ಗುಲಾಬ್ ಜಾಮೂನ್ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ಮಾಡುವಾಗ ಜಾಮೂನ್ ಎಣ್ಣೆಯಲ್ಲಿ ಒಡೆದುಹೋಗುವುದು, ಗಟ್ಟಿಯಾಗುವುದು ಅಥವಾ ಮಧ್ಯದಲ್ಲಿ ಗಂಟು ಉಳಿದುಕೊಳ್ಳುವುದು ಸಾಮಾನ್ಯ ಸಮಸ್ಯೆ. ಇನ್ನುಮುಂದೆ ಆ ತಲೆನೋವೇ ಬೇಡ! ಇಲ್ಲಿ ಹೇಳಿರುವ ಅಳತೆ ಮತ್ತು ಸೀಕ್ರೆಟ್ ಟಿಪ್ಸ್ ಬಳಸಿ ಮಾಡಿದ್ರೆ ಜಾಮೂನ್ ಹತ್ತಿಯಂತೆ ಸಾಫ್ಟ್ ಆಗಿ, ಸ್ವರ್ಗದ ಅನುಭವ ನೀಡುತ್ತೆ. ಆ ಸೀಕ್ರೆಟ್ ರೆಸಿಪಿ ಇಲ್ಲಿದೆ ನೋಡಿ.
ಕೋವ (ಖೋವಾ): 200 ಗ್ರಾಂ
ಮೈದಾ ಹಿಟ್ಟು: 100 ಗ್ರಾಂ (ಕೋವಾದ ಅರ್ಧದಷ್ಟು ಪ್ರಮಾಣ)
ತುಪ್ಪ: 1 ಚಮಚ (ಹಿಟ್ಟಿಗೆ) + 2 ಚಮಚ (ಪಾಕಕ್ಕೆ)
ಅಡುಗೆ ಸೋಡಾ: ಕೇವಲ 1 ಚಿಟಿಕೆ
ಸಕ್ಕರೆ: ಮುಕ್ಕಾಲು ಕೆಜಿ (ಅಥವಾ 3 ಕಪ್)
ನೀರು: ಮುಕ್ಕಾಲು ಲೀಟರ್ (ಸಕ್ಕರೆಗೆ ಸಮನಾದ ಪ್ರಮಾಣ)
ಹಾಲು: 25 ಎಂಎಲ್ (ಪಾಕದ ಕೊಳೆ ತೆಗೆಯಲು)
ನಿಂಬೆಹಣ್ಣು: ಅರ್ಧ ಹೋಳು
ಗುಲಾಬಿ ದಳಗಳು: ಸ್ವಲ್ಪ (ನೈಸರ್ಗಿಕ ಸುವಾಸನೆಗೆ)
ಎಣ್ಣೆ: ಕರಿಯಲು ಸಾಕಷ್ಟು ಪ್ರಮಾಣ
ಸ್ಫಟಿಕದಂತಹ ಸಕ್ಕರೆ ಪಾಕ (ಕ್ಯಾಟರರ್ ಸೀಕ್ರೆಟ್)
ಪಾತ್ರೆಗೆ ಸಕ್ಕರೆ ಮತ್ತು ಸಮಪ್ರಮಾಣದ ನೀರು ಹಾಕಿ ಕುದಿಸಿ. ನೀರು ಕುದಿಯುವಾಗ 25 ಎಂಎಲ್ ಹಾಲು ಹಾಕಿ. ಹಾಲು ಒಡೆದು ಪನ್ನೀರ್ ರೀತಿಯಾಗಿ ಸಕ್ಕರೆಯಲ್ಲಿರುವ ಸಂಪೂರ್ಣ ಕೊಳೆ ಮತ್ತು ಕಸವನ್ನು ಮೇಲೆ ತರುತ್ತದೆ. ಆ ಮಡ್ಡಿಯನ್ನು ತೆಗೆದು, ಅರ್ಧ ಹೋಳು ನಿಂಬೆರಸ ಹಿಂಡಿದರೆ ಪಾಕ ಹರಳುಗಟ್ಟದೆ, ಗ್ಲಾಸ್‌ನಂತೆ ಕ್ಲಿಯರ್ ಆಗಿರುತ್ತದೆ.
