ಧಾರವಾಡ (ಅ.11): ಧಾರವಾಡ ಜಿಲ್ಲೆ ಸೇರಿ ಇಡೀ ಉತ್ತರ ಕರ್ನಾಟಕದ ಆರ್ಥಿಕತೆ ಹಾಗೂ ಔದ್ಯೋಗಿಕ ಪ್ರಮಾಣ ಹೆಚ್ಚಲು ಒಂದರ್ಥದಲ್ಲಿ ಟಾಟಾ ಕಂಪನಿಯ ಪಾತ್ರ ಬಹುದೊಡ್ಡದು. ನೀನೆಲ್ಲಿ ಕೆಲಸಾ ಮಾಡ್ತಿಯೋ ಎಂದು ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಯಾರನ್ನಾದರೂ ಕೇಳಿದರೆ, ನಾನು ಟಾಟಾ ಕಂಪನಿಯಲ್ಲಿ ಎಂದೇ ಉತ್ತರ ಬರುವಷ್ಟು ಸಂಖ್ಯೆಯಲ್ಲಿ ಟಾಟಾ ಕಂಪನಿ ಉದ್ಯೋಗ ಒದಗಿಸಿದೆ. ನೇರ ಹಾಗೂ ಪರೋಕ್ಷವಾಗಿ ಟಾಟಾದಲ್ಲಿ 10-15 ಸಾವಿರ ಮಂದಿ ಉದ್ಯೋಗ ಪಡೆದಿದ್ದಾರೆ.
ಧಾರವಾಡದ ಗರಗ ರಸ್ತೆಯಲ್ಲಿ ಬರೋಬ್ಬರಿ 123 ಎಕರೆ ಪ್ರದೇಶದಲ್ಲಿ ಟಾಟಾ ಮೋಟರ್ಸ್ ಹಾಗೂ ಟಾಟಾ ಮಾರ್ಕೋಪೋಲೋ 2006ರಲ್ಲಿ ಶುರುವಾಗಿದ್ದು, ಟಾಟಾ ಕಂಪನಿ ಟಾಟಾ ಏಸ್, ಇತರೆ ವಾಹನಗಳು ಮಾತ್ರವಲ್ಲದೆ ಟಾಟಾ ಮಾರ್ಕೋಪೋಲೋದ ಬಸ್‌ಗಳು ಇಡೀ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಟಾಟಾ ಮಾರ್ಕೋಪೋಲೋ ಕಂಪನಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಕರ್ಯ, ಗುಣಮಟ್ಟ ಮತ್ತು ಸುರಕ್ಷತೆ ಹೊಂದಿರುವ ಬಸ್‌ಗಳನ್ನು ನಿರ್ಮಿಸಲಾಗುತ್ತಿದೆ. ಅಂತರ-ನಗರ ಸಾರಿಗೆಗಾಗಿ ವಿಶ್ವ ದರ್ಜೆಯ ಸಂಪೂರ್ಣ ನಿರ್ಮಿತ ಬಸ್‌ಗಳಿಗೆ ಭಾರತದ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಕಂಪನಿ ಪೂರೈಸುತ್ತಿರುವುದು ವಿಶೇಷ.
16 ರಿಂದ 54 ಆಸನಗಳ ಬಸ್, 18 ಮತ್ತು 45 ಆಸನಗಳ ಐಷಾರಾಮಿ ಬಸ್, ಐಷಾರಾಮಿ ಕೋಚ್ ಮತ್ತು ಕಡಿಮೆ ಅಂತಸ್ತಿನ ಸಿಟಿ ಬಸ್‌ಗಳನ್ನು ಒಳಗೊಂಡಂತೆ ‘ಸ್ಟಾರ್‌ಬಸ್’ ಮತ್ತು ‘ಗ್ಲೋಬಸ್’ ಬ್ರಾಂಡ್‌ಗಳ ಅಡಿ ಮಾರಾಟ ಮಾಡಲು ಸಮಗ್ರ ಶ್ರೇಣಿಯ ಬಸ್‌ಗಳನ್ನು ಈ ಕಂಪನಿ ಉತ್ಪಾದಿಸುತ್ತಿದೆ. ಸುಮಾರು 123 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕಂಪನಿಯು ಮೊದಲ ವರ್ಷ 15 ಸಾವಿರ ಬಸ್‌ಗಳನ್ನು ಉತ್ಪಾದಿಸಿ ನಂತರದಲ್ಲಿ ವರ್ಷಕ್ಕೆ 30,000 ವರೆಗೂ ಉತ್ಪಾದನೆ ಮಾಡಿದ್ದು ಇತಿಹಾಸ.
ಕರ್ನಾಟಕದ ಧಾರವಾಡದ ಉತ್ಪಾದನಾ ಘಟಕವು ಟಾಟಾ-ಮಾರ್ಕೊಪೋಲೊ ಬಸ್‌ಗಳ ಪ್ರಮುಖ ಉತ್ಪಾದನಾ ಕೇಂದ್ರವಾಗಿದ್ದು, ಇತ್ತೀಚೆಗೆ ಎಲೆಕ್ಟ್ರಿಕಲ್ ಬಸ್‌ಗಳನ್ನು ಸಹ ಲಾಂಚ್ ಮಾಡಿದೆ. ಟಾಟಾ ಕಂಪನಿ ನೇರವಾಗಿ ಮಾತ್ರವಲ್ಲದೇ ವೆಂಡರ್ಸ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಹಾಗೂ ವ್ಯಾಪಾರ ಒದಗಿಸಿದೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಶೇ. 70ರಷ್ಟು ಟಾಟಾ ಕಂಪನಿಗೆ ಬೇಕಾದ ಕಚ್ಚಾ ವಸ್ತುಗಳನ್ನು ತಯಾರಿಸಿ ಕೊಡುವ ಕಂಪನಿಗಳೇ ಇವೆ. ಬಸ್‌ಗಳಿಗೆ ಸೀಟ್ ಮಟಿರೀಯಲ್, ಪೇಟಿಂಗ್, ಪೌಡರ್ ಕೋಟಿಂಗ್, ಟ್ರೇಡಿಂಗ್ ಒದಗಿಸುವ ಕಂಪನಿಗಳು ಟಾಟಾ ಕಂಪನಿ ಆಧಾರದ ಮೇಲೆಯೇ ನಡೆಯುತ್ತಿವೆ ಎಂದು ಧಾರವಾಡ ಗ್ರೋಥ ಸೆಂಟರ್ ಇಂಡಸ್ಟ್ರೀ ಅಸೋಸಿಯೇಶನ್ ಉಪಾಧ್ಯಕ್ಷ ರಾಜು ಪಾಟೀಲ ಮಾಹಿತಿ ನೀಡಿದರು.