತ್ತು. ನಿರ್ದೇಶಕರಿಗೆ ತೀವ್ರ ಮುಜುರವಾಗಿತ್ತು ಎಂದು ಶಾಲಿನಿ ಪಾಂಡೆ ಹೇಳಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿದ್ದ ಕೆಲವರು ಬಂದು ವಿಚಾರಿಸಿದ್ದಾರೆ. ಈ ವೇಳೆ ಸರಿ ಅದಕ್ಕೆ ಕಿರುಚಾಟ ಯಾಕೆ? ಹೇಳಿದರೆ ಸಾಕಿತ್ತಲ್ವಾ ಎಂದು ಎಲ್ಲರು ನನ್ನ ಪ್ರಶ್ನಿಸಿದ್ದರು. ಹೀಗೆ ಹೆಣ್ಣಿನ ಕೋಣೆಗೆ ಬರುವಾಗ ಅವರಿಗೂ ಕೊಂಚ ಮ್ಯಾನರ್ಸ್ ಇರಬೇಕಲ್ವಾ ಅನ್ನೋದು ನನ್ನ ವಾದವಾಗಿತ್ತು ಎಂದು ಶಾಲಿನಿ ಪಾಂಡೆ ಹೇಳಿದ್ದಾರೆ.
ಕೇವಲ ಒಂದು ಸಿನಿಮಾದಲ್ಲಿ ಮಾತ್ರ ನಾನು ಅಭಿನಯಸಿದ್ದೆ. ಯಾರ ಬೆಂಬಲವೂ ಇಲ್ಲ. ಈ ಸಂದರ್ಭದಲ್ಲಿ ನಾನು ನನ್ನ ಪ್ರತಿರೋಧ ನಿರ್ದೇಶಕರಿಗೂ ಅರ್ಥವಾಗಿತ್ತು. ಅಂದೇ ನಾನು ಕೆಲ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದೆ. ಏನೇ ಆದರೂ ಕೆಲ ಬೌಂಡರಿಗಳನ್ನು ಹಾಕಿಕೊಂಡಿದ್ದೆ. ಅದೃಷ್ಠವಶಾತ್ ನನಗೆ ಮತ್ತೆ ಕೆಲ ಅವಕಾಶಗಳು ಸಿಕ್ಕಿತ್ತು ಎಂದು ಶಾಲಿನಿ ಪಾಂಡೆ ಹೇಳಿದ್ದಾರೆ.
ನಿರ್ದೇಶಕರನ್ನೇ ವಿರೋಧಿಸಿದರೆ ಮುಂದೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಆದರೆ ನನಗೆ ಅದೃಷ್ಠವಶಾತ್ ಅವಕಾಶಗಳು ಸಿಕ್ಕಿತು.ಯಾರಿಗೂ ಹೆಚ್ಚು ಸಲುಗೆ ನೀಡಿಲ್ಲ. ನನಗೆ ಭರಪೂರ ಅವಕಾಶ ಸಿಕ್ಕಿಲ್ಲ ನಿಜ. ಆದರೆ ಸಿಕ್ಕ ಪಾತ್ರಗಳಲ್ಲಿ ತೃಪ್ತಿ ಇದೆ ಎಂದು ಶಾಲಿನಿ ಪಾಂಡೆ ಹೇಳಿದ್ದಾರೆ.