2026ರಲ್ಲಿ ಚಿನ್ನದ ಬೆಲೆ ತೀವ್ರ ಏರಿಳಿತ, ಕಾರಣ ಬಿಚ್ಚಿಟ್ಟು ಹೂಡಿಕೆದಾರರಿಗೆ ಎಚ್ಚರಿಕೆ ಕೊಟ್ಟ ಪ್ರಮುಖ ಸಂಸ್ಥೆ!

Published : Dec 14, 2025, 07:35 PM IST

ಜಾಗತಿಕ ಅನಿಶ್ಚಿತತೆಯಿಂದಾಗಿ ಲೋಹದ ಬೆಲೆ ಏರಿಕೆ 2026ರವರೆಗೂ ಮುಂದುವರೆಯಲಿದೆ. ಸುರಕ್ಷಿತ ಹೂಡಿಕೆ ಬೇಡಿಕೆ ಚಿನ್ನಕ್ಕೆ ಬಲ ನೀಡಿದರೆ, ಕೈಗಾರಿಕಾ ಬೇಡಿಕೆ ಬೆಳ್ಳಿಯ ಬೆಲೆ ಹೆಚ್ಚಿಸಲಿದೆ. ಆದ್ರೂ ಹೂಡಿಕೆದಾರರು ಸಂಭಾವ್ಯ ಅಪಾಯಗಳು ಮತ್ತು ಬೆಲೆ ಚಂಚಲತೆಯ ಬಗ್ಗೆ ಎಚ್ಚರದಿಂದಿರಬೇಕೆಂದು ವರದಿ ಸೂಚಿಸುತ್ತದೆ.

PREV
16
ಜಾಗತಿಕ ಅನಿಶ್ಚಿತತೆಯ ನಡುವೆ ಅಮೂಲ್ಯ ಲೋಹಗಳ ರ್ಯಾಲಿ

ಭಾರತದ ಅಮೂಲ್ಯ ಲೋಹಗಳ ಮಾರುಕಟ್ಟೆ ಮತ್ತೊಂದು ಸಂಚಲನಾತ್ಮಕ ವರ್ಷದತ್ತ ಕಾಲಿಡುತ್ತಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಸವಾಲುಗಳಿಂದ ಕೂಡಿರುವ ನಡುವೆಯೂ, ಚಿನ್ನ ಮತ್ತು ಬೆಳ್ಳಿ ಎರಡೂ 2026ರವರೆಗೆ ತಮ್ಮ ಏರಿಕೆಯ ಹಾದಿಯನ್ನು ಮುಂದುವರಿಸಬಹುದೆಂದು ಹೊಸ ವರದಿ ಬಹಿರಂಪಡಿಸಿದೆ. 2025ರಲ್ಲಿ ಕಂಡುಬಂದ ಅಪರೂಪದ ಬೆಲೆ ಏರಿಕೆ ಬಳಿಕವೂ ಅಮೂಲ್ಯ ಲೋಹಗಳ ಮೇಲಿನ ಹೂಡಿಕೆದಾರರ ವಿಶ್ವಾಸ ಕಡಿಮೆಯಾಗಿಲ್ಲ ಎಂಬುದೇ ಇದಕ್ಕೆ ಪ್ರಮುಖ ಕಾರಣ.

26
2025ರಲ್ಲಿ ಚಿನ್ನದ ಅಬ್ಬರದ ಓಟ

2025ರ ಅವಧಿಯಲ್ಲಿ ಚಿನ್ನದ ಬೆಲೆಗಳು ದಾಖಲೆ ಮಟ್ಟದ ಏರಿಕೆಯನ್ನು ಕಂಡಿವೆ. ವರ್ಷಾರಂಭದಿಂದ ಇದುವರೆಗೆ ಚಿನ್ನವು ಸುಮಾರು ಶೇಕಡಾ 60ರಷ್ಟು ಏರಿಕೆಯಾಗಿದೆ. ಆಕ್ಸಿಸ್ ಮ್ಯೂಚುಯಲ್ ಫಂಡ್‌ನ ವಿಶ್ಲೇಷಕರ ಪ್ರಕಾರ, ಈ ಏರಿಕೆಗೆ ಹಲವು ಕಾರಣಗಳಿದ್ದು, ಮುಖ್ಯವಾಗಿ ಜಾಗತಿಕ ರಾಜಕೀಯ ಅನಿಶ್ಚಿತತೆ, ಯುದ್ಧ ಪರಿಸ್ಥಿತಿಗಳು, ಹಣಕಾಸು ಮಾರುಕಟ್ಟೆಯ ಅಸ್ಥಿರತೆ ಮತ್ತು ಸುರಕ್ಷಿತ ಹೂಡಿಕೆ ತಾಣಗಳ ಮೇಲಿನ ಹೆಚ್ಚಿದ ಬೇಡಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕೇಂದ್ರ ಬ್ಯಾಂಕ್‌ಗಳ ನಿರಂತರ ಚಿನ್ನ ಖರೀದಿ, ದುರ್ಬಲ ಆರ್ಥಿಕ ಬೆಳವಣಿಗೆ ಇರುವ ಪ್ರದೇಶಗಳಲ್ಲಿ ಚಿನ್ನವನ್ನು ಸುರಕ್ಷಿತ ಆಸ್ತಿಯೆಂದು ಪರಿಗಣಿಸುವ ಪ್ರವೃತ್ತಿ ಹಾಗೂ ಹೂಡಿಕೆದಾರರ ಅಪಾಯ ತಪ್ಪಿಸುವ ಮನಸ್ಥಿತಿ ಚಿನ್ನದ ಬೆಲೆಗಳನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಮುಖ ಕಾರಣವಾಗಿದೆ.

