ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಗೆ ಕನ್ನಡತಿ ರಂಜನಿ ಫಿದಾ

First Published | May 28, 2021, 12:35 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿಯ ಶೂಟಿಂಗ್ ಹೈದರಾಬಾದಿನಲ್ಲಿ ಶುರುವಾಗಿ ಆಗಲೇ ನಾಲ್ಕು ದಿನ ಆಗಿದೆ. ಹೊಸ ಜಾಗ, ಹೊಸ ಶೂಟಿಂಗ್ ಅನುಭವಗಳನ್ನ ಕನ್ನಡತಿ ಭುವಿ ಪಾತ್ರಧಾರಿ ರಂಜನಿ ರಾಘವನ್ ಬಿಚ್ಚಿಟ್ಟಿದ್ದಾರೆ. ಪ್ರಿಯಾ ಕೆರ್ವಾಶೆ ಮಾಡಿದ ಸಂದರ್ಶನ ಹೀಗಿದೆ

ನಮ್ಮ ರಾಜ್ಯದಲ್ಲೂ ಫಿಲಂ ಸಿಟಿ ಇರಬೇಕಿತ್ತು: ರಾಮೋಜಿರಾವ್ ಫಿಲಂ ಸಿಟಿ ನನಗೆ ಹೊಸತಲ್ಲ. ಹಿಂದೆಯೇ ಇಲ್ಲೆಲ್ಲ ಸುತ್ತಾಡಿದ್ದೆ. ಆದರೆ ಈ ಪರಿಸರದಲ್ಲಿ ಶೂಟಿಂಗ್ ಅನುಭವ ಹೊಸತು. ನಾವು ಉಳಿದುಕೊಂಡಿರುವ ಜಾಗದಿಂದ ಈ ಸೆಟ್‌ಗೆ ಬಸ್‌ನಲ್ಲಿ ಓಡಾಡುತ್ತೀವಿ ಎಂದಿದ್ದಾರೆ.
ದಾರಿಯುದ್ದಕ್ಕೂ ಫಾರಿನ್ ಮನೆಗಳ ಸೆಟ್, ಹಳ್ಳಿ ಮನೆಗಳ ಸೆಟ್‌ಗಳು, ಮತ್ತೊಂದು ಕಡೆ ಬಂಗಲೆಗಳು, ನಮ್ಮ ರನ್ನ ಸಿನಿಮಾದ ಮನೆ.. ಇವನ್ನೆಲ್ಲ ನೋಡಿದಾಗ ನಾವೆಲ್ಲೋ ಸಿನಿಮಾ ಜಗತ್ತಲ್ಲಿದ್ದೀವೇನೋ ಅನ್ನುವ ಕಲ್ಪನೆ ಬರುತ್ತೆ. ಇದೇ ಥರ ಫಿಲಂ ಸಿಟಿ ನಮ್ ರಾಜ್ಯದಲ್ಲೂ ಇದ್ದಿದ್ರೆ ಎಷ್ಟು ಚೆನ್ನಾಗಿರೋದು..
Tap to resize

