ಕೋಮು ರಾಜಕೀಯದಿಂದ ಕಂಗೆಟ್ಟಿದ್ದ ಮಂಗಳೂರು-ಉಡುಪಿ ವಲಯವು ಈಗ 'ಭಾರತದ ಸಿಲಿಕಾನ್ ಬೀಚ್' ಆಗಿ ರೂಪುಗೊಳ್ಳುತ್ತಿದೆ. ಸರ್ಕಾರದ 'ಬಿಯಾಂಡ್ ಬೆಂಗಳೂರು' ಯೋಜನೆ, ವರ್ಕ್ ಫ್ರಮ್ ಹೋಮ್ ಪರಿಣಾಮ ಮತ್ತು ಸ್ಥಳೀಯ ಉದ್ಯಮಶೀಲತೆಯಿಂದಾಗಿ ಐಟಿ ಆದಾಯ ಮತ್ತು ಉದ್ಯೋಗಾವಕಾಶಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.
ಮಂಗಳೂರು: ಹಿಂದೆ ಮಂಗಳೂರು ಮತ್ತು ಉಡುಪಿ ಭಾಗದ ಕಾಲೇಜುಗಳಿಂದ ಪದವಿ ಪಡೆದ ನೂರಾರು ಐಟಿ ವೃತ್ತಿಪರರು ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳತ್ತ ವಲಸೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. “ಭಾರತದ ಸಿಲಿಕಾನ್ ಬೀಚ್” ಎಂದು ಕರೆಯಲಾಗುತ್ತಿರುವ ಮಂಗಳೂರು–ಉಡುಪಿ ವಲಯದಲ್ಲೇ, ಮನೆ ಹತ್ತಿರವೇ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಕರಾವಳಿ ಕರ್ನಾಟಕ ಹೊಸ ತಂತ್ರಜ್ಞಾನ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
210
ಕೋಮು ರಾಜಕೀಯದ ನೆರಳು ದಾಟಿ ಆರ್ಥಿಕ ಪುನರುಜ್ಜೀವನ
ದ್ವೇಷದ ಹತ್ಯೆಗಳು, ಧಾರ್ಮಿಕ ಉದ್ವಿಗ್ನತೆ, ನೈತಿಕ ಪೊಲೀಸ್ ಗಿರಿ, ಚಳವಳಿ ಸೇರಿದಂತೆ ಹಲವು ಸವಾಲುಗಳೊಂದಿಗೆ ವರ್ಷಗಳ ಕಾಲ ಕೋಮು ರಾಜಕೀಯದ ಪ್ರಭಾವದಲ್ಲಿದ್ದ ಈ ಪ್ರದೇಶದ ಆರ್ಥಿಕತೆಗೆ ಇದೀಗ ಹೊಸ ಉಸಿರು ಸಿಕ್ಕಿದೆ. ಈ ಹಿಂದಿನ ಅಡೆತಡೆಗಳಿಂದ ವಿಚಲಿತರಾಗದೇ, ಉದ್ಯಮಿಗಳು, ಹೈ-ನೆಟ್‌ವರ್ತ್ ವ್ಯಕ್ತಿಗಳು (HNI), ಸ್ಟಾರ್ಟ್‌ಅಪ್ ಸಂಸ್ಥೆಗಳು ಮತ್ತು ವ್ಯಾಪಾರ ಸಮುದಾಯ ಒಟ್ಟಾಗಿ ಈ ಪ್ರದೇಶದ ಆರ್ಥಿಕ ಪ್ರಾಮುಖ್ಯತೆಯನ್ನು ಮರು ಸ್ಥಾಪಿಸಲು ಮುಂದಾಗಿವೆ.
310
ಐಟಿ ಆದಾಯದಲ್ಲಿ ಭಾರೀ ಏರಿಕೆ
ಕಳೆದ ಎರಡು ವರ್ಷಗಳಲ್ಲಿ ಮಂಗಳೂರು–ಉಡುಪಿ ವಲಯದ ಐಟಿ ಆದಾಯವು ಸುಮಾರು ₹3,200 ಕೋಟಿ ರೂ.ಗಳಿಂದ ₹5,000 ಕೋಟಿ ರೂ.ಗಳತ್ತ ವೇಗವಾಗಿ ಬೆಳೆಯುತ್ತಿದೆ. ಇದರಲ್ಲಿ ಅಂದಾಜು ₹3,000 ಕೋಟಿ ರೂ.ಗಳು ಐಟಿ ವೃತ್ತಿಪರರ ವೇತನ ರೂಪದಲ್ಲಿ ಸ್ಥಳೀಯ ಆರ್ಥಿಕತೆಗೆ ನೇರವಾಗಿ ಹರಿದುಬರುತ್ತಿವೆ. ಇದರಿಂದ ರಿಯಲ್ ಎಸ್ಟೇಟ್, ಸೇವಾ ಕ್ಷೇತ್ರ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ. ಐಟಿ ಸಮುದಾಯವು 2034ರ ವೇಳೆಗೆ ₹45,000 ಕೋಟಿ ರೂ.ಗಳ ಆದಾಯ ಗುರಿ ಹೊಂದಿದ್ದು, ಇದೇ ಅವಧಿಯಲ್ಲಿ ತಾಂತ್ರಿಕ ವೃತ್ತಿಪರರ ಸಂಖ್ಯೆಯನ್ನು 50,000ರಿಂದ 2 ಲಕ್ಷಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆ ಹೊಂದಿದೆ.
