ಬೆಂಗಳೂರಲ್ಲಿ Boycott Swiggy..! ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಕಾರಣವೇನು?

Published : Aug 02, 2026, 02:49 PM IST
Swiggy

ಸಾರಾಂಶ

ಸಿಲಿಕಾನ್ ಸಿಟಿಯ ಹೋಟೆಲ್ ಉದ್ಯಮಿಗಳು ಹಾಗೂ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ವೇದಿಕೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಹೋಟೆಲ್ ಉದ್ಯಮಿಗಳು ಹಾಗೂ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ವೇದಿಕೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಬಹಿಷ್ಕಾರದ ನಿರ್ಧಾರಕ್ಕೆ ಕಾರಣವೇನು?

ಹೋಟೆಲ್ ಮಾಲೀಕರ ಪ್ರಕಾರ ಸ್ವಿಗ್ಗಿ ವಿಧಿಸುತ್ತಿರುವ ಅತಿಯಾದ ಕಮಿಷನ್, ಭಾರೀ ರಿಯಾಯಿತಿಗಳು (Deep Discounts) ಮತ್ತು ಅನಗತ್ಯ ಕಡಿತಗಳಿಂದಾಗಿ ರೆಸ್ಟೋರೆಂಟ್‌ಗಳ ಲಾಭಾಂಶ ಸಂಪೂರ್ಣ ಕುಸಿದಿದೆ. ಈ ಅಸೈಂಟಿಫಿಕ್ (ಅವೈಜ್ಞಾನಿಕ) ವ್ಯವಸ್ಥೆಯಿಂದ ಹೋಟೆಲ್ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಅವರು ದೂರಿದ್ದಾರೆ.

ಹೋಟೆಲ್ ಮಾಲೀಕರ ಪ್ರಮುಖ ಬೇಡಿಕೆಗಳು

  • ಹೋಟೆಲ್ ಮಾಲೀಕರ ಅನುಮತಿಯಿಲ್ಲದೆ ಗ್ರಾಹಕರಿಗೆ ಯಾವುದೇ ಡಿಸ್ಕೌಂಟ್‌ಗಳನ್ನು ನೀಡಬಾರದು.
  • ಗ್ರಾಹಕರು ದೂರು ನೀಡಿದ ತಕ್ಷಣ ಹೋಟೆಲ್ ಖಾತೆಯಿಂದ ಹಣವನ್ನು ಕಡಿತಗೊಳಿಸಬಾರದು. ಮೊದಲು ವಿಚಾರಣೆ ನಡೆಸಬೇಕು.
  • ಆಹಾರ ಸಿದ್ಧವಾದ ನಂತರ ಆರ್ಡರ್ ಕ್ಯಾನ್ಸಲ್ ಆದರೆ, ಅದರ ನಷ್ಟವನ್ನು ಹೋಟೆಲ್ ಮಾಲೀಕರು ಭರಿಸಬಾರದು
  • ಜಾಹೀರಾತು ಶುಲ್ಕಗಳು ಮತ್ತು ಪೇಮೆಂಟ್ ಗೇಟ್‌ವೇ ಫೀಸ್‌ಗಳಲ್ಲಿ ಪಾರದರ್ಶಕತೆ ಇರಬೇಕು. ಪ್ರತಿಯೊಂದು ಕಡಿತದ ಬಗ್ಗೆ ವಿವರವಾದ ವರದಿ ನೀಡಬೇಕು.
  • ಕಂಪನಿಯು ತನಗೆ ಇಷ್ಟ ಬಂದಂತೆ ಒಪ್ಪಂದದ ನಿಯಮಗಳನ್ನು ಬದಲಿಸಬಾರದು
  • ಪ್ರತಿಯೊಂದು ರೆಸ್ಟೋರೆಂಟ್‌ಗೆ ಸಮಸ್ಯೆಗಳನ್ನು ಆಲಿಸಲು ಒಬ್ಬರು ಮೀಸಲಾದ ಅಧಿಕಾರಿಯನ್ನು ನೇಮಿಸಬೇಕು

1 ಲಕ್ಷದ ವ್ಯವಹಾರ ಮಾಡಿದರೆ ಕೈಗೆ ಸಿಗುವುದು 40 ಸಾವಿರ ಮಾತ್ರ!