ಒಳಗೂ ಸೆಕೆ, ಹೊರಗೂ ಸೆಕೆ: ಅಮ್ಮನ ಜೊತೆ ಮಾತಾಡುವಾಗ ಅವರು ಬೆಂಗಳೂರಲ್ಲೀಗ ಮಳೆ ಬರ್ತಿದೆ, ಚಳಿ ಇದೆ ಅಂತಿದ್ರು. ಅದನ್ನು ಕೇಳಿ ಆಸೆ ಆಗುತ್ತೆ. ಯಾಕೆಂದರೆ ಇಲ್ಲಿ ಮಳೆಯ ಸುಳಿವೇ ಇಲ್ಲ ಎಂದಿದ್ದಾರೆ ರಂಜನಿ.
ಶೂಟಿಂಗಿನಲ್ಲಿರಲಿ, ರೂಮಿನಲ್ಲಿರಲಿ ಒಳಗೂ ಸೆಕೆ, ಹೊರಗೂ ಸೆಕೆ. ಬೆಂಗಳೂರಿನ ತಂಪಿನಲ್ಲಿ ಇದ್ದವರಿಗೆ ಒಂಥರ ಅಸಹನೀಯ ಅನುಭವ. ಅದು ಬಿಟ್ರೆ ಹೊಸ ಲೊಕೇಶನ್. ಬೆಂಗಳೂರಲ್ಲಿ ಒಂದೇ ಮನೆಯಲ್ಲಿ ದಿನಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದವರಿಗೆ ಇಲ್ಲಿ ಒಂಥರಾ ಭಿನ್ನ ಅನುಭವ.
ಇನ್ನೂ ಐದು ಜನ ಸೇರಿಕೊಳ್ಳುವ ಸಾಧ್ಯತೆ ಇದೆ. ಕಥೆ ಸಖತ್ ಇಂಟೆರೆಸ್ಟಿಂಗ್ ಆಗಿ ಹೋಗ್ತಿದೆ. ಅದನ್ನು ಸ್ಕ್ರೀನ್ ಮೇಲೆ ನೀವೇ ನೋಡಿ ಎಂದಿದ್ದಾರೆ. ಹಾಗಂತ ಕನ್ನಡತಿ ಭುವಿಯ ಪಾತ್ರದ ಸೊಗಸು ಹಾಗೇ ಇರುತ್ತೆ.
ಸುರಕ್ಷತೆ ಇದ್ದೇ ಇದೆ: ಲಾಕ್‌ಡೌನ್‌ಗೂ ಮೊದಲು ಬೆಂಗಳೂರಲ್ಲಿ ಶೂಟಿಂಗ್ ಇದ್ದಾಗ ಚಿತ್ರೀಕರಣ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ಭಯ ಆಗೋದು. ಮನೆಯಲ್ಲಿ ಕೊಂಚ ವಯಸ್ಸಾದ ಅಪ್ಪ ಅಮ್ಮ ಇರುತ್ತಾರೆ. ನಾವೆಲ್ಲಿ ಕೊರೋನಾ ಹೊತ್ತು ತಂದು ಅವರಿಗೂ ಹರಡಿಸುತ್ತೇವೋ ಅಂತ. ಆದರೆ ಈಗ ನಿರಾಳತೆ ಇದೆ.
ನಮ್ಮ ಟೀಮ್ ಬಿಟ್ರೆ ಮತ್ಯಾರನ್ನೂ ಭೇಟಿ ಆಗಲ್ಲ. ನಾವೆಲ್ಲ ಕೊರೋನಾ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್‌ನೊಂದಿಗೆ ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ. ನಾವು ನಾವೇ ಇರುವ ಕಾರಣ ಇದು ಬಯೋ ಬಬಲ್ ಥರ ಇದೆ. ಸಂಪೂರ್ಣ ಸುರಕ್ಷತೆ ಇದೆ. ಹೀಗಾಗಿ ನಿರ್ಭೀತಿಯಿಂದ ಇರಬಹುದು.
ಹತ್ತು ದಿನದ ಶೂಟಿಂಗ್ ಪ್ಲಾನ್:ಸದ್ಯಕ್ಕೆ ಹತ್ತು ದಿನದ ಶೂಟಿಂಗ್ ಪ್ಲಾನ್ ಮಾಡ್ಕೊಂಡು ಬಂದಿದ್ದೀವಿ. ಅಷ್ಟರ ಒಳಗೆ ಲಾಕ್‌ಡೌನ್ ಮುಗಿದರೆ ಸರಿ, ಇಲ್ಲಾಂದ್ರೆ ಇಲ್ಲೇ ಶೂಟಿಂಗ್ ಮುಂದುವರಿಯಬಹುದು ಎಂದಿದ್ದಾರೆ ನಟಿ.
ನೋಡಿದ್ರೆ ಇದೆಲ್ಲ ಬಹಳ ದುಬಾರಿ ಅನಿಸುತ್ತೆ. ಆದರೆ ಅನಿವಾರ್ಯ ಅಲ್ವಾ. ಕಳೆದ ಸಲ ಲಾಕ್‌ಡೌನ್‌ನಲ್ಲಿ ಕೆಲವು ಸೀರಿಯಲ್‌ಗಳು ನಿಂತಿದ್ದು ಆಮೇಲೆ ಶುರು ಆಗಲೇ ಇಲ್ಲ. ಹಳೇ ಸೀರಿಯಲ್ ಕತೆಯನ್ನೇ ಮುಂದುವರಿಸೋ ಬದಲು ಹೊಸ ಸೀರಿಯಲ್ಲೇ ಮಾಡೋಣ ಅಂದುಕೊಂಡಿರ್ತಾರೆ. ಒಂದು ವೇಳೆ ಸೀರಿಯಲ್ ಪ್ರಸಾರ ಸ್ಥಗಿತ ಆದ್ರೆ, ಎಷ್ಟೋ ಜನ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಎಲ್ಲರಿಗೂ ಕಷ್ಟ ಎಂದಿದ್ದಾರೆ.
ಜೊತೆಗೆ ಮತ್ತೆ ಹಳೆಯ ಕಥೆಯನ್ನು ವೀಕ್ಷಕರಿಗೆ ನೆನಪಿಸಿ ಅವರನ್ನು ಮತ್ತೆ ಇತ್ತ ಕರೆತರೋದು ಬಹಳ ಚಾಲೆಂಜಿಂಗ್. ಈ ಎಲ್ಲ ದೃಷ್ಟಿಯಿಂದ ಸ್ವಲ್ಪ ದುಬಾರಿ ಅನಿಸಿದ್ರೂ ಇಲ್ಲಿ ಶೂಟಿಂಗ್ ಮುಂದುವರಿಸಿ ಧಾರಾವಾಹಿ ಪ್ರಸಾರದಲ್ಲಿ ನಿರಂತರತೆ ಕಾಯ್ದುಕೊಂಡಿದ್ದು ಉತ್ತಮ ಬೆಳವಣಿಗೆ ಅನ್ನೋದು ನನ್ನ ಅಭಿಪ್ರಾಯ.

Latest Videos

click me!