ಕಳೆದ ಮೂರು ವರ್ಷಗಳಲ್ಲಿ ಈ ಪ್ರದೇಶದ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಮೂರು ಕಂಪನಿಗಳನ್ನು ಜಾಗತಿಕ ನಿಗಮಗಳು ಸುಮಾರು $100 ಮಿಲಿಯನ್ ಮೌಲ್ಯದ ಒಪ್ಪಂದಗಳಲ್ಲಿ ಸ್ವಾಧೀನಪಡಿಸಿಕೊಂಡಿವೆ. ಇದು ಕರಾವಳಿ ಕರ್ನಾಟಕದಲ್ಲಿ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನದ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಸ್ಪಷ್ಟಪಡಿಸುತ್ತದೆ.
510
ಉದ್ಯಮಶೀಲತೆ ಮತ್ತು ಶಿಕ್ಷಣದ ಶ್ರೀಮಂತ ಪರಂಪರೆ
ಐತಿಹಾಸಿಕವಾಗಿ, ಮಂಗಳೂರು ಕೇಂದ್ರವಾಗಿರುವ ಇಂದಿನ ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ದಕ್ಷಿಣ ಕೆನರಾ ಜಿಲ್ಲೆಯಾಗಿತ್ತು. ಉದ್ಯಮಶೀಲತೆ ಮತ್ತು ಶಿಕ್ಷಣದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿರುವ ಊರಿದು ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದ ಬಲವಾದ ನೆಲೆಯನ್ನು ಕೂಡ ಹೊಂದಿದೆ. ಬ್ಯಾಂಕ್‌ಗಳ ಊರು ಎಂದರೂ ತಪ್ಪಿಲ್ಲ. ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಈ ಪ್ರದೇಶದಲ್ಲಿ ಪ್ರತಿ ವರ್ಷ ಸುಮಾರು 60,000 ಪದವೀಧರರು ಹೊರಬರುತ್ತಿದ್ದಾರೆ. ಇದರಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದ್ದಾರೆ.
610
ಇನ್ಫೋಸಿಸ್: ಬೆಳವಣಿಗೆಯ ಹೊಸ ಅಧ್ಯಾಯ
1990ರ ದಶಕದ ಆರಂಭದಿಂದಲೇ ಐಟಿ ದೈತ್ಯ Infosys ಮಂಗಳೂರಿನಲ್ಲಿ ಅಸ್ತಿತ್ವದಲ್ಲಿದ್ದರೂ, ಆಗ ಬೆಂಗಳೂರಿನಂತೆ ಬೆಳವಣಿಗೆ ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಬೆಂಗಳೂರಿನ ಚೈತನ್ಯಮಯ ಐಟಿ ವಾತಾವರಣ, ರಾತ್ರಿಜೀವನ ಮತ್ತು ಅವಕಾಶಗಳ ಆಕರ್ಷಣೆ ಮಂಗಳೂರಿನಲ್ಲಿ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಇನ್ಫೋಸಿಸ್ ಮಂಗಳೂರಿನಲ್ಲಿ ಸುಮಾರು 5,000 ಉದ್ಯೋಗಿಗಳನ್ನು ಹೊಂದಿದ್ದು, 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಂಟುಕ್ಕಿಂತ ಹೆಚ್ಚು ಐಟಿ ಕಂಪನಿಗಳು ಈ ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ.
710
‘ಬಿಯಾಂಡ್ ಬೆಂಗಳೂರು’ ಯೋಜನೆಯ ಫಲ
ಬೆಂಗಳೂರು ಸಂಚಾರ ದಟ್ಟಣೆ ಮತ್ತು ದುಬಾರಿ ಜೀವನ ಶೈಲಿಯಿಂದ ಬೇಸತ್ತ ಐಟಿ ಉದ್ಯೋಗಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಈಗ ಕರಾವಳಿ ಕರ್ನಾಟಕದತ್ತ ಮುಖ ಮಾಡುತ್ತಿವೆ. ಕರ್ನಾಟಕ ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಮಂಗಳೂರು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಐಟಿ ಪಾರ್ಕ್ ನಿರ್ಮಾಣಕ್ಕೆ ಸಬ್ಸಿಡಿ, ಬಾಡಿಗೆ ರಿಯಾಯಿತಿ ಸೇರಿದಂತೆ ಹಲವು ಪ್ರೋತ್ಸಾಹಕ ಕ್ರಮಗಳು ಕಂಪನಿಗಳನ್ನು ಆಕರ್ಷಿಸುತ್ತಿವೆ. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳೂರನ್ನು ಮುಂದಿನ ಪ್ರಮುಖ ಟೆಕ್ ಹಬ್ ಎಂದು ಗುರುತಿಸಿ ಉತ್ತೇಜನ ನೀಡುತ್ತಿದ್ದಾರೆ.