ಬೆಂಗಳೂರು ಹೋಟೆಲ್ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಪಿ.ಸಿ. ರಾವ್ ಈ ಬಗ್ಗೆ ಮಾತನಾಡಿ, ಸ್ವಿಗ್ಗಿ ಮಾಡುತ್ತಿರುವ ಕಡಿತಗಳು ಹೋಟೆಲ್ ಉದ್ಯಮವನ್ನು ಹಳ್ಳ ಹಿಡಿಸುತ್ತಿವೆ. ಒಬ್ಬ ಹೋಟೆಲ್ ಮಾಲೀಕ ಸ್ವಿಗ್ಗಿ ಮೂಲಕ 1 ಲಕ್ಷ ರೂಪಾಯಿ ವ್ಯವಹಾರ ಮಾಡಿದರೆ, ಕಮಿಷನ್, ಡಿಸ್ಕೌಂಟ್ ಮತ್ತು ಇತರ ಕಡಿತಗಳ ನಂತರ ಆತನ ಕೈಗೆ ಸಿಗುವುದು ಕೇವಲ 40,000 ರೂಪಾಯಿ ಮಾತ್ರ. ಉಳಿದ 60,000 ರೂಪಾಯಿ ಸ್ವಿಗ್ಗಿ ಪಾಲಾಗುತ್ತಿದೆ. ಇದು ಹೋಟೆಲ್ ಮಾಲೀಕರಿಗೆ ಮಾತ್ರವಲ್ಲ, ಗ್ರಾಹಕರಿಗೂ ಹೊರೆಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಒಗ್ಗಟ್ಟಾದ ಹೋಟೆಲ್ ಸಂಘಟನೆಗಳು

ಈ ಹೋರಾಟಕ್ಕೆ ಬೆಂಗಳೂರು ಹೋಟೆಲ್ ಸಂಘ ಮಾತ್ರವಲ್ಲದೆ ಕರ್ನಾಟಕ ಹೋಟೆಲ್ ಸಂಘ ಮತ್ತು ನ್ಯಾಷನಲ್ ರೆಸ್ಟೋರೆಂಟ್ ಮತ್ತು ಬಾರ್ ಅಸೋಸಿಯೇಷನ್ ಕೂಡ ಕೈಜೋಡಿಸಿವೆ. ಸ್ವಿಗ್ಗಿ ಮ್ಯಾನೇಜ್‌ಮೆಂಟ್ ಆಗಸ್ಟ್ 15ರೊಳಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ, ನಗರದ ಎಲ್ಲಾ ಹೋಟೆಲ್‌ಗಳು ಸ್ವಿಗ್ಗಿ ವೇದಿಕೆಯಿಂದ ಹೊರಬರಲಿವೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ 'ಜೊಮ್ಯಾಟೋ' (Zomato) ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಆಗಸ್ಟ್ 15ರ ಗಡುವು ಸಮೀಪಿಸುತ್ತಿದ್ದು, ಸ್ವಿಗ್ಗಿ ಕಂಪನಿಯು ಹೋಟೆಲ್ ಮಾಲೀಕರ ಬೇಡಿಕೆಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಒಂದು ವೇಳೆ ಬಹಿಷ್ಕಾರ ನಡೆದರೆ ಬೆಂಗಳೂರಿನ ಸಾವಿರಾರು ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದು ಕಷ್ಟವಾಗಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂತಿರಾ? ವೈರಲ್ 'ಸ್ನೇಹಪಾನ' ಟ್ರೆಂಡ್ ಬಗ್ಗೆ ವೈದ್ಯರು ಹೇಳೋದೇನು?
ಬಿಸಿಯಾದ ಆಹಾರ ಫ್ರಿಡ್ಜ್‌ನಲ್ಲಿ ಇಡುತ್ತೀರಾ? ಹಾಗಿದ್ರೆ ನೀವು ಭಾರೀ ಗಂಡಾಂತರಕ್ಕೆ ಸಿಕ್ಕಿಹಾಕಿಕೊಳ್ತೀರಾ, ಎಚ್ಚರ!