ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿರೋದರಿಂದ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ ತಾಗಲಿದೆ. ಆಮದು ವೆಚ್ಚಗಳು ಹೆಚ್ಚಾದ ಹಿನ್ನೆಲೆ ಬೆಲೆ ಏರಿಕೆ ಅನಿವಾರ್ಯ ಎಂದು ಉತ್ಪಾದಕರು ಮಾಹಿತಿ ನೀಡಿದ್ದಾರೆ.
ನವದೆಹಲಿ: ಜಿಎಸ್‌ಟಿ ಕಡಿತದ ಖುಷಿಯಲ್ಲಿ ಮುಂದಿನ ತಿಂಗಳಲ್ಲಿ ಟೀವಿ ಖರೀದಿಸುವ ಯೋಚನೆಯಿದ್ದರೆ ನಿಮ್ಮ ಕಿಸೆಗೆ ದರ ಏರಿಕೆ ಬಿಸಿ ತಟ್ಟುವುದು ಖಚಿತ. ಏಕೆಂದರೆ ಜನವರಿಯಿಂದ ಎಲ್‌ಇಡಿ ಟೀವಿ ದರ ಶೇ.3ರಿಂದ 4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
25
ದರ ಏರಿಕೆ ಅನಿವಾರ್ಯ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್‌ಗಳ ಕೊರತೆ, ಚಿಪ್ ಬೆಲೆ ಹೆಚ್ಚಳ ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ ಟೀವಿ ದರ ಏರಿಕೆ ಅನಿವಾರ್ಯ ಎಂದು ಉತ್ಪಾದಕರು ತಿಳಿಸಿದ್ದಾರೆ.
35
ಬಿಡಿಭಾಗಗಳ ಆಮದು ದುಬಾರಿ
ದೇಶದಲ್ಲಿ ಉತ್ಪಾದನೆಯಾಗುವ ಎಲ್‌ಇಡಿ ಟೀವಿಗಳಲ್ಲಿ ಶೇ.30ರಷ್ಟು ಭಾಗ ಮಾತ್ರ ಮೇಡ್ ಇನ್ ಇಂಡಿಯಾದ್ದು. ಓಪನ್ ಸೆಲ್, ಸೆಮಿಕಂಡಕ್ಟರ್ ಚಿಪ್‌ಗಳು ಹಾಗೂ ಮದರ್ ಬೋರ್ಡ್‌ಗಳನ್ನು ವಿದೇಶಗಳಿಂದಲೇ ತರಿಸಿಕೊಳ್ಳಲಾಗುತ್ತದೆ. ರುಪಾಯಿ ಮೌಲ್ಯ ಕುಸಿತದಿಂದಾಗಿ ಬಿಡಿಭಾಗಗಳ ಆಮದು ದುಬಾರಿಯಾಗುತ್ತಿದೆ.
ಈ ನಡುವೆ, ಕಳೆದ ಮೂರ್ನಾಲ್ಕು ತಿಂಗಳಿಂದ ಎಐ ಸರ್ವರ್‌ಗಳಿಗೆ ಹೈಬ್ಯಾಂಡ್‌ವಿಡ್ತ್ ಮೆಮೊರಿ (ಎಚ್‌ಬಿಎಂ) ಚಿಪ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಪೂರೈಕೆ ಅಷ್ಟಿಲ್ಲ. ಹೀಗಾಗಿ ಡಿಆರ್‌ಎಎಂ, ಫ್ಲಾಶ್ ಸೇರಿ ಎಲ್ಲ ಮೆಮೊರಿ ಚಿಪ್‌ಗಳ ದರ ಹೆಚ್ಚಾಗಿದೆ. ಇದರಿಂದ ಚಿಪ್ ಉತ್ಪಾದಕರು ಲಾಭದಾಯಕವಾದ ಎಐ ಚಿಪ್‌ಗಳಿಗೆ ಆದ್ಯತೆ ನೀಡಲು ಆರಂಭಿಸಿದ ಹಿನ್ನೆಲೆಯಲ್ಲಿ ಟೀವಿಯಂಥ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದಕರಿಗೆ ಸಮಸ್ಯೆ ಸೃಷ್ಟಿಸಿದೆ.
ಹಯರ್ ಅಪ್ಲಯನ್ಸಸ್ ಇಂಡಿಯಾ ಅಧ್ಯಕ್ಷ ಎನ್.ಎಸ್. ಸತೀಶ್ ಅವರು ಎಲ್‌ಇಡಿ ಟೀವಿ ದರ ಹೆಚ್ಚಳವನ್ನು ಖಚಿತಪಡಿಸಿದ್ದಾರೆ. ಕೆಲ ಟೀವಿ ಉತ್ಪಾದಕರು ಡೀಲರ್‌ಗಳಿಗೆ ಈ ಕುರಿತು ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಮುಖ ಟೀವಿ ಉತ್ಪಾದಕ ಕಂಪನಿಯಾದ ಸೂಪರ್ ಪ್ಲಾಸ್ಟ್ರಾನಿಕ್ಸ್ ಪ್ರೈ ವಿ. ಕೂಡ ಕಳೆದ ಮೂರು ತಿಂಗಳಲ್ಲಿ ಚಿಪ್‌ಗಳ ದರ ಶೇ.500ರಷ್ಟು ಹೆಚ್ಚಾಗಿದ್ದು, ಜನವರಿಯಿಂದ ಟೀವಿ ದರ ಶೇ.7ರಿಂದ 10ರಷ್ಟು ಹೆಚ್ಚಳ ಮಾಡುವ ಸ್ಥಿತಿ ಇದೆ ಎಂದು ತಿಳಿಸಿದೆ.