ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಮಂಡಳಿಯ ಅನುಮೋದನೆ ಪಡೆದಿದೆ. ಇದು ಸಂಪೂರ್ಣ 'ಫ್ರೆಶ್ ಇಶ್ಯೂ' ಆಗಿದ್ದು, ಸುಮಾರು ₹37,000 ಕೋಟಿ ಮೌಲ್ಯದೊಂದಿಗೆ ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಆಗುವ ನಿರೀಕ್ಷೆಯಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಬಹುನಿರೀಕ್ಷಿತ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಬಿಡುಗಡೆಗೆ ಮಂಡಳಿಯ ಅಧಿಕೃತ ಅನುಮೋದನೆ ಪಡೆದುಕೊಂಡಿದೆ. ಆರ್‌ಐಎಲ್‌ನ ವಾರ್ಷಿಕ ಮಹಾಸಭೆಯಲ್ಲಿ (AGM) ಚೇರ್ಮನ್ ಮುಕೇಶ್ ಅಂಬಾನಿ ಅವರು ಈ ವಿಷಯವನ್ನು ಪ್ರಕಟಿಸಿದ್ದು, ಐಪಿಒಗೆ ಸಂಬಂಧಿಸಿದಂತೆ ಸೆಬಿ (SEBI), ಎನ್‌ಎಸ್‌ಇ ಮತ್ತು ಬಿಎಸ್‌ಇಗೆ ಇಂದೇ ಪ್ರಾಥಮಿಕ ದಾಖಲೆಗಳನ್ನು (DHRP) ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
25
ಸಂಪೂರ್ಣ ‘ಫ್ರೆಶ್ ಇಶ್ಯೂ’ ಮತ್ತು ಒಎಫ್‌ಎಸ್ ಮುಕ್ತ
ಈ ಐಪಿಒ ಸಂಪೂರ್ಣವಾಗಿ ‘ಫ್ರೆಶ್ ಇಶ್ಯೂ’ (Fresh Issue) ರೂಪದಲ್ಲಿರಲಿದೆ. ಅಂದರೆ, ಇಲ್ಲಿ ಕಂಪನಿಯ ಹಳೆಯ ಹೂಡಿಕೆದಾರರು ತಮ್ಮ ಬಳಿ ಇರುವ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ (OFS ಇರುವುದಿಲ್ಲ). ಬದಲಾಗಿ, ಜಿಯೋ ಸಂಸ್ಥೆಯು ಮಾರುಕಟ್ಟೆಗೆ ನೇರವಾಗಿ ಹೊಸ ಷೇರುಗಳನ್ನು ಬಿಡುಗಡೆ ಮಾಡುತ್ತಿದ್ದು, ಇದರಿಂದ ಬರುವ ಬಂಡವಾಳವನ್ನು ಕಂಪನಿಯ ಮುಂದಿನ ಅಭಿವೃದ್ಧಿ ಹಾಗೂ ಕಾರ್ಯಾಚರಣೆಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ.
35
27 ಕೋಟಿ ಹೊಸ ಷೇರುಗಳ ಹಂಚಿಕೆ
ಜಿಯೋ ಪ್ಲಾಟ್‌ಫಾರ್ಮ್ಸ್ ಈ ಐಪಿಒ ಮೂಲಕ ಮಾರುಕಟ್ಟೆಗೆ ಒಟ್ಟು 27 ಕೋಟಿ ಹೊಸ ಈಕ್ವಿಟಿ ಷೇರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹಂಚಿಕೆಯಾಗಲಿರುವ ಈ ಪ್ರತಿಯೊಂದು ಹೊಸ ಷೇರಿನ ಮುಖಬೆಲೆಯನ್ನು (Face Value) 10 ರೂಪಾಯಿ ಎಂದು ನಿಗದಿಪಡಿಸಲಾಗಿದೆ ಎಂದು ನಿಯಂತ್ರಕ ದಾಖಲೆಗಳಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾರುಕಟ್ಟೆ ವಿಶ್ಲೇಷಕರ ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಜಿಯೋ ಐಪಿಒದ ಒಟ್ಟು ಮೌಲ್ಯ ಸುಮಾರು 37,000 ಕೋಟಿ ರೂಪಾಯಿಗಳಾಗಿರಲಿದೆ. ಒಂದು ವೇಳೆ ಈ ಅಂದಾಜು ನಿಜವಾದರೆ, ಇದು ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಐಪಿಒ ಆಗಿ ಹೊಸ ದಾಖಲೆ ಬರೆಯುವ ಸಾಧ್ಯತೆಯಿದೆ. ಆದರೆ, ಇದರ ಹೆಚ್ಚಿನ ಪಾಲು ಅಂದರೆ 25 ಸಾವಿರ ಕೋಟಿ ಸಾಲ ತೀರಿಸಲು ಹೋಗಲಿದೆ..
55
ಮಾರುಕಟ್ಟೆ ಹಾಗೂ ಹೂಡಿಕೆದಾರರ ಮೇಲೆ ಪರಿಣಾಮ
ಪ್ರಸ್ತುತ ಡಿಜಿಟಲ್ ಹಾಗೂ ಟೆಲಿಕಾಂ ವಲಯದಲ್ಲಿ ಜಿಯೋ ಹೊಂದಿರುವ ಬೃಹತ್ ಮಾರುಕಟ್ಟೆ ಪಾಲಿನ ಕಾರಣದಿಂದಾಗಿ, ಈ ಐಪಿಒ ಹೂಡಿಕೆದಾರರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸೆಬಿಯಿಂದ ಅಧಿಕೃತ ಅನುಮೋದನೆ ಸಿಕ್ಕ ತಕ್ಷಣವೇ ಐಪಿಒ ಆರಂಭದ ನಿಖರ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಕಂಪನಿ ತಿಳಿಸಿದ್ದು, ಇದು ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.