810
ವರ್ಕ್ ಫ್ರಮ್ ಹೋಮ್ ಪರಿಣಾಮ
ಕೋವಿಡ್ ಅವಧಿಯಲ್ಲಿ ಮಂಗಳೂರು–ಉಡುಪಿ ಭಾಗದ ಸುಮಾರು 1 ರಿಂದ 1.5 ಲಕ್ಷ ಐಟಿ ವೃತ್ತಿಪರರು ತಮ್ಮ ಊರುಗಳಿಗೆ ಮರಳಿದ್ದರು. ಶಾಂತಿಯುತ ವಾತಾವರಣ, ಉತ್ತಮ ಜೀವನ ಗುಣಮಟ್ಟ ಮತ್ತು ಕುಟುಂಬದ ಹತ್ತಿರ ಇರುವ ಅವಕಾಶದಿಂದ ಅನೇಕರು ಇಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಕಂಪನಿಗಳು ಮತ್ತೆ ಬೆಂಗಳೂರಿಗೆ ಕರೆಯುತ್ತಿದ್ದರೂ, ಹಲವರು ಮಂಗಳೂರಿನಲ್ಲೇ ಉದ್ಯೋಗ ಆಯ್ಕೆ ಮಾಡುತ್ತಿದ್ದಾರೆ. ಮಾತ್ರವಲ್ಲ ಕೆಲವರು ಕೆಲಸ ಬದಲಿಸಿ ಮಂಗಳೂರಿನಲ್ಲೇ ಕೆಲಸ ಹುಡುಕುತ್ತಿದ್ದಾರೆ.
910
ಉದ್ಯೋಗಾವಕಾಶಗಳ ದ್ವಿಗುಣ ಏರಿಕೆ
ಬೆಂಗಳೂರು ಹೋಲಿಸಿದರೆ ಮಂಗಳೂರಿನಲ್ಲಿ ನಿರ್ವಹಣಾ ವೆಚ್ಚ ಕಡಿಮೆ ಇರುವುದರಿಂದ, ಕಳೆದ ಎರಡು ವರ್ಷಗಳಲ್ಲಿ 40ಕ್ಕೂ ಹೆಚ್ಚು ಐಟಿ ಕಂಪನಿಗಳು ಇಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಇದರ ಪರಿಣಾಮವಾಗಿ, 2023ರಲ್ಲಿ ಸುಮಾರು 15,000 ಇದ್ದ ಐಟಿ ಉದ್ಯೋಗಿಗಳ ಸಂಖ್ಯೆ ಇಂದು 30,000ಕ್ಕೆ ಏರಿಕೆಯಾಗಿದೆ. 2035ರ ವೇಳೆಗೆ ಮಂಗಳೂರು ಸಂಪೂರ್ಣವಾಗಿ ರೂಪಾಂತರಗೊಂಡು, ರಾಜ್ಯದ ಎರಡನೇ ಅತಿ ದೊಡ್ಡ ಐಟಿ ಹಬ್ ಆಗಿ ಮತ್ತು ಐಟಿ ವೃತ್ತಿಪರರ ನೆಚ್ಚಿನ ತಾಣವಾಗಿ ಹೊರಹೊಮ್ಮಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
1010
ಕೇರಳದ ವೃತ್ತಿಪರರಿಗೂ ಆಕರ್ಷಕ ತಾಣ
ಮಂಗಳೂರು ಮತ್ತು ಕೇರಳದ ನಡುವಿನ ಸಾಂಸ್ಕೃತಿಕ ಸಾಮ್ಯತೆ, ರಸ್ತೆ ಹಾಗೂ ರೈಲು ಸಂಪರ್ಕದ ಸುಲಭತೆ ನೆರೆಯ ರಾಜ್ಯದ ವೃತ್ತಿಪರರನ್ನೂ ಆಕರ್ಷಿಸುತ್ತಿದೆ. ಹೀಗಾಗಿ ಬೆಂಗಳೂರು ಬದಲು ಮಂಗಳೂರು, ಕೇರಳ ಮೂಲದ ಐಟಿ ವೃತ್ತಿಪರರಿಗೂ ಮೆಚ್ಚಿನ ಆಯ್ಕೆಯಾಗುತ್ತಿದೆ. ಒಟ್ಟಾರೆ, ಮಂಗಳೂರು–ಉಡುಪಿ ವಲಯವು ಐಟಿ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದು, ಕರಾವಳಿ ಕರ್ನಾಟಕದ ಆರ್ಥಿಕ ಭವಿಷ್ಯಕ್ಕೆ ದಿಟ್ಟ ಆಶಾಕಿರಣವಾಗಿ ಕಾಣುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.