36
2026ರಲ್ಲಿ ಚಿನ್ನ ಏಕೆ ಹೆಚ್ಚಬಹುದು?

ಆಕ್ಸಿಸ್ ಮ್ಯೂಚುಯಲ್ ಫಂಡ್ ವರದಿಯ ಪ್ರಕಾರ, 2025ರಲ್ಲಿ ಚಿನ್ನವನ್ನು ಬೆಂಬಲಿಸಿದ ಬಹುತೇಕ ಅಂಶಗಳು 2026ರಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಜಾಗತಿಕ ರಾಜಕೀಯ ಅಸ್ಥಿರತೆ, ಪ್ರಾದೇಶಿಕ ಸಂಘರ್ಷಗಳು ಮತ್ತು ಸಮತೋಲನವಿಲ್ಲದ ಜಾಗತಿಕ ಆರ್ಥಿಕ ಬೆಳವಣಿಗೆ ಸುರಕ್ಷಿತ ಹೂಡಿಕೆಗಳ ಬೇಡಿಕೆಯನ್ನು ಜೀವಂತವಾಗಿಯೇ ಇಡಲಿದೆ. ಇದೆಲ್ಲದರ ಜೊತೆಗೆ, ಚಿಲ್ಲರೆ ಹೂಡಿಕೆದಾರರ ಆಸಕ್ತಿಯೂ ಚಿನ್ನದ ಬೆಲೆಗೆ ಬಲ ನೀಡುತ್ತಿದೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ತಲಾ 300 ಟನ್‌ಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನದ ಬಾರ್ ಮತ್ತು ನಾಣ್ಯಗಳ ಖರೀದಿ ನಡೆದಿರುವುದು, ಚಿನ್ನದ ಮೇಲಿನ ನಂಬಿಕೆಯನ್ನು ಸ್ಪಷ್ಟಪಡಿಸುತ್ತದೆ.

46
ಅಪಾಯಗಳೂ ಕೂಡ ಇವೆ!

ಸಕಾರಾತ್ಮಕ ಹಿನ್ನೆಲೆಯ ನಡುವೆಯೂ, ಚಿನ್ನದ ಬೆಲೆಗೆ ತಾತ್ಕಾಲಿಕ ಹಿನ್ನಡೆ ಉಂಟು ಮಾಡಬಹುದಾದ ಕೆಲವು ಅಂಶಗಳನ್ನು ವರದಿ ಗುರುತಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ:

  • ಅಮೆರಿಕನ್ ಡಾಲರ್ ಬಲವಾಗಿರುವುದು
  • ನಿಜವಾದ ಬಡ್ಡಿದರಗಳಲ್ಲಿ ಏರಿಕೆ
  • ಜಾಗತಿಕ ಆರ್ಥಿಕ ಬೆಳವಣಿಗೆ ಸ್ಥಿರವಾಗಿರುವುದರಿಂದ ಸುರಕ್ಷಿತ ತಾಣಗಳ ಮೇಲಿನ ಅವಲಂಬನೆ ಕಡಿಮೆಯಾಗುವುದು
  • ಅಮೆರಿಕದ ಕೇಂದ್ರ ಬ್ಯಾಂಕ್‌ಗಳ ಹೆಚ್ಚು ಕಠಿಣ ನೀತಿ ನಿಲುವು

ಈ ಅಂಶಗಳು ಚಿನ್ನದ ಬೆಲೆಯಲ್ಲಿ ತಾತ್ಕಾಲಿಕ ತಿದ್ದುಪಡಿ ಮತ್ತು ಚಂಚಲತೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಆದರೂ, ದೀರ್ಘಾವಧಿಯಲ್ಲಿ ಚಿನ್ನದ ಪ್ರವೃತ್ತಿ ಇನ್ನೂ ಸಕಾರಾತ್ಮಕವಾಗಿಯೇ ಉಳಿಯಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