ಹಿಟ್ಟು ಕಲಸಿ
ಕೋವಾವನ್ನು ತಟ್ಟೆಯಲ್ಲಿ ಗಂಟಿಲ್ಲದಂತೆ ಚೆನ್ನಾಗಿ ಮಸೆದುಕೊಳ್ಳಿ. ನಂತರ ಮೈದಾ, 1 ಚಿಟಿಕೆ ಸೋಡಾ ಮತ್ತು 1 ಚಮಚ ಕಾಯಿಸಿದ ತುಪ್ಪ ಸೇರಿಸಿ ಬೆರೆಸಿ. ಸ್ವಲ್ಪವೇ ನೀರನ್ನು ಚುಮುಕಿಸುತ್ತಾ ಮೃದುವಾಗಿ ಹಿಟ್ಟು ಕಲಸಿ 5 ನಿಮಿಷ ಮುಚ್ಚಿಡಿ.
ಬಿರುಕಿಲ್ಲದಂತೆ ಉಂಡೆ ಕಟ್ಟಿ
ಹಿಟ್ಟನ್ನು ಮೊದಲು ಅಂಗೈಯಲ್ಲಿ ಇಟ್ಟು ಗಟ್ಟಿಯಾಗಿ ಅದುಮಿ (ಪ್ರೆಸ್ ಮಾಡಿ), ನಂತರ ನುಣುಪಾಗಿ ದುಂಡಗೆ ಉಂಡೆ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಎಣ್ಣೆಗೆ ಹಾಕಿದಾಗ ಬಿರುಕು ಬಿಡುವುದಿಲ್ಲ.
ಎಣ್ಣೆಯಲ್ಲಿ ಕರಿಯುವ ವಿಧಾನ (ಅತಿ ಮುಖ್ಯ)
ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ, ಉರಿಯನ್ನು ಪೂರ್ತಿ ಕಡಿಮೆ (ಸಿಮ್) ಇಟ್ಟುಕೊಳ್ಳಿ. ಜಾಮೂನ್ ಹಾಕಿ ಸೌಟಿನಿಂದ ಎಣ್ಣೆಯನ್ನು ನಿರಂತರವಾಗಿ ಸುತ್ತಲೂ ತಿರುಗಿಸುತ್ತಿರಬೇಕು. ಇದರಿಂದ ಜಾಮೂನ್ ರೋಲ್ ಆಗಿ ಎಲ್ಲಾ ಕಡೆ ಏಕರೂಪದ ಗೋಲ್ಡನ್ ಬ್ರೌನ್ ಬಣ್ಣ ಬರುತ್ತದೆ ಮತ್ತು ಒಳಗಿನವರೆಗೂ ಚೆನ್ನಾಗಿ ಬೇಯುತ್ತದೆ.
ಪಾಕದಲ್ಲಿ ನೆನೆಸಿ
ಕರಿದ ಬಿಸಿಬಿಸಿ ಜಾಮೂನ್‌ಗಳನ್ನು ಟಿಶ್ಯೂ ಪೇಪರ್ ಮೇಲೆ ತೆಗೆದು, ನೇರವಾಗಿ ಬಿಸಿ ಸಕ್ಕರೆ ಪಾಕಕ್ಕೆ ಹಾಕಿ. ಮೇಲೆ ಗುಲಾಬಿ ದಳಗಳು ಮತ್ತು 2 ಚಮಚ ತುಪ್ಪ ಸೇರಿಸಿ ಮುಚ್ಚಿಡಿ. ಅರ್ಧ ಗಂಟೆಯಲ್ಲಿ ರಸಭರಿತ ಜಾಮೂನ್ ಸವಿಯಲು ಸಿದ್ಧ!
ಗಂಟು ನಿಲ್ಲದಿರಲು: ಹಿಟ್ಟಿಗೆ 1 ಚಮಚ ತುಪ್ಪ ಹಾಕುವುದರಿಂದ ಜಾಮೂನ್ ಮಧ್ಯೆ ಹಿಟ್ಟಿನ ಗಂಟು ನಿಲ್ಲುವುದಿಲ್ಲ.
ಸಾಫ್ಟ್ ಆಗಿ ಉಬ್ಬಲು: ಕೇವಲ 1 ಚಿಟಿಕೆ ಸೋಡಾ ಸಾಕು. ಹೆಚ್ಚು ಹಾಕಿದರೆ ಜಾಮೂನ್ ಎಣ್ಣೆಯಲ್ಲಿ ಒಡೆದು ಕರಗಿಹೋಗುತ್ತದೆ.
ಸದಾ ತಿರುಗಿಸುತ್ತಿರಿ: ಕರಿಯುವಾಗ ಜಾಮೂನ್ ಅನ್ನು ಎಣ್ಣೆಯಲ್ಲಿ ಬಿಡದೆ ತಿರುಗಿಸುತ್ತಿದ್ದರೆ ಮಾತ್ರ ಎಲ್ಲಾ ಕಡೆ ಒಂದೇ ಕಲರ್ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.