56
ಬೆಳ್ಳಿಗೂ ಉತ್ತಮ ಅವಕಾಶ, ಆದರೆ ಎಚ್ಚರಿಕೆ ಅಗತ್ಯ

ಚಿನ್ನದ ಜೊತೆಗೆ ಬೆಳ್ಳಿಯೂ ಮುಂದಿನ ವರ್ಷಗಳಲ್ಲಿ ಲಾಭ ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ ಬೆಳ್ಳಿ ಪ್ರತಿ ಔನ್ಸ್‌ಗೆ ಸುಮಾರು 58 ಡಾಲರ್ ಮಟ್ಟದಲ್ಲಿ ವ್ಯಾಪಾರವಾಗುತ್ತಿದ್ದು, 2026ರಲ್ಲಿ ಕೈಗಾರಿಕಾ ಬೇಡಿಕೆ ಇದಕ್ಕೆ ಪ್ರಮುಖ ಬೆಂಬಲವಾಗಲಿದೆ ಎಂದು ವರದಿ ತಿಳಿಸಿದೆ. ವಿಶೇಷವಾಗಿ ಸೌರಶಕ್ತಿ ಘಟಕಗಳು, ವಿದ್ಯುತ್ ವಾಹನಗಳು, ಎಲೆಕ್ಟ್ರಾನಿಕ್ಸ್ ಮತ್ತು ಇತರೆ ತಂತ್ರಜ್ಞಾನ ವಲಯಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚುತ್ತಿರುವುದು ಅದರ ಬೇಡಿಕೆಯನ್ನು ಹೆಚ್ಚಿಸಲಿದೆ. ಆದರೆ, ಇತ್ತೀಚಿನ ತೀಕ್ಷ್ಣ ಏರಿಕೆ ಬೆಳ್ಳಿಯ ಮೌಲ್ಯಮಾಪನದ ಕುರಿತು ಚಿಂತೆ ಮಾಡುವಂತೆ ಮಾಡಿದೆ.

66
ಬೆಳ್ಳಿಗೆ ಎದುರಾಗಬಹುದಾದ ಅಪಾಯಗಳು

ವಿಶ್ಲೇಷಕರ ಪ್ರಕಾರ, ಬೆಳ್ಳಿಯ ಬೆಲೆಗಳು ಹೆಚ್ಚು ವಿಸ್ತರಿಸಿಕೊಂಡಿರುವುದರಿಂದ ಲಾಭ ಗಳಿಕೆ (ಪ್ರಾಫಿಟ್ ಬುಕ್ಕಿಂಗ್) ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ETFಗಳಿಂದ ಹಣ ಹೊರಹರಿಯುವ ಸಂಭವವಿದೆ. ಇದಲ್ಲದೆ, ತಾಮ್ರದ ಬೆಲೆಗಳು ದುರ್ಬಲಗೊಂಡರೆ, ಅದು ಬೆಳ್ಳಿಯ ಪೂರೈಕೆಯ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆಯಿದೆ. ಗಮನಾರ್ಹವಾಗಿ, ಜಗತ್ತಿನ ಬಹುತೇಕ ಬೆಳ್ಳಿ ತಾಮ್ರ, ಸೀಸ ಮತ್ತು ಸತು ಗಣಿಗಾರಿಕೆಯ ಉಪ-ಉತ್ಪನ್ನವಾಗಿ ಉತ್ಪಾದನೆಯಾಗುತ್ತದೆ. ಪೂರೈಕೆ ಬೆಲೆ ಬದಲಾವಣೆಗಳಿಗೆ ಹೆಚ್ಚು ಸ್ಪಂದಿಸದಿರುವುದರಿಂದ, ಬೇಡಿಕೆಯಲ್ಲಿನ ಯಾವುದೇ ಕುಸಿತವು ಬೆಳ್ಳಿಯ ಬೆಲೆಯಲ್ಲಿ ತೀವ್ರ ಏರಿಳಿತಗಳಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.

ಒಟ್ಟಾರೆಯಾಗಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆಯ ನಡುವೆಯೂ ಚಿನ್ನ ಮತ್ತು ಬೆಳ್ಳಿ ಎರಡೂ 2026ರವರೆಗೆ ಹೂಡಿಕೆದಾರರಿಗೆ ಅವಕಾಶಗಳನ್ನು ನೀಡುವ ಸಾಧ್ಯತೆ ಇದೆ. ಆದರೆ ಬೆಲೆಗಳಲ್ಲಿನ ತೀಕ್ಷ್ಣ ಏರಿಳಿತ ಮತ್ತು ಅಲ್ಪಾವಧಿಯ ತಿದ್ದುಪಡಿಗಳನ್ನು ಗಮನದಲ್ಲಿಟ್ಟುಕೊಂಡು ಜಾಣ್ಮೆಯ ಹೂಡಿಕೆ ಅಗತ್ಯವಾಗಿದೆ ಎಂಬ ಸಂದೇಶವನ್ನು ಈ ವರದಿ ನೀಡುತ್ತದೆ.

Read more Photos on
click me!

Recommended Stories